ಲಿಂಗಾಯತ ಅನ್ನೋದು ಜಾತಿಯೋ.. ಧರ್ಮವೋ.. ಎನ್ನುವ ವಾದ ವಿವಾದ ಹೋರಾಟಗಳು ನಡೆಯುತ್ತಿರುವಾಗಲೇ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಲಿಂಗಾಯತ ಅನ್ನೋದು ಜಾತಿ ಅಲ್ಲ ಎಂದು ಹೇಳಿಕೆ ನೀಡಿದ್ಧಾರೆ. ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಕಾರ ಲಿಂಗಾಯತ ಹಾಗೂ ಲಿಂಗಾಯತ ತನ ಎನ್ನುವುದು ಹುಟ್ಟಿನಿಂದ ಬರೋದಲ್ಲ, ಸಾಧನೆ ಮೂಲಕ ಬರುವುದು. ಅಂಗದ ಮೇಲೆ ಲಿಂಗ ಧರಿಸಿ ಪೂಜೆ ಮಾಡೋರು ಲಿಂಗಾಯತರು. ಅಪ್ಪ ಅಮ್ಮ ಲಿಂಗಾಯತರು ಎಂದ ಮಾತ್ರಕ್ಕೆ ಮಕ್ಕಳು ಲಿಂಗಾಯತರಾಗುವುದಿಲ್ಲ. ಲಿಂಗಸಾಧನೆ ಮೂಲಕ ಲಿಂಗಾಯತರು ಆಗುತ್ತಾರೆ.
ದಾವಣಗೆರೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಮತ್ತು ಶರಣ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಅನ್ನೋದು ಜಾತಿ ಅಲ್ಲ. ಬಹಳ ಹಿಂದಿನಿಂದಲೂ ನಾವು ಲಿಂಗಾಯತರು, ಲಿಂಗಾಯತರು ಅಂತ ಹೇಳ್ಕೊಂಡು ಬಂದಿದ್ದೀವಿ. ಲಿಂಗಾಯತ ಅನ್ನೋದು ತತ್ವ, ಅದೊಂದು ಸಿದ್ಧಾಂತವಾಗಿದೆ. ಆ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳೋರು ಲಿಂಗಾಯತರು ಆಗಿದ್ದಾರೆ. ಅಂಗದ ಮೇಲೆ ಲಿಂಗ ಧರಿಸಿ ಪೂಜೆ ಮಾಡೋರು ಮಾತ್ರ ಲಿಂಗಾಯತರು ಆಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲಿಂಗಾಯತ ಹಾಗೂ ಲಿಂಗಾಯತ ತನ ಎನ್ನುವುದು ಹುಟ್ಟಿನಿಂದ ಬರೋದಲ್ಲ, ಸಾಧನೆ ಮೂಲಕ ಬರುವುದಾಗಿದೆ. ನನ್ನ ತಂದೆ- ತಾಯಿ ಲಿಂಗಾಯತರು ಹಾಗಾಗಿ ನಾನು ಕೂಡ ಲಿಂಗಾಯತ ಅಂದರೆ ಆಗಲ್ಲ. ಲಿಂಗಸಾಧನೆ ಮೂಲಕ ಲಿಂಗಾಯತರು ಆಗಬೇಕು ಎಂದು ಹೇಳಿದರು. ಈ ಮೂಲಕ ಎಲ್ಲರೂ ಲಿಂಗಪೂಜೆ ಮತ್ತು ಲಿಂಗ ದೀಕ್ಷೆಯ ಅನುಸಾರ ತತ್ವ ಸಿದ್ದಾಂತದಂತೆ ನಡೆದುಕೊಳ್ಳಬೇಕು ಎಂದು ಆಶೀರ್ವಚನ ನೀಡಿದ್ದಾರೆ
ಇತ್ತೀಚೆಗೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸುದ್ದಿಯಲ್ಲಿದ್ಧಾರೆ. ವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣಪತಿಯನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ. ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಭಾರೀ ಸದ್ದು ಮಾಡಿತ್ತು. ಸ್ವಾಮೀಜಿ ವಿರುದ್ಧ ಕೆಲವರು ದೂರನ್ನೂ ಕೊಟ್ಟಿದ್ದರು. ಆದರೆ ಸ್ವಾಮೀಜಿ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರಲಿಲ್ಲ. ಬದಲಿಗೆ ವಿದ್ಯಾರ್ಥಿ ದೆಸೆಯಿಂದ ಸ್ವಾಮಿಗಳಾದಾಗಲೂ ಈ ರೀತಿ ಹೇಳಿದ್ದೇವೆ, ನಾವು ಗಣಪತಿ ಉತ್ಸವಕ್ಕೆ ಹೋಗಲ್ಲ, ಗಣಪತಿ ಪೂಜೆ ಮಾಡಲ್ಲ.
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ನಂಬಿದ್ದೇವೆ. ಅರ್ಥ ಮಾಡಿಕೊಳ್ಳದ ಅವಿವೇಕಿಗಳು ನಮ್ಮ ವಿರುದ್ಧ ಬರೆಯುತ್ತಾರೆ. ನಾವು ಸಮಾಧಾನ ಕಳೆದುಕೊಂಡರೆ ಗತಿಯೇನು. ಸರಿಯಾದ ಉತ್ತರ ನೀಡುವ ವಿವೇಕ ಬೇಕಾಗುತ್ತದೆ. ಶರಣರ ವಚನಗಳಲ್ಲಿ ಗಣಪತಿ ವಿರೋಧ ನಾಡಿದ ನಿದರ್ಶನವಿದೆ. ಯಾವ ದೇವರು ಈವರೆಗೆ ಯಾರಿಗೂ ವರ, ಶಾಪ ನೀಡಿಲ್ಲ. ಈ ಸತ್ಯದ ಅರಿವು ಮೌಢ್ಯದಲ್ಲಿ ಮುಳುಗಿದವರಿಗೆ ಅರ್ಥ ಆಗುವುದು ಕಷ್ಟ. ಸದಾ ಇನ್ನೊಬ್ಬರ ತಲೆ ಬೋಳಿಸುವ ಕೆಲಸ ಮಾಡುತ್ತಿರುತ್ತಾರೆ. ಇನ್ನೊಬ್ಬರ ವಿಚಾರ ಅರ್ಥ ಮಾಡಿಕೊಂಡು ಒಪ್ಪುವ ಮನಸ್ಥಿತಿ ಇಲ್ಲ, ಶರಣರ ವಚನ ಸಾಹಿತ್ಯದ ಪರಿಚಯ, ವೈಚಾರಿಕ ಪ್ರಜ್ಞೆ ಇದ್ದರೆ ಆ ರೀತಿ ಪದ ಬಳಕೆ ಮಾಡುತ್ತಿರಲಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಗಣಪತಿ ವಿವಾದದಷ್ಟು ಈ ಹೇಳಿಕೆ ವಿವಾದವಾಗುವ ಸಾಧ್ಯತೆ ಕಡಿಮೆ.



