ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಎಂಬಂತಹ ಫಲಿತಾಂಶ ಬಂದಿದೆ. ಇದು ಎಲ್ಲಿರಗೂ ಅನ್ವಯಿಸುತ್ತದೆ. ಹೌದು, ಈ ಫಲಿತಾಂಶ ಬಿಜೆಪಿಗೂ ಅನಿರೀಕ್ಷಿತ. ಕಾಂಗ್ರೆಸ್ಸಿಗೂ ಅನಿರೀಕ್ಷಿತ. ಅದರಲ್ಲೂ ವಿಶೇಷವಾಗಿ ಲಿಂಗಾಯತರು ಹೆಚ್ಚಿರುವ ಪ್ರದೇಶಗಳ ಲೆಕ್ಕ ನೋಡಿದಾಗ ಮತದಾರರು.. ಅದರಲ್ಲೂ ಲಿಂಗಾಯತರ ಮತಗಳು ಎರಡೂ ಪಕ್ಷಗಳ ಮಧ್ಯೆ ಹರಿದು ಹಂಚಿ ಹೋಗಿವೆ.
1998ರ ನಂತರ 2004ರಲ್ಲಿ ಲಿಂಗಾಯತರು ಒಗ್ಗಟ್ಟಾಗಿ ಮತ ಚಲಾಯಿಸಿದ್ದರು. ಆನಂತರ ಅದು ಹೆಚ್ಚುತ್ತಲೇ ಹೋಗಿತ್ತು. 2019ರಲ್ಲಂತೂ ತುತ್ತತುದಿ ತಲುಪಿತ್ತು. ಹೀಗಾಗಿಯೇ ಬಿಜೆಪಿ ಏಕಾಂಗಿಯಾಗಿ 25 ಸ್ಥಾನ ಗೆದ್ದಿತ್ತು. ಲಿಂಗಾಯತರ ಭದ್ರಕೋಟೆಗಳಲ್ಲಿ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಅಂತರ 1ರಿಂದ 3 ಲಕ್ಷ ಇತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಆ ಗೆಲುವಿನ ಅಂತರ ಕಡಿಮೆಯಾಗಿದೆ.
ಇನ್ನು ಕ್ಷೇತ್ರವಾರು ಬಂದರೆ.. ಮುಂಬೈ ಕರ್ನಾಟಕದಲ್ಲಿ (ಕಿತ್ತೂರು ಕರ್ನಾಟಕ) ಬಿಜೆಪಿ ಒಂದು ಹಂತಕ್ಕೆ ಹಿಡಿತ ಸಾಧಿಸಿದ್ದರೆ, ಹೈದರಾಬಾದ್ ಕರ್ನಾಟಕದಲ್ಲಿ (ಕಲ್ಯಾಣ ಕರ್ನಾಟಕ) ಲಿಂಗಾಯತರು ಕಾಂಗ್ರೆಸ್ಸಿಗೆ ಶಿಫ್ಟ್ ಆಗಿದ್ಧಾರೆ. ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ.
ಕಾಂಗ್ರೆಸ್ ಗೆದ್ದಿರುವ 9 ಕ್ಷೇತ್ರಗಳಲ್ಲಿ 5 ಲಿಂಗಾಯತರ ಪ್ರಾಬಲ್ಯ ಇರುವ ಹೈದರಾಬಾದ್ ಕರ್ನಾಟಕ ಪ್ರಾಂತ್ಯದವು. ಬೀದರ್, ಕಲ್ಬುರ್ಗಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ. ಇನ್ನು ಮುಂಬೈ ಕರ್ನಾಟಕದ ಚಿಕ್ಕೋಡಿ ಮತ್ತು ಮಧ್ಯ ಕರ್ನಾಟಕದ ದಾವಣಗೆರೆ ಕ್ಷೇತ್ರಗಳೂ ಕೂಡಾ ಲಿಂಗಾಯತರ ಪ್ರಾಬಲ್ಯ ಇರುವ ಕ್ಷೇತ್ರಗಳೇ. ಇಲ್ಲೆಲ್ಲ ಗೆದ್ದಿರುವುದು ಕಾಂಗ್ರೆಸ್. ಅಂದರೆ ಕಾಂಗ್ರೆಸ್ ಗೆದ್ದಿರುವ 9ರಲ್ಲಿ 7 ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯ ಇದೆ. ಅಷ್ಟೇ ಏಕೆ, ಬಿಜೆಪಿಯ ಲಿಂಗಾಯತ ಶಾಸಕರಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಲೀಡ್ ಪಡೆದುಕೊಂಡಿದೆ.
ಕಳೆದ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನೇ ಕಲ್ಬುರ್ಗಿಯಲ್ಲಿ ಸೋಲಿಸಿತ್ತು. ಈ ಬಾರಿ ಅಲ್ಲಿ ಒಂದು ಗಲಾಟೆ ನಡೆದು, ಕಾಂಗ್ರೆಸ್ ವಿರುದ್ಧ ಲಿಂಗಾಯತರು ಹೋರಾಟ ನಡೆಸಿದರಾದರೂ.. ಗೆದ್ದಿದ್ದು ಕೊನೆಗೆ ಖರ್ಗೆ ಅವರ ಅಳಿಯ ರಾಧಾಕೃಷ್ಣ.
