ಇತ್ತೀಚೆಗೆ ಬಿಯರ್`ಗಳ ರೇಟು ಹೆಚ್ಚಾಗಿದೆ. ಹೊಸ ಸರ್ಕಾರ ಬಂದ ಕೂಡಲೇ ಗ್ಯಾರಂಟಿ ಸ್ಕೀಮಿಗಾಗಿ ಮದ್ಯದ ದರ ಏರಿಕೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ವಿಚಿತ್ರವೆಂದರೆ ರಾಜ್ಯ ಸರ್ಕಾರ ಮೊದ ಮೊದಲು ಹಾಂಹೂಂ ಎನ್ನಲಿಲ್ಲ. ಆದರೆ ಪ್ರತಿಪಕ್ಷ ಬಿಜೆಪಿ ಮಾತ್ರ ಎಂದಿನಂತೆ ಆತುರದಲ್ಲಿ ಹೇಳಿಕೆ ಕೊಟ್ಟು, ಇದು ರಾಜ್ಯ ಸರ್ಕಾರದ ಬೆಲೆ ಏರಿಕೆ ಎಂದು ಉಯಿಲಿಟ್ಟಿತು. ವಾಸ್ತವವೆಂದರೆ ಬಿಯರ್ ಕಂಪೆನಿಗಳೇ ಬೆಲೆ ಏರಿಕೆ ಮಾಡಿದ್ದವು. ಅದು ಪ್ರತಿವರ್ಷದ ಜೂನ್ ತಿಂಗಳಲ್ಲಿ ನಡೆಯುವ ರೆಗ್ಯುಲರ್ ಪ್ರಕ್ರಿಯೆ. ಆದರೆ ಇದೀಗ ರಾಜ್ಯ ಸರ್ಕಾರ ಬೆಲೆ ಏರಿಕೆಯ ಸೂಚನೆ ಕೊಟ್ಟಿದೆ. ಅಬಕಾರಿ ಸುಂಕವನ್ನು 5 ರೂ. ಹೆಚ್ಚಿಸುವ ಸುಳಿವು ನೀಡಿದ್ದು, ಮದ್ಯಮಾರಾಟಗಾರರು ಈ ಬಗ್ಗೆ ನಿರೀಕ್ಷೆ ಮಾಡಿದ್ದಾರೆ.
ಅಂದಹಾಗೆ ಗ್ಯಾರಂಟಿ ಸ್ಕೀಮುಗಳಿಗೆ ಪ್ರತಿ ವರ್ಷ 60 ಸಾವಿರ ಕೋಟಿ ಬೇಕು. ಈ 60 ಸಾವಿರ ಕೋಟಿಯನ್ನು ಎಲ್ಲಿಂದ ತರಬೇಕು ಎಂಬ ಪ್ರಶ್ನೆಗೆ ಮೊದಲ ಉತ್ತರವೇ ಅಬಕಾರಿ ಇಲಾಖೆ. ಜುಲೈ 7ರಂದು ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಲಿದ್ದು, ಅಬಕಾರಿ ಸುಂಕವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಅದಲ್ಲದೇ ಮದ್ಯ ಮಾರಾಟದಿಂದ ಸಂಗ್ರಹವಾಗುವ ಆದಾಯದ ಗುರಿಯನ್ನು 35,000 ರೂ.ನಿಂದ 40,000 ಕೋಟಿ ರೂ.ಗೆ ಏರಿಸುವ ಚಿಂತನೆಯಿದೆ. ಅಂದರೆ ಸುಮಾರು 5 ಸಾವಿರ ಕೋಟಿ ಹಣವನ್ನು ಈ ಇಲಾಖೆಯಿಂದಲೇ ಪಡೆಯುವ ನಿರೀಕ್ಷೆ ಇದೆ.
ಅಬಕಾರಿ ಇಲಾಖೆಯು ಯಾವಾಗಲೂ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದು ಕೊಡುವ ಇಲಾಖೆ. 2021-22ರಲ್ಲಿ ಕೊರೊನಾದಿಂದ ಉಂಟಾದ ಆರ್ಥಿಕತೆ ಸಂಕಷ್ಟವನ್ನು ಸರಿದೂಗಿಸಲು ಎರಡು ಬಾರಿ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಮದ್ಯ ಮಾರಾಟದ ಗುರಿಯನ್ನು 27,000 ಕೋಟಿ ರೂ.ಗೆ ಹೆಚ್ಚಿಸಿದ್ದರು. ರೆಸ್ಪಾನ್ಸ್ ಚೆನ್ನಾಗಿಯೇ ಇತ್ತು. ಮದ್ಯ ಮಾರಾಟದ ಗುರಿಯನ್ನು 29,000 ಕೋಟಿ ರೂ.ಗೆ ಹೆಚ್ಚಿಸಿದ್ದರು. ಕೊನೆಗೆ ಅಬಕಾರಿ ಇಲಾಖೆ 32,000 ಕೋಟಿ ರೂ. ಆದಾಯವನ್ನು ತಂದುಕೊಟ್ಟಿತ್ತು.ಅಂದರೆ ಟಾರ್ಗೆಟ್‍ನ್ನು ಮೀರಿದ ಲಾಭ. ಸುಮಾರು 4 ಸಾವಿರ ಕೋಟಿ ಆದಾಯ ತಂದುಕೊಟ್ಟಿತ್ತು. ಅದಾದ ಮೇಲೆ ನಿರೀಕ್ಷೆಯಂತೆಯೇ 35 ಸಾವಿರ ಕೋಟಿಗೆ ಗುರಿ ಏರಿಸಿದ್ದರು ಬೊಮ್ಮಾಯಿ. ಆ ಗುರಿಯನ್ನೇ ಈಗ ಸಿಎಂ ಸಿದ್ದರಾಮಯ್ಯ ಶೇ.11ರಷ್ಟು ಹೆಚ್ಚಿಸಲಿದ್ದಾರಂತೆ. ಸದ್ಯ ತಿಂಗಳಿಗೆ ಸರಾಸರಿ 47 ಲಕ್ಷ ದೇಸಿ ಮದ್ಯ (ಪ್ರತಿ ಕೇಸ್ಗೆ 8.6 ಲೀಟರ್) ಹಾಗೂ 35 ಲಕ್ಷ ಬಿಯರ್ (ಪ್ರತಿ ಕೇಸ್ಗೆ 7.8 ಲೀಟರ್) ಮಾರಾಟವಾಗುತ್ತಿದೆ.
ಸದ್ಯ ಬಿಯರ್ ಮೇಲೆ ಶೇ.175ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಬಿಯರ್ ಮೇಲಿನ ಸುಂಕ ಹೆಚ್ಚಳ ಕಡಿಮೆಯಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಣಕಾಸಿನ ತೀವ್ರ ಅಗತ್ಯ ಇರುವುದರಿಂದ ಮದ್ಯ ಮಾರಾಟಕ್ಕೆ ಹೊಸ ಪರವಾನಗಿಗಳನ್ನು ನೀಡುವ ಹಾಗೂ ಮದ್ಯ ಖರೀದಿಗೆ ಇರುವ ಕನಿಷ್ಠ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜೊತೆಗೆ ಈ ಎಲ್ಲವುಗಳ ಜೊತೆ ಅಬಕಾರಿ ಸುಂಕವನ್ನು ಮತ್ತೆ 5 ರೂ. ಹೆಚ್ಚಿಸುವ ಪ್ರಸ್ತಾಪವೂ ಇದೆಯಂತೆ.



