ಸದನದ ಒಳಗೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ. ಹೀಗಿದ್ದರೂ ಮಹಜರು ಮಾಡುತ್ತೇವೆ ಎಂದು ಪೊಲೀಸರು ಕೇಳಿದ್ದರು. ನಾನು ಅನುಮತಿ ನೀಡಿಲ್ಲ. ಒಂದು ವೇಳೆ ಸದನದ ಒಳಗಿನ ಪ್ರಕ್ರಿಯೆಗೆ ಪೊಲೀಸರು ಹಸ್ತಕ್ಷೇಪ ಮಾಡಲು ಮುಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಮುಗಿದ ಅಧ್ಯಾಯ. ಈ ಪ್ರಕರಣವನ್ನು ನೈತಿಕತೆ ಸಮಿತಿಗೆ ನೀಡುವ ಅಗತ್ಯ ಇಲ್ಲ. ಹೀಗೆಂದು ಹೇಳುವ ಮೂಲಕ ಸಭಾಪತಿ ಬಸವರಾಜ ಹೊರಟ್ಟಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
ಹಕ್ಕುಚ್ಯುತಿ ಬಗ್ಗೆ ದೂರು ಬಂದರೆ ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಮಹಿಳಾ ಆಯೋಗದಿಂದ ಮಾಹಿತಿ ಕೇಳಿದರೆ ಉತ್ತರ ನೀಡುತ್ತೇವೆ ಎಂದಿರುವ ಹೊರಟ್ಟಿ ಅರೆಸ್ಟ್ ಆದ ನಂತರ ರಾತ್ರಿ 9 ಗಂಟೆಗೆ ಪೊಲೀಸರು ತಮಗೆ ಮಾಹಿತಿ ಕೊಟ್ಟರು. ವಿಧಾನಪರಿಷತ್ ಸದಸ್ಯರ ಮೇಲೆ ಹಲ್ಲೆಗೆ ಮುಂದಾದವರನ್ನು ಬಂಧಿಸಲು ಸೂಚಿಸಲಾಗಿದೆ. ಮೊಗಸಾಲೆಯಲ್ಲಿ ದಾಳಿ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಆದೇಶ ನೀಡಿದ್ದೇನೆ ಎಂದಿದ್ದಾರೆ.
ಹೊರಟ್ಟಿ ಅವರ ಪ್ರಕಾರ ಸಿಟಿ ರವಿ ವಿರುದ್ಧ ಸಾಕ್ಷಿಗಳಿಲ್ಲ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಘಟನೆಯ ವಿಡಿಯೋ ಸಾಕ್ಷಿ ಹೊರಬಿಟ್ಟಿದ್ದಾರೆ. ಆ ವಿಡಿಯೋದಲ್ಲಿ ಸಿಟಿ ರವಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ʻಪ್ರಾಸ್ಟಿಟ್ಯೂಟ್ʼ ಎಂದು ಹಲವು ಬಾರಿ ಕೂಗಿರುವುದು ದಾಖಲಾಗಿದೆ. ಆದರೆ ಆ ವಿಡಿಯೋ ಎಷ್ಟು ಸತ್ಯವೋ.. ಎಷ್ಟು ತಿರುಚಿದ್ದೋ.. ಗೊತ್ತಿಲ್ಲ. ಇದು ಬಿಜೆಪಿಯವರ ಆರೋಪ.
ಹಾಗಾದರೆ ಈ ಪ್ರಕರಣ ಮುಗಿದ ಅಧ್ಯಾಯವೇ.. ಇಲ್ಲ. ಸಭಾಪತಿಯವರ ತೀರ್ಮಾನ ಪ್ರಶ್ನೆ ಮಾಡಿ ಲಕ್ಷ್ಮೀ ಹೆಬ್ಬಾಳ್ಕರ್ ಕೋರ್ಟಿಗೆ ಹೋಗಬಹುದು. ಜನಪ್ರತಿನಿಧಿಗಳ ನ್ಯಾಯಾಲಯ, ಹೈಕೋರ್ಟ್ ಅಥವಾ ಸುಪ್ರೀಂಕೋರ್ಟುಗಳಲ್ಲಿ ಪ್ರಶ್ನೆ ಮಾಡಬಹುದು. ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಆಗಬಹುದು. ಆದರೆ ಸಂವಿಧಾನಿಕ ಪೀಠ ಏನು ಹೇಳುತ್ತದೆಯೋ, ಈಗಲೇ ಹೇಳಲು ಸಾಧ್ಯವಾಗದು.
