ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಹೊನವಾಡ ಎಂಬ ಗ್ರಾಮ ಇದೆ. ಈ ಗ್ರಾಮದ ಸುಮಾರು 1151 ಎಕರೆ ಜಮೀನು ವಕ್ಫ್ ಮಂಡಳಿಯವರದ್ದಂತೆ. ತಲೆತಲಾಂತರಗಳಿಂದ ನೋಡಿಕೊಳ್ಳುತ್ತಿದ್ದ ರೈತರ ಜಮೀನು ವಕ್ಫ್ ಅವರದ್ದೆಂದು ಅಧಿಕಾರಿಗಳು ಹೇಳಿದ್ದಾರೆ. ಹಾಗಂತ ಜಮೀನುಗಳ ದಾಖಲೆಗಳಲ್ಲಿ, ಪಹಣಿ ಪತ್ರಗಳಲ್ಲಿ, ಇನ್ನಿತರ ದಾಖಲೆ ಪತ್ರಗಳಲ್ಲಿ ರೈತರ ಹೆಸರೇ ಇದೆ. ಆದರೂ, ಆ ಜಮೀನು ಅವರದ್ದಲ್ಲ ಎನ್ನಲಾಗುತ್ತಿದೆ. ತಮ್ಮ ಜಮೀನನ್ನು, ತಮ್ಮ ತಾತ, ಮುತ್ತಾತರಿಂದ ಬಂದಿರುವ ಜಮೀನನ್ನು ತಮಗೆ ರಕ್ಷಿಸಿಕೊಡಿ ಎಂದು ರೈತರು ಬೀದಿಗಿಳಿಯುವಂತಾಗಿದೆ.
ಕಳೆದ ಅಕ್ಟೋಬರ್ 7 ಹಾಗೂ 8 ರಂದು ವಿಜಯಪುರ ಜಿಲ್ಲೆಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ದರು. ವಕ್ಪ್ ಅದಾಲತ್ ನಡೆಸಿ ವಕ್ಫ್ ಆಸ್ತಿಗಳ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದ ಜಮೀರ್ ಅಹ್ಮದ್, ವಕ್ಫ್ ಆಸ್ತಿಗಳ ಖಾತಾ ಆಗದೇ ಇರುವ ಆಸ್ತಿಗಳ ಖಾತೆಗಳನ್ನು ಮುಂದಿನ 30 ದಿನಗಳಲ್ಲಿ ಮಾಡಬೇಕೆಂದು ಸೂಚನೆ ನೀಡಿದ್ದರು. ಆಗ ಯತ್ನಾಳ್ ಅವರು ಇದನ್ನು ವಿರೋಧಿಸಿ ಒಂದು ಸಮಾವೇಶವನ್ನೇ ಮಾಡಿದ್ದರು. ಆಗ ಹೊನವಾಡ ಗ್ರಾಮದಲ್ಲಿ 1200 ಎಕರೆ ಜಮೀನು ವಕ್ಫ್ ಬೋರ್ಡ್ಗೆ ಸೇರಿಸಲು ಜಿಲ್ಲಾಡಳಿತ ಸದ್ದಿಲ್ಲದೇ ತಯಾರಿ ನಡೆಸಿದೆ. ನಮ್ಮ ಜಮೀನನ್ನು ಶಾ ಅಮೀನುದ್ದೀನ್ ದರ್ಗಾ ಎಂದು ದಾಖಲೆ ತೋರಿಸುತ್ತಿದ್ದಾರೆ. ಅಸಲಿಗೆ ಈ ದರ್ಗಾ ನಮ್ಮೂರಲ್ಲೇ ಇಲ್ಲ ಹಾಗೂ ನಮ್ಮ ಜಮೀನಿನಲ್ಲಿ ಇಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದರು.
ಊರಲ್ಲೇ ಇಲ್ಲದ ದರ್ಗಾಕ್ಕೆ ಅದು ಹೇಗೆ ಜಮೀನಿನ ಹಕ್ಕು ಬಂತು..?
ರೈತರ ಹೆಸರಿನಲ್ಲಿದ್ದ ಭೂಮಿಯನ್ನು ದರ್ಗಾಕ್ಕೆ ಕೊಟ್ಟವರಾರು..?
ರೈತರಿಗೇ ಗೊತ್ತಿಲ್ಲದೆ ರೈತರ ಜಮೀನು ಕಿತ್ತುಕೊಳ್ಳುತ್ತಿರೋದು ಯಾರು?
ಯಾರದ್ದೋ ಜಮೀನನ್ನು ಇನ್ಯಾರಿಗೋ ಬರೆದುಕೊಡುವ ಅಧಿಕಾರ ಸರ್ಕಾರಕ್ಕೇ ಇಲ್ಲದಿರುವಾಗ, ವಕ್ಫ್ ಮಂಡಳಿಗೆ ಅಧಿಕಾರ ಕೊಟ್ಟವರಾರು..?
