ಈ ಬಾರಿ ನಡೆಯಲಿರುವ ಜಾತಿ ಸಮೀಕ್ಷೆ ನೂರಾರು ಗೊಂದಲಗಳನ್ನು ಹುಟ್ಟುಹಾಕಿದೆ. ಸರ್ಕಾರ ಹೊಸದಾಗಿ 46 ಜಾತಿಗಳನ್ನು ಗುರುತಿಸಿದೆ. ಹಿಂದೂಗಳ ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಎಂದೂ ಸೇರಿಸಿ ಹೊಸ ಜಾತಿಗಳನ್ನು ಆದೇಶ ಮಾಡಿದೆ. ಸರ್ಕಾರದ ದಾಖಲೆಗಳಲ್ಲಿ ಇದೆ ಎಂದಾದರೆ, ಅದು ಸರ್ಕಾರ ಅಧಿಕೃತವಾಗಿ ʻಆ ಜಾತಿಗಳನ್ನು ಒಪ್ಪಿಕೊಂಡಂತೆʼ ಅಲ್ಲವೇ ಎಂಬುದು ಹಲವು ಜಾತಿಗಳವರ ಪ್ರಶ್ನೆ. ಗೌಡ, ಲಿಂಗಾಯತ, ಬ್ರಾಹ್ಮಣ, ಕುರುಬ ಅಷ್ಟೇ ಅಲ್ಲ, ದಲಿತರಲ್ಲೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದವರು ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ಲಿಂಗಾಯತರ ಸಮಸ್ಯೆಯೇ ಬೇರೆ. ಅವರು ಈಗ ಪರಿಹಾರ ಹುಡುಕಿಕೊಂಡು ಯಡಿಯೂರಪ್ಪ ಮನೆಗೆ ಬಂದಿದ್ದಾರೆ.
ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎನ್ನುವುದು ಕೆಲವರ ವಾದ. ಇನ್ನೂ ಕೆಲವರು ವೀರಶೈವ ಲಿಂಗಾಯತ ಒಂದೇ. ನಾವು ಹಿಂದೂಗಳಲ್ಲ, ನಮ್ಮದೇ ಪ್ರತ್ಯೇಕ ಧರ್ಮ ಎನ್ನುತ್ತಿದ್ದಾರೆ. ಇನ್ನೂ ಕೆಲವರು ನಮ್ಮದು ಲಿಂಗಾಯತ ಧರ್ಮ ಎನ್ನುತ್ತಿದ್ದಾರೆ. ಮತ್ತೂ ಕೆಲವರು ಧರ್ಮ ಹಿಂದೂ. ಜಾತಿ ಲಿಂಗಾಯತ ವೀರಶೈವ ಎಂದು ಹೇಳುತ್ತಿದ್ದಾರೆ. ಈ ಕುರಿತು ಎದ್ದಿರುವ ಗೊಂದಲಕ್ಕೆ ಉತ್ತರ ಹುಡುಕಿರುವುದು ಯಡಿಯೂರಪ್ಪ ಅವರ ಮನೆಯಲ್ಲಿ.
ಕೇಂದ್ರ ಮಾಜಿ ಸಚಿವರಾದ ಜಿ.ಎಂ.ಸಿದ್ದೇಶ್ವರ್, ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ್ ಕೋರೆ, ವಿಜಯ್ ಸಂಕೇಶ್ವರ್ ಸೇರಿದಂತೆ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ಸಮಾಜದ ಮುಖಂಡರು, ಹಾಗೂ ಪ್ರಮುಖರು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದಾರೆ. ಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವರು ವಿ ಸೋಮಣ್ಣ ಸೇರಿದಂತೆ ಸಂಸದರು, ಶಾಸಕರು ಹಾಗೂ ಪ್ರಮುಖರ ಸಭೆಯಲ್ಲಿ ಭಾಗವಹಿಸಿ, ಯಡಿಯೂರಪ್ಪ ಮಾರ್ಗದರ್ಶನ ಕೇಳಿದ್ದಾರೆ.
