ದರ್ಶನ್ ಕೇಸ್ ಕುರಿತಂತೆ ಮಾಜಿ ಸಂಸದೆ, ನಟಿ ರಮ್ಯಾ ರಿಯಾಕ್ಷನ್ ಕೊಟ್ಟಿದ್ದಾರೆ. ಜೊತೆಗೆ ಬುದ್ದಿ ಮಾತು ಕೂಡಾ ಹೇಳಿದ್ಧಾರೆ. ನಟ ದರ್ಶನ್ ಅವರ ಮೇಲೆ ಕೇಳಿ ಬಂದಿರುವ ಕೊಲೆ ಆರೋಪಗಳ ಕುರಿತಂತೆ ನಟಿ ರಮ್ಯಾ ಅವರ ಮೊದಲ ರಿಯಾಕ್ಷನ್ ಇದು. ಮೊದಲ ದಿನ ಇಂತಹ ಕುಕೃತ್ಯಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂಬ ಪೋಸ್ಟ್ʻನ್ನು ರೀಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದರು. ರಮ್ಯಾ ಕೂಡಾ ದರ್ಶನ್ʻಗೆ ಹೆದರುತ್ತಾರೆಯೇ ಎಂಬ ಅನುಮಾನ ಮೂಡಿತ್ತು.
ಹಾಗೆ ನೋಡಿದರೆ.. ಚಿತ್ರರಂಗದ ಕಲಾವಿದರು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಮಾಧ್ಯಮಗಳ ಎದುರು ಪ್ರತಿಕ್ರಿಯೆಗೆ ಸಿಕ್ಕವರಲ್ಲಿ ಹಲವರು ಕೈ ಮುಗಿದು ಎದ್ದು ಹೋಗಿದ್ದರೆ, ಇನ್ನೂ ಕೆಲವರು ಪ್ರಶ್ನೆ ಕೇಳುತ್ತಲೇ ಎದ್ದು ಹೋಗಿದ್ದಾರೆ. ಕೆಲವರು ಗೂಡಾರ್ಥದಲ್ಲಿ, ಮಾರ್ಮಿಕವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಂದು ರೀತಿಯಲ್ಲಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿರುವ, ರಾಜಕೀಯದಲ್ಲಿ ಬ್ಯುಸಿಯಾಗಿರುವ ಜಗ್ಗೇಶ್, ಉಮಾಶ್ರೀ ತರದವರು ಮಾತನಾಡಿದ್ದಾರೆ. ಸ್ಟಾರ್ ಕಲಾವಿದರ ರಿಯಾಕ್ಷನ್ ಬಂದಿಲ್ಲ. ಆದರೆ, ನಟಿ ರಮ್ಯಾ ಮೊದಲ ಪ್ರತಿಕ್ರಿಯೆ ಗಮನ ಸೆಳೆಯುವಂತಿದೆ. ಏಕೆಂದರೆ ದರ್ಶನ್ ಅವರಂತೆಯೇ ರಮ್ಯಾಗೂ ಕೆಟ್ಟ ಕೆಟ್ಟ ಅನುಭವಗಳಾಗಿವೆ. ಟ್ರೋಲ್ ಆಗಿದ್ದಾರೆ. ಅಸಹ್ಯಕಾರಿ ಮೆಸೇಜ್ ಬಂದಿವೆ. ಆದರೆ.. ಅವುಗಳನ್ನು ರಮ್ಯಾ ಹ್ಯಾಂಡಲ್ ಮಾಡಿದ ರೀತಿಯೇ ಬೇರೆ.
ರಮ್ಯಾ ಪೋಸ್ಟ್ʻನಲ್ಲಿ ಏನಿದೆ..?
ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಎನ್ನುವ ಆಪ್ಷನ್ ನೀಡಿರುವುದರ ಹಿಂದೆಯೂ ಒಂದು ಕಾರಣ ಇದೆ. ಬ್ಲಾಕ್ ಮಾಡಿದ್ರೂ ನಿಮ್ಮನ್ನ ಟ್ರೋಲ್ ಮಾಡ್ತಾ ಇದ್ದಾರೆ ಎಂದಾದ್ರೆ, ದೂರು ಕೊಡುವುದಕ್ಕೆ ಅವಕಾಶ ಇದೆ. ಟ್ರೋಲಿಗರು ನನ್ನ ಮೇಲೆ ಏನೆನೆಲ್ಲಾ ಮಾತನಾಡಿದರು. ಅಸಹ್ಯ ಭಾಷೆಗಳನ್ನು ಬಳಸಿ ನಿರಂತರವಾಗಿ ನನ್ನ ಟ್ರೋಲ್ ಮಾಡಿದರು. ನಾನೊಬ್ಬಳೇ ಅಲ್ಲ, ಬೇರೆ ನಟ-ನಟಿಯರನ್ನೂ ಟ್ರೋಲ್ ಮಾಡಿದ್ದಾರೆ. ಹೀರೋ ಹಾಗೂ ಹೀರೋಯಿನ್‌ಗಳ ಮಕ್ಕಳು ಮತ್ತು ಪತ್ನಿಯರನ್ನೂ ಕೂಡ ಬಿಟ್ಟಿಲ್ಲ. ನಾವು ಎಂಥಾ ಕೆಟ್ಟ ಸಮಾಜದಲ್ಲಿ ಬದುಕಿದ್ದೇವೆ. ದೇಶದ ಕಾನೂನು ಪಾಲಿಸುವಂಥ ವ್ಯಕ್ತಿಯಾಗಿ ನಾನು ಇವರ ವಿರುದ್ಧ ಕೇಸ್‌ಗಳನ್ನು ದಾಖಲು ಮಾಡಿದ್ದೇನೆ. ಕೆಲವೊಮ್ಮೆ ಟ್ರೋಲ್ ಮಾಡುವ ವ್ಯಕ್ತಿಗಳಿಗೆ ಪೊಲೀಸರು ನೀಡುವ ಸಣ್ಣ ಪ್ರಮಾಣದ ವಾರ್ನಿಂಗ್ ಕೂಡ ಸಾಕಾಗುತ್ತದೆ. ಆ ಬಳಿಕ ನಾನೂ ಕೂಡ ಅವರ ಮೇಲೆ ಹಾಕಲಾಗಿದ್ದ ಕೇಸ್‌ಅನ್ನು ವಾಪಾಸ್ ತೆಗೆದುಕೊಂಡಿದ್ದೇನೆ.
