ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಪ್ರತ್ಯೇಕ ಲಿಂಗಾಯತ ಧರ್ಮದ ಗಲಾಟೆ ಮುನ್ನೆಲೆಗೆ ಬರುತ್ತದೆ. ಎಂದಿನಂತೆ ಈ ಬಾರಿಯೂ ವಿರೋಧಿಸಿರುವುದು ಈಶ್ವರ್ ಖಂಡ್ರೆ, ಶಾಮನೂರು ಮಲ್ಲಿಕಾರ್ಜುನ್ ಮಾತ್ರ. ಅದರಿಂದ ಸಿದ್ಧರಾಮಯ್ಯ ಅವರ ಕೂದಲೂ ಕೊಂಕುವುದಿಲ್ಲ. 2018ರಲ್ಲಿ ಅದೇ ಹೋರಾಟದಿಂದ ಏಟು ತಿಂದಿದ್ದ ಕಾಂಗ್ರೆಸ್ಸಿಗೆ, ಡಿಕೆ ಶಿವಕುಮಾರ್ ಬಹಿರಂಗ ಕ್ಷಮೆ ಕೇಳುವ ಮೂಲಕ ಡ್ಯಾಮೇಮ್ ಕಂಟ್ರೋಲ್ ಮಾಡುವ ಕೆಲಸ ಮಾಡಿದ್ದರು. ಈ ಬಾರಿ ಏನ್ ಮಾಡ್ತಾರೆ..?
ಲಿಂಗಾಯತ ಮತಗಳು ಒಟ್ಟಾಗಿರುವಷ್ಟೂ ಕಾಲ ಕಾಂಗ್ರೆಸ್ಸಿಗೆ ಲಾಭವಿಲ್ಲ ಎನ್ನುವುದು ರಾಜಕೀಯ ಬಲ್ಲವರಿಗೆ ಅರ್ಥವಾಗುವಂಥದ್ದು. 2013ರಲ್ಲಿ ಅಧಿಕಾರಕ್ಕೆ ಬಂದಾಗ ಎಂಬಿ ಪಾಟೀಲ್, ವಿನಯ್ ಕುಲಕರ್ಣಿ ಮತ್ತು ಕಾಶೆಪ್ಪನವರ ನೇತೃತ್ವದಲ್ಲಿ ಹೋರಾಟ ಮಾಡಿ, ನ್ಯಾ.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿತ್ತು. ಕೊನೆಗೆ ನಾಗಮೋಹನ್ ದಾಸ್, ಸಿದ್ಧರಾಮಯ್ಯ ಅವರ ಸೂಚನೆಯಂತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದ್ದರು. ಆಗಲೂ ಕಾಂಗ್ರೆಸ್ಸಿನಲ್ಲಿದ್ದ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ.. ಮೊದಲಾದವರು ವಿರೋಧಿಸಿದ್ದರು. ಈ ಬಾರಿಯೂ ವಿರೋಧಿಸಿದ್ದಾರೆ.
ಎಂದಿನಂತೆ ಸಿದ್ಧರಾಮಯ್ಯ ಪರ ಎಂಬಿ ಪಾಟೀಲ್, ಕಾಶೆಪ್ಪನವರ್ ಇದ್ದಾರೆ. ಈ ಬಾರಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಸಿದ್ಧಗಂಗಾ ಮಠದ ಸಿದ್ಧಗಂಗಾ ಶ್ರೀಗಳು ಕೂಡಾ ಸೇರಿರುವುದು ಅವರ ಹೋರಾಟಕ್ಕೆ ಹೊಸ ಅಸ್ತ್ರ ಕೊಟ್ಟಿದೆ. ಬಲ ತುಂಬಿದೆ. ಹೀಗಿರುವಾಗ ಡಿಕೆ ಶಿವಕುಮಾರ್ ಏನ್ ಮಾಡ್ತಾರೆ..?