ಇಂತಹ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಹೀಗಾಗಿ ಯತ್ನಾಳ್ ಅವರೇ ನಮ್ಮನ್ನು ಕಾಪಾಡಿ ಎಂದು ಬಸನಗೌಡ ಪಾಟೀಲ ಯತ್ನಾಳ್ ಮೊರೆ ಹೋಗಿದ್ದಾರೆ.
ಇದು ಇವತ್ತಷ್ಟೇ ಶುರುವಾದ ಕಥೆಯೇನಲ್ಲ. ಇಲ್ಲಿನ ರೈತರಿಗೆ ಇಂಥಾದ್ದೊಂದು ಸುದ್ದಿ ಮೊದಲಿನಿಂದಲೂ ಇತ್ತು. ಆದರೆ ದಾಖಲೆ ನಮ್ಮ ಹೆಸರಲ್ಲಿದೆ, ಯಾವನ್ ಏನ್ ಮಾಡೋಕ್ ಆಗುತ್ತೆ ಎಂದು ಕುಳಿತಿದ್ದ ರೈತರು, ಯಾವಾಗ ಜಮೀರ್ ಅಹ್ಮದ್ ಅವರು ಬಂದು ವಕ್ಫ್ ಆಸ್ತಿಯ ಭೂಮಿ ಸರ್ವೆ, ಫ್ಲ್ಯಾಗಿಂಗ್ ಕಾರ್ಯ, ಖಾತೆ ಬದಲಾವಣೆ, ಫ್ಲ್ಯಾಗಿಂಗ್ ಕಾರ್ಯಕ್ಕೆ ಆದೇಶ ಮಾಡಿ.. 30 ದಿನಗಳಲ್ಲಿ ಸರ್ವೇ, ಫ್ಲ್ಯಾಗಿಂಗ್ ಕಾರ್ಯ ಮುಗಿಸುವಂತೆ ಟಾಸ್ಕ್ ನೀಡಿದರೋ.. ದಡಬಡಿಸಿ ಎದ್ದರು. ಓಡೋಡಿ ಬಂದು ಯತ್ನಾಳ್ ಸಾಹೇಬರ ಮೊರೆ ಹೊಕ್ಕಿದ್ದಾರೆ.
ರೈತರ ವಾದ ಇಷ್ಟೇ. ನಮ್ಮ ಪೂರ್ವೀಕರ ಕಾಲದಿಂದಲೇ ಎಲ್ಲಾ ದಾಖಲಾತಿಗಳು ನಮ್ಮ ಕುಟುಂಬದವರ ಹೆಸರಿನಲ್ಲಿವೆ. ಆದರೆ ಯಾವಾಗ ವಕ್ಪ್ ಬೋರ್ಡ್ ಎಂದು ದಾಖಲು ಮಾಡಿಕೊಂಡರೋ ಗೊತ್ತಿಲ್ಲ. ನಾವು ನಮ್ಮ ಹಿರಿಯರು ವಕ್ಪ್ ಬೋರ್ಡಿಗೆ ದಾನ ನೀಡಿಲ್ಲ, ಮಾರಾಟ ಮಾಡಿಲ್ಲ. ದಾಖಲೆಗಳನ್ನು ತಿರುಚಲಾಗಿದೆ ಎನ್ನುತ್ತಿದ್ದಾರೆ.
ಎಂಬಿ ಪಾಟೀಲ್ ಭರವಸೆ : ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಎಂಬಿ ಪಾಟೀಲ್ ಅವರನ್ನೂ ಭೇಟಿ ಮಾಡಿರುವ ರೈತರಿಗೆ ಎಂಬಿ ಪಾಟೀಲ್ ನೋಟಿಸ್ ಬಂದರೆ ಆತಂಕ ಬೇಡ. ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಸಾಕು. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಈ ವಿಷಯ ಚರ್ಚಿಸಿದ್ದೇನೆ. ಮುಂದಿನವಾರ ಜಿಲ್ಲಾ ಮಟ್ಟದ ಸಭೆ ನಡೆಸಿ, ಕೂಲಂಕಷವಾಗಿ ಎಲ್ಲ ವಿಷಯಗಳನ್ನು ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಆದರೆ ಈಗ ರೈತರು ತಮ್ಮ ಜಮೀನನ್ನು ತಮ್ಮದೇ, ತಮ್ಮ ಕುಟುಂಬದ್ದೇ ಎಂದು ಸಾಬೀತು ಪಡಿಸಬೇಕು. ವಕ್ಫ್ ಮಂಡಳಿ ಇದು ತನಗೆ ಸೇರಿದ್ದು ಎಂದು ಹೇಳಿದ ಮಾತ್ರಕ್ಕೆ, ರೈತರು ನಾಮುಂದು ತಾಮುಂದು ಎಂದು ಓಡೋಡಿ ಹೋಗಿ ಸರ್ಕಾರಕ್ಕೆ ದಾಖಲೆ ಕೊಡಬೇಕು. ಇದ್ದಬದ್ದ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು ದಾಖಲೆ ಹೊಂಚಬೇಕು. ಜಮೀನು ಉಳಿಯಬಹುದು, ಆದರೆ ರೈತರ ಆತಂಕ ಮುಗಿಯೋದಿಲ್ಲ.