ಟ್ರೋಲ್ ಮಾಡುವವರಲ್ಲಿ ಹೆಚ್ಚಿನವರು ಯುವಕರು. ಅವರಿಗೆ ಮುಂದೆ ದೊಡ್ಡ ಭವಿಷ್ಯವಿದೆ. ಆದರೆ, ಅನಾಮಿಕ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಬಳಸಿಕೊಂಡು ಅವರು ಟ್ರೋಲ್ ಮಾಡ್ತಾ ಮಾಡ್ತಾ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರಿಗೂ ಕೂಡ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ನಿಮ್ಮನ್ನು ಟ್ರೋಲ್ ಮಾಡಿದವರನ್ನು ಹುಡುಕಿಕೊಂಡು ಹೋಗಿ, ಕೊಲೆ ಮಾಡುವುದನ್ನು ಯಾರೂ ಮಾಡಬಾರದು. ನ್ಯಾಯ ಸಿಗುತ್ತದೆಯೋ ಇಲ್ಲವೋ, ಇಂಥದ್ದಕ್ಕೆಲ್ಲ ಒಂದು ಸಣ್ಣ ದೂರು ಸಾಕಾಗುತ್ತದೆ.
ಈ ಹಂತದಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ ಪೊಲೀಸರ ಬಗ್ಗೆ ಗೌರವ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಇದೊಂದು ಥ್ಯಾಂಕ್‌ಲೆಸ್ ಜಾಬ್. ಆದರೆ, ತಮ್ಮ ಮಿತಿಯಲ್ಲಿ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ನಾಯಕರ ಒತ್ತಡಕ್ಕೆ ಅವರು ಕುಗ್ಗಬಾರದು ಎಂದು ನಾನು ಬಯಸುತ್ತೇನೆ. ಆ ಮೂಲ ದೇಶದ ಕಾನೂನಿನ ಮೇಲೆ ಸಾಮಾನ್ಯ ಜರಿಗೆ ವಿಶ್ವಾಸ ಮೂಡಿಸುವಂಥ ಕೆಲಸ ಮಾಡಬೇಕು ಎಂದು ರಮ್ಯಾ ಬರೆದಿದ್ದಾರೆ.
ಅದರೊಂದಿಗೆ ಜಸ್ಟೀಸ್ ಫಾರ್ ರೇಣುಕಾಸ್ವಾಮಿ, ದರ್ಶನ್, ಯಡಿಯೂರಪ್ಪ ಹಾಗೂ ಪಜ್ವಲ್ ರೇವಣ್ಣ ಹ್ಯಾಶ್‌ಟ್ಯಾಗ್ ಅನ್ನು ಕೂಡಾ ಅವರು ಬಳಸಿದ್ದಾರೆ.
ಇಷ್ಟಕ್ಕೂ ದರ್ಶನ್ ಏನು ಮಾಡಬಹುದಿತ್ತು..? ದರ್ಶನ್ ಅವರಿಗೆ ತಮ್ಮ ಪ್ರಭಾವ ಎಂಥದ್ದು ಅನ್ನೋದು ಗೊತ್ತಿತ್ತು. ಪವಿತ್ರಾ ಗೌಡಗೆ ಕೆಟ್ಟ ಮೆಸೇಜ್ ಬಂದಾಗ ಅದನ್ನು ಪೊಲೀಸರಿಗೆ ಹೇಳಿದ್ದರೆ ಸಾಕಿತ್ತು, ಮುಂದಿನದ್ದನ್ನು ಪೊಲೀಸರೇ ಮಾಡುತ್ತಿದ್ದರು. ರೇಣುಕಾಸ್ವಾಮಿಯನ್ನು ಹುಡುಕುವ ಪ್ರಯತ್ನವನ್ನೂ ದರ್ಶನ್ & ಗ್ಯಾಂಗ್ ಮಾಡಬೇಕಿರಲಿಲ್ಲ. ಅದನ್ನೂ ಪೊಲೀಸರೇ ಮಾಡುತ್ತಿದ್ದರು. ಈಗ ಅದನ್ನು ತಾನೇ ಮಾಡಲು ಹೋಗಿ.. ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾನೆ ದರ್ಶನ್.



