ಯತ್ನಾಳ್ ಲಿಂಗಾಯತ ಬಾಣಕ್ಕೆ.. ವಿಜಯೇಂದ್ರ ಲಿಂಗಾಯತ ಬಾಣವೇ ಪ್ರತ್ಯಸ್ತ್ರವಾಗಿ ಹೊರಹೊಮ್ಮುತ್ತಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಪರಮೋಚ್ಛ ನಾಯಕ ಅಂತಾನೇ ಬಿಎಸ್ ಯಡಿಯೂರಪ್ಪ ಗುರುತಿಸಿಕೊಂಡಿದ್ದಾರೆ. ಲಿಂಗಾಯತರ ದೊಡ್ಡ ಶಕ್ತಿಯೇ ಬಿಎಸ್ವೈ ಕುಟುಂಬಕ್ಕೆ ಇದೆ. ಆದರೂ ಕೂಡ ರಾಜ್ಯಾಧ್ಯಕ್ಷರ ಬದಲಾವಣೆಗೆ ವಿಜಯೇಂದ್ರ ವಿರುದ್ಧವೇ ಸಡ್ಡು ಹೊಡೆದು, ಶಾಸಕ ಯತ್ನಾಳ್ ನಿಂತಿರುವುದಕ್ಕೂ ಕಾರಣ ಇದೆ. ಕೇವಲ ಅವರ ಪರ ಮಾತ್ರ ಲಿಂಗಾಯತ ನಾಯಕರು ಇಲ್ಲ, ನಮ್ಮ ಜೊತೆಯೂ ಲಿಂಗಾಯತ ನಾಯಕರು ಇದ್ದಾರೆ ಎಂದು ಸಂದೇಶ ರವಾನೆ ಮಾಡುವುದಕ್ಕೆ ಇದೀಗ ಹೊರಟ್ಟಿದ್ದಾರೆ. ಘಟಾನುಘಟಿ ಲಿಂಗಾಯತ ನಾಯಕರ ಸಂಪರ್ಕವನ್ನಿಟ್ಟುಕೊಂಡೇ, ಅಸ್ತ್ರವನ್ನ ಹೂಡಿದ್ದಾರೆ.ಇದೀಗ ಯತ್ನಾಳ್ ಅವರ ಲಿಂಗಾಯತ ಅಸ್ತ್ರಕ್ಕೆ ಕೌಂಟರ್ ಆಗಿ ಲಿಂಗಾಯತ ಪ್ರತ್ಯಸ್ತ್ರವನ್ನೇ ವಿಜಯೇಂದ್ರ ಹೂಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬಿಜೆಪಿಯ ಹಿರಿಯ ನಾಯಕರು ವಿಜಯೇಂದ್ರಗೆ ಯಡಿಯೂರಪ್ಪನವರ ಎದುರೇ ಬುದ್ದಿವಾದ ಹೇಳಿದ್ದಾರಂತೆ.
ತಮ್ಮ ಮಗನ ಪರವಾಗಿ ಯಡಿಯೂರಪ್ಪನವರೇ ಪರೋಕ್ಷವಾಗಿ ಅಖಾಡಕ್ಕೆ ಇಳಿದಿದ್ದಾರೆ. ಸಾಲು ಸಾಲು ಸಭೆ ನಡೆಸೋ ಮೂಲಕ, ಯಡಿಯೂರಪ್ಪರ ಲಿಂಗಾಯತ ಶಕ್ತಿ ಏನೆಂದು ತೋರಿಸ್ತೀವಿ ಎಂದು ಯಡಿಯೂರಪ್ಪನವರ ಆಪ್ತ, ಮಾಜಿ ಸಚಿವ ಎಂಪಿ. ರೇಣುಕಾಚಾರ್ಯ ಕಹಳೆ ಮೊಳಗಿಸಿದ್ದಾರೆ. ದುಷ್ಟ ಶಕ್ತಿಯಿಂದ ಸಮಾಜ ಒಡೆಯೋ ಕೆಲಸ ಆಗುತ್ತಿದೆ ಎಂದು ಯತ್ನಾಳ್ ಬಣದ ವಿರುದ್ಧ ರೇಣುಕಾಚಾರ್ಯ ರೋಷಾವೇಶಗೊಂಡಿದ್ದಾರೆ. ಯಡಿಯೂರಪ್ಪನವರ ಋಣ ತೀರಿಸ್ಬೇಕು ಅಂದರೆ ಎಲ್ಲರೂ ಕೈ ಜೋಡಿಸ್ಬೇಕು ಎಂದು ರೇಣುಕಾಚಾರ್ಯ ಕರೆ ನೀಡಿದ್ದಾರೆ. ಒಂದು ಕಡೆ ಆ ಕೆಲಸಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ವಿಜಯೇಂದ್ರಗೂ ಬುದ್ದಿ ಮಾತು ಹೇಳುವ ಕೆಲಸ ಚಾಲ್ತಿಯಲ್ಲಿದೆ.