ಕೊನೆಗೆ ಯಡಿಯೂರಪ್ಪ ಈ ಕುರಿತು ಸಮುದಾಯದ ಸ್ವಾಮೀಜಿಗಳು ನೀಡುವ ಸೂಚನೆಯನ್ನು ಪಾಲಿಸುವಂತೆ ನಿರ್ಧರಿಸಿದ್ದಾರೆ. ಜಾತಿ ಗಣತಿ ಹೆಸರಿಲ್ಲಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ಬಿರುಕು ಮೂಡಿಸುವ ಕುತಂತ್ರ ನಡೆಸುತ್ತಿದೆ. ಇದರ ವಿರುದ್ದ ಲಿಂಗಾಯತರು ಒಂದಾಗಬೇಕು ಎಂಬ ಸಂದೇಶ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವೀರಶೈವ ಸಮುದಾಯದ ಒಳ ಪಂಗಡಗಳ ನಡುವೆ ಧರ್ಮದ ಹೆಸರಿನಲ್ಲಿ ಈ ಹಿಂದೆಯೂ ಕಿಚ್ಚು ಹಚ್ಚಿಸುವ ಕೀಳು ಕಾರ್ಯಕ್ಕೆ ಇಳಿದಿದ್ದನ್ನು ಸಮುದಾಯ ಮರೆತಿಲ್ಲ, ತನ್ನ ಚಾಳಿಯನ್ನು ಇನ್ನೂ ಬಿಡದ ಕಾಂಗ್ರೆಸ್ ಸರ್ಕಾರ ಸಮುದಾಯದ ನಡುವೆ ಗೊಂದಲ ಮೂಡಿಸುವುದನ್ನು ಪ್ರಮುಖ ಕಾರ್ಯ ಸೂಚಿಯನ್ನಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಒಗ್ಗಟ್ಟು ಕಾಯ್ದುಕೊಳ್ಳಲು ಅನಗತ್ಯ ಗೊಂದಲ ಮೂಡಿಸುವ ಚಟುವಟಿಕೆಗಳಿಗೆ ಇತಿಶ್ರೀ ಹಾಡಲು ಸಮಾಜ ಒಗ್ಗಟ್ಟು ಪ್ರದರ್ಶಿಸುವುದು, ಜಾತಿ ಸಮೀಕ್ಷೆಯ ಹೆಸರಿನಲ್ಲಿ ಗೊಂದಲ ಮೂಡಿಸುವ ಕುತಂತ್ರವನ್ನು ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ಸಮುದಾಯದ ವಿವಿಧ ಮಠಾಧೀಶರು ಹಾಗೂ ಹರಗುರು ಚರಮೂರ್ತಿಗಳ ಮಾರ್ಗದರ್ಶನದಲ್ಲಿ ಒಟ್ಟಾಗಿ ಮುನ್ನಡೆಯಲು ತೀರ್ಮಾನಿಸಲಾಯಿತು ಎಂದು ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರೂ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಲ್ಲದಿರುವ ಜಾರಿ ಸೇರಿಸಿ ಜಾತಿ ನಡುವೆ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ರೊಟ್ಟಿ ಸುಟ್ಡು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ಧಾರೆ.
ಬೊಮ್ಮಾಯಿ ಕೇಳಲಿದ ಟೆಕ್ನಿಕಲ್ ಪ್ರಶ್ನೆಗಳು
ದೇಶ ಒಪ್ಪಿಕೊಂಡಿರುವುದು ಒಟ್ಟು 6 ಧರ್ಮ. 7ನೇ ಆಯ್ಕೆಯಾಗಿ ನಾಸ್ತಿಕ ಎಂದು ಸೇರಿಸಿರುವುದು ಯಾಕೆ..? ನಾಸ್ತಿಕರಿಗೆ ಧರ್ಮ ಇಲ್ಲ.
ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಲಿಂಗಾಯತ ಅಂತ ಯಾಕೆ ಕಾಲಂ ಮಾಡಿದ್ದಾರೆ. ಮತಾಂತರ ಹೊಂದಿದವರಿಗೆ ಪ್ರತ್ಯೇಕ ಕಾಲಂ ಮಾಡಬೇಕು ಅಂತ ಯಾವ ಸಂವಿಧಾನದಲ್ಲಿ ಹೇಳಿದೆ ಎಂದು ಕೇಳಿದ್ದಾರೆ.



