ಸಿದ್ಧರಾಮಯ್ಯ ಅವರು ಸಿಎಂ ಆಗಿ ಮುಂದುವರಿಯುತ್ತಾರೋ.. ಇಲ್ಲವೋ.. ಇದೇ ನವೆಂಬರ್ 20ಕ್ಕೆ ಸಿದ್ಧರಾಮಯ್ಯ 2ನೇ ಭಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಎರಡೂವರೆ ವರ್ಷ ಆಗುತ್ತದೆ. ಅದಾದ ನಂತರ ಸಿದ್ಧರಾಮಯ್ಯ ಸಿಎಂ ಪಟ್ಟವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡಬೇಕು. ಅಂಥದ್ದೊಂದು ಒಪ್ಪಂದವಾಗಿದೆ ಎನ್ನುವುದಂತೂ ಖರೇ. ಇಲ್ಲದೇ ಹೋಗಿದ್ದರೆ.. ಈ ವಿವಾದ ಇಷ್ಟೊಂದು ದೂರದವರೆಗೆ ಸ್ಪಷ್ಟನೆ ಇಲ್ಲದೆ ಎಳೆದುಕೊಂಡು ಬರುತ್ತಿರಲಿಲ್ಲ. ಹೀಗಿರುವಾಗಲೇ ಜಮೀರ್ ಅಹ್ಮದ್.. ಸಿದ್ದು ಇರಲಿ.. ಡಿಕೆ 2028ಕ್ಕೆ ಬರಲಿ ಎಂದಿದ್ದಾರೆ. ಅವರು ಈ ಮಾತು ಹೇಳ್ತಿರೋದೂ ಹೊಸದಲ್ಲ. ಆದರೆ.. ಅದೇ ವೇಳೆ ಡಿಕೆ ಶಿವಕುಮಾರ್ ಕೂಡಾ ಅದೇ ಮಾತು ಹೇಳಿದ್ದಾರೆ.
ʻʻರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. 2028ಕ್ಕೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಎಐಸಿಸಿ ಅಧ್ಯಕ್ಷರ ಮನೆ ಮುಂದೆ ನಿಂತು ಹೇಳುತ್ತಿದ್ದೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. 2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. 2028ಕ್ಕೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆʼʼ ಎಂದು ಹೇಳಿರೋದು ಸಚಿವ ಜಮೀರ್ ಅಹ್ಮದ್. ಜಮೀರ್.. ಸಿದ್ಧರಾಮಯ್ಯ ಅವರ ಆಪ್ತ ಮಿತ್ರರಲ್ಲಿ ಒಬ್ಬರು. ಪರಮಾಪ್ತ ಎನ್ನಬಹುದು.
ಹೀಗಿರುವಾಗಲೇ ಇತ್ತ ಡಿಕೆ ಶಿವಕುಮಾರ್ ಕೂಡಾ ʻʻಈ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇರಲಿ, ನಮಗೆ ಯಾವುದೇ ಬೇಸರವಿಲ್ಲ. ಬಹಳ ಸಂತೋಷ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ, ಇರಲಿ, ಅದರಲ್ಲಿ ತಪ್ಪೇನಿದೆ. ನಮಗೆ ಯಾವುದೇ ಬೇಸರವಿಲ್ಲ. ನಾವು ಅವರ ಜತೆ ಕೆಲಸ ಮಾಡುತ್ತಿದ್ದೇವೆ, ಒಟ್ಟಿಗೆ ಇದ್ದೇವೆ. ಮುಂದೆಯೂ ಒಟ್ಟಿಗಿರುತ್ತೇವೆʼʼ ಎಂದಿದ್ದಾರೆ.
ಅಂದಹಾಗೆ ಸಿದ್ಧರಾಮಯ್ಯ ಅವರು ಸಂಪುಟ ಪುನರ್ ರಚನೆ ಕುರಿತಂತೆ ಡಿಕೆ ಶಿವಕುಮಾರ್ ಜೊತೆ ಚರ್ಚೆಯನ್ನೆ ಮಾಡಿಲ್ವಮತೆ. ಸಚಿವ ಸಂಪುಟ ಪುನಾರಚನೆ ವಿಚಾರ ಸಿಎಂ ಅವರಿಗೆ ಬಿಟ್ಟಿದ್ದು. ಅವರು ನನ್ನ ಬಳಿ ಆ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದಿದ್ದಾರೆ. ಈ ನಡುವೆ ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನವೂ ನಡೆಯುತ್ತಿದೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಂದಿನ 18 ತಿಂಗಳಲ್ಲಿ ಕುರುಬರ ಸಂಘದ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿಯೇ ಆಗಮಿಸಿ ಈ ಕಟ್ಟಡ ಉದ್ಘಾಟಿಸಲಿದ್ದಾರೆ ಎಂದಿದ್ದಾರೆ. ಈ ಹೇಳಿಕೆ ಮೂಲಕ ಸಿದ್ಧರಾಮಯ್ಯ ಅವರೇ ದ್ವಿತೀಯಾರ್ಧದಲ್ಲೂ ಸಿಎಂ ಆಗಿ ಕಂಟಿನ್ಯೂ ಆಗ್ತಾರೆ ಎಂಬ ಸಂದೇಶ ಕೊಟ್ಟಿದ್ದಾರೆ.
ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಿಸಿ, ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡ್ತೇ ಎಂದು ಜಮೀರ್ ಹೇಳಿದರೆ.. ಅತ್ತ ಭೈರತಿ ಸುರೇಶ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅಣ್ಣ ತಮ್ಮಂದಿರಂತೆ ಇದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.