ಇತ್ತೀಚೆಗೆ ಯತ್ನಾಳ್ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಪ್ರಮುಖ ವೀರಶೈವ ಲಿಂಗಾಯತ ಮುಖಂಡರು ಭಾಗಿಯಾಗಿದ್ದರು. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್ ಸೇರಿ ಹಲವು ಪ್ರಮುಖ ಲಿಂಗಾಯತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು. ಇನ್ನು ಭಿನ್ನರ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಕೂಡ ಕಾಣಿಸಿಕೊಂಡಿದ್ದರು.
ಆದರೆ ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವೇ ಬೇರೆ. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಮುನಿಸಿಕೊಂಡ ನಾಯಕರೆಲ್ಲ ಸೋತಿದ್ದಾರೆ. ವಿ.ಸೋಮಣ್ಣ, ಸಿಟಿ ರವಿ ಅಂತಹವರೆಲ್ಲ ಏನೇ ಹರಸಾಹಸ ಮಾಡಿದರೂ ಲಿಂಗಾಯತರ ಮನಸ್ಸು ಗೆಲ್ಲೋಕೆ ಆಗಿಲ್ಲ. ಬೊಮ್ಮಾಯಿ ಕೂಡಾ ಒಳಗೊಳಗೇ ಆಟವಾಡುವುದಕ್ಕೆ ಹೋಗಿ ಹೊಡೆತ ತಿಂದಿದ್ದಾರೆ. ಇನ್ನು ಯತ್ನಾಳ್ ಅವರನ್ನು ಅವರ ಕ್ಷೇತ್ರದವರೇ ಸಂಪೂರ್ಣವಾಗಿ ಒಪ್ಪುವುದಿಲ್ಲ. ಇನ್ನು ಸಭೆಗೆ ಬಂದಿದ್ದ ಸಿದ್ದೇಶ್ವರ ಕೂಡಾ ಲಿಂಗಾಯತರಾದರೂ ಅವರದ್ದೂ ಸೇಮ್ ಪ್ರಾಬ್ಲಂ. ಏನು ಮಾಡೋದು ಎಂಬ ಪ್ರಶ್ನೆಯೂ ಬಂದಿದೆ.
ಇತ್ತ ವಿಜಯೇಂದ್ರ ಪರ ಬಣ ಆಕ್ಟಿವ್ ಆಗಿದ್ದರೂ ವಿಜಯೇಂದ್ರಗೆ ಬುದ್ದಿಮಾತು ಹೇಳುವ ಪ್ರಯತ್ನ ನಡೆಯುತ್ತಿದೆ. ವಿಜಯೇಂದ್ರ ಅವರಿಗೆ ಪಕ್ಷದ ಹಿರಿಯ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ, ಸ್ನೇಹಮಯಿ ವಾತಾವರಣ ಇರಲಿ ಎಂದು ಬುದ್ದಿ ಹೆಳುತ್ತಿರುವ ಹಿರಿಯ ನಾಯಕರು, ನೀವು ಯಡಿಯೂರಪ್ಪನವರೇ ಪುತ್ರನೇ ಹೊರತು, ನೀವೇ ಯಡಿಯೂರಪ್ಪ ಅಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರ ಎದುರೇ ಈ ಮಾತು ಹೇಳಿರುವುದು ಗಮನಾರ್ಹ. ಯಡಿಯೂರಪ್ಪ ಕೂಡಾ. ದೊಡ್ಡವರು ಹೇಳಿದ್ದನ್ನು ತಲೆಯಲ್ಲಿ ಇಟ್ಟುಕೊ, ತಿದ್ದಿಕೊ ಎಂದಿರುವುದು ಕೂಡಾ ಅಷ್ಟೇ ಪ್ರಮುಖವಾದ ಅಂಶ.



