ಸದ್ಯಕ್ಕೆ ರಾಜ್ಯಾದ್ಯಂತ ಚರ್ಚೆಯಲ್ಲಿರುವುದು RSS ಬ್ಯಾನ್ ಮಾಡ್ತಾರಂತೆ ಎಂಬ ಸರ್ಕಾರದ ಅತ್ಯುತ್ಸಾಹ ಮಾತ್ರ. ಇದರ ನಡುವೆ ಸೈಡಿಗೆ ಹೋಗಿರುವುದು ಬೆಂಗಳೂರು ರಸ್ತೆಗುಂಡಿಗಳ ಸಮಸ್ಯೆ, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಸಂಕಟ. ಅದೇಕೋ ಏನೋ.. ಉದ್ಯಮಿಗಳು ಅದೆಷ್ಟೇ ಮಾತನಾಡಿದರೂ.. ಪದೇ ಪದೇ ಪ್ರತ್ಯೇಕ ಲಿಂಗಾಯತ ಧರ್ಮ, ಬಾನು ಮುಷ್ತಾಕ್ ಗಲಾಟೆ, ಧರ್ಮಸ್ಥಳ ಗಲಾಟೆ, ಜಾತಿ ಸಮೀಕ್ಷೆ.. ಇತ್ಯಾದಿ ಇತ್ಯಾದಿ ವಿಷಯಗಳು ಬಂದು ಮೂಲ ಸಮಸ್ಯೆಗಳು ಮರೆಯಾಗುತ್ತಿವೆ. ಹೀಗಿರುವಾಗಲೇ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಬರುತ್ತಿವೆಯಂತೆ.
ಸರ್ಕಾರಿ ಶಾಲೆ ಮತ್ತು ಕಾಲೇಜು ಆವರಣಗಳಲ್ಲಿ ಆರ್‌ಎಸ್‌ಎಸ್ ಸಂಘಟನೆಯ ಚಟುವಟಿಕೆಗಳನ್ನು ನಿಷೇಧ ಮಾಡುವಂತೆ ಒತ್ತಾಯಿಸಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರವೇ ಇದಕ್ಕೆ ಕಾರಣ. ಹೀಗಾಗಿ ಸದಾಶಿವನಗರದಲ್ಲಿ ಇರುವ ಪ್ರಿಯಾಂಕ್ ಖರ್ಗೆ ಅವರ ಖಾಸಗಿ ಮನೆಗೆ ಹೆಚ್ಚುವರಿ ಪೊಲೀಸ್ ಭದ್ರತೆ ನೀಡಲಾಗಿದೆ. ಸುಮಾರು 20 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಸರ್ಕಾರಿ ನಿವಾಸಕ್ಕೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸುಮಾರು 50 ಪೊಲೀಸ್ ಸಿಬ್ಬಂದಿಯನ್ನು ಪ್ರಿಯಾಂಕ್ ಖರ್ಗೆ ಅವರ ಸರ್ಕಾರಿ ನಿವಾಸಕ್ಕೆ ಭದ್ರತೆಗಾಗಿ ನಿಯೋಜಿಸಲಾಗಿದೆ. ಆದರೆ.. ಇದುವರೆಗೆ ಪ್ರಿಯಾಂಕ್ ಖರ್ಗೆ ಪೊಲೀಸರಿಗೆ ದೂರು ಕೊಟ್ಟಿಲ್ಲ.
ಪೊಲೀಸರಿಗೆ ದೂರು ನೀಡದೇ ಇದ್ದರೂ.. ಸಿಎಂ ಸಿದ್ಧರಾಮಯ್ಯ ಅವರಿಗೆ ಹೇಳಿದ್ದಾರಂತೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಸೂಕ್ತ ಭದ್ರತೆ ಒದಗಿಸಿದ್ದಾರೆ. ದೂರು ಯಾಕೆ ಕೊಡ್ತಿಲ್ಲ ಎನ್ನುವ ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ಕೊಟ್ಟಿರುವ ಉತ್ತರವೂ ಅಷ್ಟೇ ಮುಖ್ಯ.
ದೂರು ಕೊಡುವುದು ಸುಲಭ, ಆದ್ರೆ ಆ ವ್ಯಕ್ತಿಗೆ ಶಿಕ್ಷೆ ಆಗುತ್ತೆ, ಆ ಮನಸ್ಥಿತಿ ತುಂಬಿದ ಆರ್‌ಎಸ್‌ಎಸ್‌ಗೆ ಏನು ಶಿಕ್ಷೆ? ಸದ್ಯಕ್ಕೆ ನನ್ನ ಫೋನ್ ಸ್ವಿಚ್‌ಆಫ್ ಮಾಡಿದ್ದೀನಿ, ಆದರೆ ಅದೇ ಪರಿಹಾರ ಅಲ್ಲ ಎನ್ನುತ್ತಾರೆ. ಸಚಿವರಿಗೇ ದೂರು ಕೊಟ್ಟರೆ ಶಿಕ್ಷೆಯಾಗುವುದಿಲ್ಲ ಎಂದರೆ ಜನ ಯಾರನ್ನು ನಂಬಬೇಕು. ಯಾವ ವ್ಯವಸ್ಥೆಯನ್ನು ನಂಬಬೇಕು.. ಪ್ರಿಯಾಂಕ್ ಖರ್ಗೆ ಅವರೇ. ರಾಜ್ಯದಲ್ಲಿರುವ ಕಾಂಗ್ರೆಸ್ಸಿಗರದ್ದೇ ಸರ್ಕಾರ. ವ್ಯವಸ್ಥೆ ಹಾಳಾಗಿದ್ದರೆ, ಸರಿಪಡಿಸಬೇಕಿರುವುದು ಅವರದ್ದೇ ಜವಾಬ್ದಾರಿ. ಆದರೆ.. ಸನ್ಮಾನ್ಯ ಪ್ರಿಯಾಂಕ್ ಖರ್ಗೆಯವರು ಶಿಕ್ಷೆ ಆಗುವ ಬಗ್ಗೆ ಅನುಮಾನ ಇದೆ. ಅದಕ್ಕೆ ದೂರು ಕೊಟ್ಟಿಲ್ಲ ಅಂತಾರೆ. ಧೈರ್ಯ ಹೇಳಿ ದೂರು ಕೊಡಿ ಎಂದು ಹೇಳಬೇಕಾದ ಗೃಹ ಸಚಿವರಿಗೆ ನನಗೆ ವಿಷಯವೇ ಗೊತ್ತಿಲ್ಲ ಅಂತಾರೆ. ಸಿಎಂ ಕೂಡಾ ದೂರು ಕೊಡು ಎಂದು ಹೇಳುವುದಿಲ್ಲ. ನೇರವಾಗಿ ಭದ್ರತೆ ಕೊಡ್ತಾರೆ.
ಜನಸಾಮಾನ್ಯರೂ ಕೂಡಾ ಹೀಗೆ ಕೇಳಬಹುದಾ.. ನನಗೆ ಭಯ ಇದೆ. ಜೀವಭಯ ಇದೆ. ಬೆದರಿಕೆ ಕರೆ ಬರುತ್ತಿವೆ ಎಂದು ಹೇಳಿ, ದೂರು ಕೊಡದೇನೇ ರಕ್ಷಣೆ ಪಡೆಯಬಹುದಾ..? ಸರ್ಕಾರ ದಾರಿ ತಪ್ಪುತ್ತಿರುವುದಂತೂ ಸತ್ಯ.



