ಈ ಹಿಂದೆ ನಡೆಸಿದ್ದ ಸಮೀಕ್ಷೆ ವೈಜ್ಞಾನಿಕವಾಗಿಲ್ಲ. ಹೊಸದಾಗಿ ಮಾಡಿ. ನಮ್ಮದೇ ಸಮುದಾಯದ ಹಲವರ ಮನೆಗೆ ಅಧಿಕಾರಿಗಳೇ ಹೋಗಿಲ್ಲ. ವೀರಶೈವ ಮಹಾಸಭಾದ ಅನೇಕ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಭೆಗಳಲ್ಲಿ ಈ ಸಮೀಕ್ಷೆಯ ಬಗ್ಗೆ ಪ್ರಸ್ತಾಪಿಸಿದಾಗ ಅನೇಕರು ತಮ್ಮ ಮನೆಗೆ ಸರ್ಕಾರಿ ಅಧಿಕಾರಿಗಳು ಬಂದಿಲ್ಲ. ತಮ್ಮ ಕುಟುಂಬದ ಯಾವುದೇ ಮಾಹಿತಿ ಪಡೆದಿಲ್ಲ. ಕಚೇರಿಯಲ್ಲಿಯೇ ಕುಳಿತು ಈ ಸಮೀಕ್ಷಾ ವರದಿ ಸಿದ್ಧಪಡಿಸಿ ಕಳುಹಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಕಾರಣ ನೀಡಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೊಸದಾಗಿ ಜಾತಿ ಗಣತಿ ಮಾಡುವಂತೆ ಆಗ್ರಹಿಸಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸಚಿವರಾದ ಎಂ. ಬಿ. ಪಾಟೀಲ್, ಈಶ್ವರ್ ಖಂಡ್ರೆ, ಅಥಣಿ ವೀರಣ್ಣ, ಅಣಬೇರು ರಾಜಣ್ಣ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಜಾತಿ ಗಣತಿ ವಿರೋಧಿಸಿದ್ದಾರೆ.
ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆದಾಗ ನಮ್ಮ ವೀರಶೈವ ಲಿಂಗಾಯತ ಸಮುದಾಯದ ಬಹುಪಾಲು ಜನರು ತಮಗೆ ಲಭಿಸುವ ಮೀಸಲಾತಿಯಲ್ಲಿ ಅನಾಯವಾಗುತ್ತದೆ ಎಂಬ ಭಯದಿಂದ ವೀರಶೈವ ಅಥವಾ ಲಿಂಗಾಯತ ಎಂದು ಬರೆಸದ ತಮ್ಮ ಒಳಪಂಗಡಗಳನ್ನು ನಮೂದಿಸಿದ್ದಾರೆ. ಅಂತೆಯೇ ಕರ್ನಾಟಕದಲ್ಲಿರುವ ಹಲವರು ತಮ್ಮ ಜಾತಿಯ ಕುರಿತಂತೆ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ , ನಿಜವಾಗಿಯೂ ಅವರು ಆ ಜಾತಿ, ಸಮುದಾಯಕ್ಕೆ ಸೇರಿದವರೇ ಎಂಬ ಸತ್ಯಾಸತ್ಯತೆ ಅರಿಯಲು ಯಾವುದೇ ಪರಿಶೀಲನೆ ಅಥವಾ ಪರಾಮರ್ಶೆ ಆಗಿಲ್ಲ.ಹೀಗಾಗಿ ಈ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯಲ್ಲೇ ದೋಷವಿದೆ ಎಂದು ಹೇಳಿದೆ ವೀರಶೈವ ಮಹಾಸಭಾ.
ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ 8 ವರ್ಷದಷ್ಟು ಹಳೆಯದಾಗಿದೆ. ಇದನ್ನು ಯಥಾವತ್ ಅಂಗೀಕರಿಸುವುದು ಸೂಕ್ತ ಅಲ್ಲ. 10 ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಸೇರಿಸಿ ಸಂಪೂರ್ಣ ವೈಜಾನಿಕವಾಗಿ ಹೊಸದಾಗಿ ಜಾತಿ ಜನಗಣತಿ ನಡೆಸಿ ವಾಸ್ತವಾಂಶ ಆಧಾರಿತವಾಗಿ ಅಂಕಿ – ಅಂಶಗಳನ್ನು ದಾಖಲಿಸಿದರೆ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ ವೀರಶೈವ ಲಿಂಗಾಯತ ಮಹಾಸಭಾ.
ಸದ್ಯಕ್ಕೆ ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದಾಗ ನಡೆಸಿರುವ ಜಾತಿ ಗಣತಿ ಸಮೀಕ್ಷೆಯನ್ನು ಒಪ್ಪಿರುವುದು ಮಲ್ಲಿಕಾರ್ಜುನ ಖರ್ಗೆ, ಸತೀಶ್ ಜಾರಕಿಹೊಳಿ, ಮಹದೇವಪ್ಪ ಸೇರಿದಂತೆ ಕಾಂಗ್ರೆಸ್ಸಿನ ಕೆಲವೇ ಮುಖಂಡರು ಮಾತ್ರ. ಸರ್ಕಾರದಲ್ಲಿಯೇ ಇರುವ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಒಕ್ಕಲಿಗ ಸಚಿವರು ಹಾಗೂ ಶಾಸಕರೂ ಹಳೆಯ ಯಥಾವತ್ ಸಮೀಕ್ಷೆ ವೈಜ್ಞಾನಿಕವಾಗಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ಧಾರೆ. ಈಗ ವೀರಶೈವ ಲಿಂಗಾಯತ ಸಚಿವರು ಹಾಗೂ ಶಾಸಕರು ಕೂಡಾ ವಿರೋಧಿಸಿದ್ಧಾರೆ. ಎಲ್ಲರ ಆಕ್ಷೇಪವೂ ಒಂದೇ. ಆಗ ನಡೆದಿದ್ದ ಸಮೀಕ್ಷೆ, ಸಮೀಕ್ಷೆಯೇ ಅಲ್ಲ. ಕಚೇರಿಯಲ್ಲಿಯೇ ಕುಳಿತು ವರದಿ ಸಿದ್ಧ ಮಾಡಿದ್ದಾರೆ ಎನ್ನುವುದು. ಹೀಗಾಗಿಯೇ ಬಹುತೇಕರು ಆ ಸಮೀಕ್ಷೆಯನ್ನು ಒಪ್ಪುತ್ತಿಲ್ಲ.