ಅವರು ಕೇವಲ ಸಿದ್ಧರಾಮಯ್ಯ ಸರ್ಕಾರದಲ್ಲಿ ಮಂತ್ರಿಯಷ್ಟೇ ಅಲ್ಲ, ಉಪಮುಖ್ಯಮಂತ್ರಿಯೂ ಹೌದು. ಕೆಪಿಸಿಸಿ ಅಧ್ಯಕ್ಷರೂ ಹೌದು. ಸಿದ್ಧರಾಮಯ್ಯ ಸೇರಿದಂತೆ ಎಲ್ಲರ ಮೇಲೂ ಹಿಡಿತ ಇದೆ. ಇರುತ್ತದೆ. ಏಕೆಂದರೆ ಇವರು ಮಾಡುವ ಅನಾಹುತಕ್ಕೆ ಬೆಲೆ ತೆರಬೇಕಿರುವುದು ಪಕ್ಷ. ಹೀಗಾಗಿ ಡಿಕೆ ಶಿವಕುಮಾರ್ ಅವರಿಗೆ ಕೇಳುವ ಅಧಿಕಾರವೂ ಇದೆ. ತಪ್ಪಾಗಿದ್ದರೆ ಹೀಗೆ ಅಲ್ಲ.. ಹೀಗೆ ಮಾಡಿ ಎಂದು ಹೇಳುವ ಅಧಿಕಾರವೂ ಇದೆ.
ಆದರೆ.. ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ಲಗಾಮಿನಲ್ಲಿ ಇಲ್ಲ. ಮುಲಾಜಿನಲ್ಲೂ ಇಲ್ಲ. ಅವರಿಗೆ ಆದೇಶ ನೀಡುವಷ್ಟು ಶಕ್ತಿ, ಸಾಮರ್ಥ್ಯ ಡಿಕೆಗೂ ಇಲ್ಲ. ರಾಜಕೀಯವಾಗಿ ಸಿದ್ಧರಾಮಯ್ಯ ಎದುರು, ಡಿಕೆ ಶಿವಕುಮಾರ್ ವೀಕ್. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ಸಿದ್ಧರಾಮಯ್ಯ ಜೊತೆಗಿರುವ ಎಂಬಿ ಪಾಟೀಲ್ ಸೇರಿದಂತೆ ಕೆಲವರನ್ನು ಗದರಿಸಿ ಹೇಳುವ ಶಕ್ತಿಯೂ ಡಿಕೆಗೆ ಇಲ್ಲ. ಬಹಿರಂಗವಾಗಿ ತಾವೇ ಪವರ್ ಫುಲ್ ಎನ್ನುವಂತೆ ತೋರಿಸಿಕೊಂಡು ಹೋಗುತ್ತಿರುವ ಡಿಕೆ ಶಿವಕುಮಾರ್ ಅವರು, ನಮಗೂ ಒಂದು ಕಾಲ ಬರುತ್ತದೆ ಎಂದು ಕಾಯುತ್ತಿದ್ದಾರಷ್ಟೇ. ಡಿಕೆ ಶಿವಕುಮಾರ್ ಅವರ ಆರ್ಭಟ, ಠೇಂಕಾರ ಎಲ್ಲವೂ ನಡೆಯುವುದು ಸಿದ್ದು ಬಣದಲ್ಲಿ ಇಲ್ಲದ ನಾಯಕರು, ಶಾಸಕರ ಎದುರು ಮಾತ್ರ.
ಹೀಗಾಗಿ ʻಪ್ರತ್ಯೇಕ ಲಿಂಗಾಯತ ಧರ್ಮʼದ ವಿಷಯದಲ್ಲಿ ಡಿಕೆ ಮತ್ತೊಮ್ಮೆ ಕ್ಷಮೆ ಕೇಳಬಹುದು. ಆದರೆ ಹಾಗೆ ಕ್ಷಮೆ ಕೇಳುವುದಕ್ಕೆ ಎಲೆಕ್ಷನ್ ಹತ್ತಿರ ಬರಬೇಕು. ಅದೂವರೆಗೆ ಅವರೂ ಕ್ಯಾರೇ ಅನ್ನೋದಿಲ್ಲ.



