ವಿಶ್ವದ 7 ಅದ್ಭುತಗಳಲ್ಲಿ ಒಂದು ಬ್ರೆಜಿಲ್`ನ ರಿಯೋಡಿ ಜನೈರೋದಲ್ಲಿರುವ ಬೃಹತ್ ಯೇಸು ಪ್ರತಿಮೆ. 100 ಅಡಿ ಎತ್ತರದ ಈ ಯೇಸು ಪ್ರತಿಮೆಗೆ ಸಿಡಿಲು ಬಡಿದಿದೆ. ಶುಕ್ರವಾರ ಬ್ರೆಜಿಲ್ ಕರಾವಳಿಗೆ ಫ್ಲ್ಯಾಶ್ ಚಂಡಮಾರುತ ಅಪ್ಪಳಿಸಿದ್ದು ಈ ಸಮಯದಲ್ಲಿ ಸಿಡಿಲು ಬಡಿದಿದೆ. ಆ ಸಿಡಿಲು ಬಡಿದ ದೃಶ್ಯ ಕ್ಯಾಮೆರಾಗೂ ಸೆರೆ ಸಿಕ್ಕಿದೆ.
100 ಅಡಿ ಎತ್ತರದ ಏಸುಕ್ರಿಸ್ತನ ಮೂರ್ತಿಯ ತಲೆಯಿಂದ ಆಕಾಶಕ್ಕೆ ಸಂಪರ್ಕ ಹೊಂದಿರುವಂತೆ ಸಿಡಿಲು ಬಡಿದ ದೃಶ್ಯ ಸೆರೆಯಾಗಿದೆ. ಇದನ್ನು ದೈವೀಕ ದೃಶ್ಯ (ಡಿವೈನ್ ಸೀನ್) ಎಂದು ಯೇಸುವಿನ ಭಕ್ತರು ಭಾವಿಸುತ್ತಿದ್ದಾರೆ. ವಿಶೇಷವೆಂದರೆ ಇಷ್ಟು ದೊಡ್ಡ ಮಟ್ಟದ ಸಿಡಿಲು ಹೊಡೆದರೂ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ.
ಫರ್ನಾಂಡೋ ಬ್ರಾಗಾ ಎಂಬುವವರು ಸೆರೆಹಿಡಿದಿದ್ದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ‘ಡಿವೈನ್ ಲೈಟಿಂಗ್ (ದೈವಿಕ ಬೆಳಕು) ಇಂದು ಶುಕ್ರವಾರ’ ಎಂದು ಬರೆದುಕೊಂಡಿದ್ದಾರೆ.
ಹೇಗಿದೆ ಯೇಸು ಪ್ರತಿಮೆ
ಇದು 28 ಮೀಟರ್ ಅಂದರೆ 92 ಅಡಿ ಅಗಲವಿದೆ.ಎತ್ತರ 30 ಮೀಟರ್. ಪೀಠವನ್ನೂ ಸೇರಿಸಿದರೆ 125 ಅಡಿ ಎತ್ತರ ಬರುತ್ತದೆ. ಯೇಸು ಕೈಗಳನ್ನು ಅಗಲಿಸಿ ಅಪ್ಪಿಕೊಳ್ಳುವಂತಿರುವ ಈ ಪ್ರತಿಮೆ ಅದ್ಭುತಗಳ ಪಟ್ಟಿಯಲ್ಲಿದೆ. ಅಕ್ಟೋಬರ್ 13, 1931ರಲ್ಲಿ ನಿರ್ಮಾಣದವಾದ ಈ ಪ್ರತಿಮೆಯನ್ನು ನೋಡಲು ಪ್ರತಿದಿನ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಅದಕ್ಕಿಂತಲೂ ವಿಶೇಷವೆಂದರೆ ಈ ಪ್ರತಿಮೆ ಇರುವುದು 2 ಸಾವಿರ ಅಡಿ ಎತ್ತರದಲ್ಲಿ. ರಿಯೋ ನಗರದ ಕೋರ್ಕೋವಾಡೋ ಬೆಟ್ಟದ ಮೇಲೆ ಈ ಪ್ರತಿಮೆ ಇದೆ. ಈ ಪ್ರತಿಮೆಗೆ ಸಿಡಿಲು ಹೊಡೆಯುವುದು ಮೊದಲೇನಲ್ಲ. 2014ರಲ್ಲಿ ಒಮ್ಮೆ ಈ ಪ್ರತಿಮೆಗೆ ಸಿಡಿಲು ಬಡಿದಿತ್ತು. ಆಗ ಪ್ರತಿಮೆಯ ಹೆಬ್ಬೆರಳು ಘಾಸಿಯಾಗಿತ್ತು.