ಬಿಜೆಪಿಗೆ ವರ್ಕ್ ಆಗಿದ್ದು ಜಗದೀಶ್ ಶೆಟ್ಟಿರ್ ಸ್ಪರ್ಧಿಸಿದ್ದ ಬೆಳಗಾವಿಯಲ್ಲಿ ಮಾತ್ರ. ಉಳಿದಂತೆ ದೊಡ್ಡ ಪಕ್ಷವಾಗಿರುವ ಬಿಜೆಪಿ 17ರಲ್ಲಿ ಗೆದ್ದಿದೆಯಾದರೂ.. ಅಲ್ಲಿ ಗೆಲುವನ್ನು ನಿರ್ಧರಿಸಿದ್ದು ಲಿಂಗಾಯತರ ಜೊತೆಗೆ ಒಕ್ಕಲಿಗರು. ಮೈಸೂರು ಭಾಗದಲ್ಲಿ ಲಿಂಗಾಯತರು ಬಿಜೆಪಿಯಿಂದ ದೂರವಾಗಿದ್ದರೂ.. ಅಳಿದುಳಿದ ಲಿಂಗಾಯತರ ಜೊತೆ ಒಕ್ಕಲಿಗರೂ ವೋಟು ಹಾಕಿದ ಪರಿಣಾಮ, ಬಿಜೆಪಿ 17ರಲ್ಲಿ ಗೆಲ್ಲುವಂತಾಯ್ತು.
ಬಿಜೆಪಿ ಗೆದ್ದ ಮೈಸೂರು, ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ಬೆಂಗಳೂರಿನ 4 ಕ್ಷೇತ್ರಗಳಲ್ಲಿ ಬಿಜೆಪಿ ಮತದಾರರ ಜೊತೆ ಜೆಡಿಎಸ್ ಮತದಾರರೂ ಕೈಜೋಡಿಸಿದರು. ಕರಡಿ ಸಂಗಣ್ಣ ಅವರಿಗೆ ಟಿಕೆಟ್ ಕೊಡದೇ ಹೋಗಿದ್ದು, ಬಿಜೆಪಿ ಮಾಡಿಕೊಂಡ ಇನ್ನೊಂದು ಪ್ರಮಾದ. ಯತ್ನಾಳ್ ಕೂಡಾ ಈ ಭಾಗದಲ್ಲಿ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಉಳಿದಂತೆ ವೀಣಾ ಕಾಶಪ್ಪನವರ್ ಅವರಿಗೇ ಟಿಕೆಟ್ ಕೊಟ್ಟಿದ್ದರೆ, ಅಲ್ಲಿಯೂ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚು ಇರುತ್ತಿತ್ತು. ಇದ್ದುದರಲ್ಲಿ ಬಿಜೆಪಿಯಿಂದ ದೂರವಾಗುತ್ತಿದ್ದ ಲಿಂಗಾಯತರ ವೋಟುಗಳನ್ನು ಮತ್ತೆ ಹಿಡಿದು ಕೂರಿಸಿದು ನೇಹಾ ಹಿರೇಮಠ್ ಹತ್ಯೆ ಎನ್ನುವುದು ವಿಪರ್ಯಾಸ.
ಲಿಂಗಾಯತರ ಈ ಬಿಕ್ಕಟ್ಟು.. ಒಗ್ಗಟ್ಟು ಕೈತಪ್ಪುತ್ತಿರುವ ಕಾರಣ ಏನು..?
ಲಿಂಗಾಯತರಲ್ಲಿ 150ಕ್ಕೂ ಹೆಚ್ಚು ಪಂಗಡಗಳಿದ್ದರೂ, ಪ್ರತ್ಯೇಕತೆ ಕಾಣುತ್ತಿರಲಿಲ್ಲ. ಅದು ತೀರಾ ವೈಯಕ್ತಿಕ ಸಂಬಂಧ ಬೆಳೆಸುವ ಮಟ್ಟದಲ್ಲಿ ಕೆಲಸ ಮಾಡುತ್ತಿತ್ತೇ ಹೊರತು, ಬಹುತೇಕ ಲಿಂಗಾಯತರ ಪಂಗಡಗಳಲ್ಲಿ ಕೊಟ್ಟು ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ, ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎಂಬ ವಾದವನ್ನು 2013ರ ಸರ್ಕಾರದಲ್ಲಿ ಆರಂಭಿಸಿದ್ದ ಕಾಂಗ್ರೆಸ್, ಆಗ ವಿಫಲವಾಯಿತಾದರೂ.. ಗಟ್ಟಿಯಾಗಿ ಬೇರು ಬಿಟ್ಟಿತು.
ಅದಾದ ಮೇಲೆ ಲಿಂಗಾಯತ ವೀರಶೈವ ಒಡೆಯುವುದರಲ್ಲಿ ವಿಫಲವಾದರೂ.. ಪಂಚಮಸಾಲಿ, ನೊಳಂಬ, ಸಾದರ.. ಹೀಗೆ ಲಿಂಗಾಯತರ ದೊಡ್ಡ ದೊಡ್ಡ ಜಾತಿಗಳು ಪ್ರತ್ಯೇಕವಾಗಿ ಗುರುತಿಸಿಕೊಳ್ಳೋಕೆ ಶುರು ಮಾಡಿದವು. ಇದೆಲ್ಲದರ ಪರಿಣಾಮ ಈ ಬಾರಿಯ ಚುನಾವಣೆಯಲ್ಲಿ ಎದ್ದು ಕಾಣುತ್ತಿದೆ. ಜಾತಿಗಳು ಒಟ್ಟಾಗಿದ್ದರೆ ಅದು ಯಾವುದಾದರೂ ಒಂದು ಪಕ್ಷಕ್ಕೆ ಲಾಭವಾಗುತ್ತದೆ. ಅದೇ ಜಾತಿಗಳು ಡಿವೈಡ್ ಆದರೆ.. ಆಗ ಹಲವರಿಗೆ ಲಾಭ.



