ಲಕ್ಷ್ಮೀ ಹೆಬ್ಬಾಳ್ಕರ್ ಸಿಟಿ ರವಿ ಪ್ರಕರಣ ವಿಚಿತ್ರ ತಿರುವು ಪಡೆಯುತ್ತಿದೆ. ಈ ಪ್ರಕರಣದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರ ಸ್ಥಾನವೇ ಅಲುಗಾಡುತ್ತಿದೆ. ಆದರೆ ಇದನ್ನು ನಿರ್ಧಾರ ಮಾಡುವುದು ʻಸಾಹುಕಾರ್ ಬ್ರದರ್ಸ್ʼ ಎನ್ನುವುದೇ ಈಗಿನ ಕುತೂಹಲ. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿಟಿ ರವಿ ಜಟಾಪಟಿಗೆ ಹೊರಟ್ಟಿ ಬದಲಾವಣೆ ಖಚಿತ ಎನ್ನಲಾಗಿದೆ. ಕಾರಣ ಎಲ್ಲರಿಗೂ ಗೊತ್ತಿರುವಂಥದ್ದ. ಸಿಐಡಿ ತನಿಖೆಗೆ ಸಭಾಪತಿ ಬಸವರಾಜ ಹೊರಟ್ಟಿ ಅನುಮತಿ ಕೊಡುತ್ತಿಲ್ಲ. ಸಿಐಡಿ ಅನುಮತಿಗಾಗಿ ಸಭಾಪತಿಗಳನ್ನೇ ಬದಲಿಸಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ. ಏಕೆಂದರೆ ಸಭಾಪತಿ ಆದೇಶ ಮೀರಿ ಸಿಐಡಿ ತನಿಖೆ ನಡೆಸುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಹೊರಟ್ಟಿಯವರನ್ನೇ ಸಭಾಪತಿ ಹುದ್ದೆಯಿಂದ ಕೆಳಗಿಳಿಸಿದರೆ ಹೇಗೆ ಎಂಬುದು ಕಾಂಗ್ರೆಸ್ ಪ್ಲಾನ್. ಆದರೆ ಕಾಂಗ್ರೆಸ್ ಪ್ಲಾನ್ ಸಕ್ಸಸ್ ಆಗಬೇಕು ಎಂದರೆ ಅದಕ್ಕೆ ಜಾರಕಿಹೊಳಿ ಬ್ರದರ್ಸ್ ಕೃಪೆ ಇರಲೇಬೇಕು.
ವಿಧಾನಪರಿಷತ್ ನಂಬರ್ ಗೇಮ್ ಲೆಕ್ಕ :
ಸಭಾಪತಿ ಹೊರಟ್ಟಿ ಬದಲಾವಣೆಗೆ ನಂಬರ್ ಗೇಮ್ ಬಹಳ ಮುಖ್ಯ. ವಿಧಾನ ಪರಿಷತ್ʻನಲ್ಲಿ ಒಟ್ಟು ಸದಸ್ಯರು 75. ಸದ್ಯಕ್ಕೆ ಮೇಲ್ಮನೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 33 ಇದೆ. ಬಿಜೆಪಿ ಬಲ 29 ಇದ್ದರೂ, ಜೆಡಿಎಸ್ ಬಲ 8 ಇರುವ ಕಾರಣ ಬಿಜೆಪಿ + ಜೆಡಿಎಸ್ ಒಟ್ಟು ಬಲ 38 ಆಗಿದೆ. ಅಂದರೆ ಕಾಂಗ್ರೆಸ್ ಸಭಾಪತಿಗಳನ್ನು ಕೆಳಗಿಳಿಸಲು ಮುಂದಾದರೂ, ಹೊರಟ್ಟಿಯವರನ್ನು ಕೆಳಗಿಳಿಸುವುದು ಅಸಾಧ್ಯ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಜನವರಿ 27ಕ್ಕೆ ಜೆಡಿಎಸ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವಧಿ ಮುಕ್ತಾಯವಾಗಲಿದೆ. ಆಗ.. ಅಂದರೆ ತಿಪ್ಪೇಸ್ವಾಮಿ ಅವಧಿ ಮುಕ್ತಾಯವಾದಾಗ ಸಂಖ್ಯಾಬಲ 37ಕ್ಕೆ ಕುಸಿಯಲಿದೆ. ಇನ್ನು ಇದೇ ವೇಳೆ ಮೇಲ್ಮನೆಯಲ್ಲಿ ಸದ್ಯಕ್ಕೆ 3 ನಾಮನಿರ್ದೇಶನ ಸ್ಥಾನವೂ ತಿಪ್ಪೇಸ್ವಾಮಿ ಸ್ಥಾನ ಖಾಲಿ ಇರಲಿದೆ. ಆ ಖಾಲಿ ಸ್ಥಾನಗಳನ್ನು ನೇಮಕ ಮಾಡಿದರೆ ಕಾಂಗ್ರೆಸ್ ಬಲವೂ 37 ಆಗಲಿದೆ. ಆಗ ಬಿಜೆಪಿ+ಜೆಡಿಎಸ್ ಮೈತ್ರಿಯೂ 37, ಕಾಂಗ್ರೆಸ್ ಕೂಡಾ 37 ಆಗಲಿದೆ. ಆಗ ಒಬ್ಬ ಪಕ್ಷೇತರರ ಬೆಂಬಲ ಸಿಕ್ಕರೆ ಬಸವರಾಜ ಹೊರಟ್ಟಿ ಅವರನ್ನು ಕೆಳಗಿಳಿಸಬಹುದು.