ಇನ್ನು ಹೊರಟ್ಟಿಯವರಿಗೂ 4 ಅವಕಾಶಗಳಿವೆ.
ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ವಿಡಿಯೋವನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಕಳಿಸಬಹುದು. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಸಿಟಿ ರವಿ ತಪ್ಪು ಮಾಡಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಬಹುದು. ವಿಡಿಯೋ ʻತಿರುಚಿದ್ದುʼ ಎನ್ನುವುದು ಸಾಬೀತಾದರೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧವೂ ಕ್ರಮ ಕೈಗೊಳ್ಳಬಹುದು.
ಸಿಟಿ ರವಿ ಅವರನ್ನು ಪರಿಷತ್ತಿನಿಂದ ಸಸ್ಪೆಂಡ್ ಮಾಡಬಹುದು. ಎಷ್ಟು ದಿನ, ತಿಂಗಳು ಎನ್ನುವುದರ ನಿರ್ಧಾರ ಹೊರಟ್ಟಿ ಅವರದ್ದೇ.
ಸಿಟಿ ರವಿ ಅವರನ್ನು ವಜಾ ಮಾಡುವ ಅವಕಾಶವೂ ಇದೆ. ಇದುವರೆಗೆ ಭಾರತದ ಇತಿಹಾಸದಲ್ಲಿ ಆ ರೀತಿಯ ಘಟನೆ ಜರುಗಿಲ್ಲ.
ಕಚೇರಿಯಲ್ಲಿ ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರನ್ನೂ ಕರೆಸಿ ಕ್ಷಮೆ ಕೇಳಿಸಿ, ರಾಜೀ ಮಾಡಿಸಿ ವಿವಾದವನ್ನು ಇತ್ಯರ್ಥ ಮಾಡಲೂಬಹುದು. ಸದನದಲ್ಲಿ ಛೀಮಾರಿ ಹಾಕಬಹುದು.
ಆದರೆ ಸದ್ಯಕ್ಕೆ ರವಿ/ಲಕ್ಷ್ಮೀ ಸಮರ ಮುಗಿದ ಅಧ್ಯಾಯ. ಆದರೆ : ಶಾಸಕಾಂಗ ಹಾಗೂ ಕಾರ್ಯಾಂಗದ ವ್ಯಾಪ್ತಿಯ ಜಿಜ್ಞಾಸೆ ಹುಟ್ಟುಹಾಕಿರುವ ಶಾಸಕ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಪ್ರಕರಣವನ್ನು ನೈತಿಕ ಸಮಿತಿಗೆ (ಎಥಿಕ್ಸ್ ಕಮಿಟಿ) ನೀಡಿದ್ದರೆ ವ್ಯಾಪ್ತಿ ಕುರಿತ ಗೊಂದಲ ನಿವಾರಿಸಬಹುದಿತ್ತು. ಈಗಲೂ ಅದಕ್ಕೆ ಅವಕಾಶವಿದೆ. ಸಭಾಪತಿಯವರು ಇಂಥ ತೀರ್ಮಾನ ಕೈಗೊಂಡರೆ ಅನಗತ್ಯ ತಿಕ್ಕಾಟ ತಪ್ಪಿಸುವ ದಿಸೆಯಲ್ಲಿ ಪ್ರಯತ್ನ ನಡೆಯಬಹುದು. ಹೀಗಂತ ಕಾನೂನು ತಜ್ಞರು ಹಾಗೂ ಹಿರಿಯ ಸಂಸದೀಯ ಪಟುಗಳು ಅಭಿಪ್ರಾಯಪಡುತ್ತಾರೆ.