ಇಲ್ಲಿಯೇ ಜಾರಕಿಹೊಳಿ ಬ್ರದರ್ಸ್ ಮುಖ್ಯ :
ಮೇಲ್ಮನೆಯಲ್ಲಿ ಪಕ್ಷೇತರ ಶಾಸಕರಾಗಿರುವುದು ಜಾರಕಿಹೊಳಿ ಬ್ರದರ್ ಲಖನ್ ಜಾರಕಿಹೊಳಿ. ಈ ಲಖನ್ ಜಾರಕಿಹೊಳಿ ಬೆಳಗಾವಿ ಸಾಹುಕಾರ್ ಸಹೋದರರಲ್ಲಿ ಒಬ್ಬರು. ಬಿಜೆಪಿಯ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ಸಿನ ಸತೀಶ್ ಜಾರಕಿಹೊಳಿ.. ಇಬ್ಬರಿಗೂ ತಮ್ಮನಾಗಬೇಕಿರುವ ಲಖನ್ ಜಾರಕಿಹೊಳಿ, ಯಾರ ಪರ ಮತ ಹಾಕುತ್ತಾರೆ ಎಂಬುದರ ಮೇಲೆ ಹೊರಟ್ಟಿ ಭವಿಷ್ಯ ನಿರ್ಧಾರವಾಗಲಿದೆ.ಲಖನ್ ಯಾರಿಗೆ ವೋಟ್ ಹಾಕುತ್ತಾರೋ.. ಅವರೇ ಮೇಲ್ಮನೆ ಸಭಾಪತಿಯಾಗುತ್ತಾರೆ.
ಸರ್ಕಾರ ಕಾಂಗ್ರೆಸ್ಸಿನದ್ದು. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ವಿಷಯದಲಿಲ ತಮ್ಮದೇ ಸರ್ಕಾರ, ತಮ್ಮದೇ ಜಿಲ್ಲೆಯಲ್ಲಿ ತಮ್ಮ ಮಾತು ನಡೆಯಲಿಲ್ಲ. ಸಿಟಿ ರವಿ ಅವರನ್ನು ನಡೆಸಿಕೊಂಡ ರೀತಿ ಸರಿ ಇರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು ಸತೀಶ್ ಜಾರಕಿಹೊಳಿ. ಡಿಕೆಶಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಹಠದಿಂದಾಗಿ ಪಕ್ಷಕ್ಕೆ ಡ್ಯಾಮೇಜ್ ಆಯ್ತು ಜೊತೆಗೆ ತಮ್ಮದೇ ಜಿಲ್ಲೆಯಲ್ಲಿ ತಮ್ಮ ಮಾತು ನಡೆಯಲಿಲ್ಲ ಎಂದು ಸತೀಶ್ ಅಸಮಾಧಾನಗೊಂಡಿದ್ದರು. ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಸತೀಶ್ ಜಾರಕಿಹೊಳಿ ಬಾಂಧವ್ಯ ಅಷ್ಟೇನೂ ಚೆನ್ನಾಗಿಲ್ಲ. ಇನ್ನು ಬಿಜೆಪಿಯಲ್ಲಿರುವ ರಮೇಶ್ ಜಾರಕಿಹೊಳಿ ವಿಷಯವನ್ನಂತೂ ಹೇಳುವುದೇ ಬೇಡ.
ಹೊರಟ್ಟಿಯವರನ್ನು ಕೆಳಗಿಳಿಸಿದರೆ ಲಾಭವಾಗುವುದು ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ಅವರಿಗೆ. ಈ ಇಬ್ಬರೂ ರಮೇಶ್ ಮತ್ತು ಸತೀಶ್ ಇಬ್ಬರಿಗೂ ಒಂದರ್ಥದಲ್ಲಿ ಶತ್ರುಗಳೇ. ಇವರು ಮೇಲುಗೈ ಸಾಧಿಸಲು ಬಿಟ್ಟರೆ ಜಾರಕಿಹೊಳಿ ಅವರ ಕೋಟೆಗೇ ಹೊಡೆತ ಬೀಳಲಿದೆ. ಇನ್ನು ರಮೇಶ್ ಜಾರಕಿಹೊಳಿ ಅವರು ಕಟ್ಟಿಕೊಂಡಿರುವ ವಿಜಯೇಂದ್ರ ವಿರೋಧಿ ಗುಂಪಿನಲ್ಲಿ ಸಿಟಿ ರವಿ ಅವರೂ ಇದ್ದಾರೆ. ಹೀಗಿರುವಾಗ ಜಾರಕಿಹೊಳಿ ಬ್ರದರ್ಸ್, ಹೊರಟ್ಟಿ ಅವರನ್ನು ಕೆಳಗಿಳಿಯುವುದಕ್ಕೆ ಬಿಡುತ್ತಾರಾ.. ಕುತೂಹಲ ಇದೆ.



