ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿಟಿ ರವಿ ವಿಷಯದಲ್ಲಿ ದೊಡ್ಡ ಹಂಗಾಮವೇ ನಡೆದಿದೆ. ವಿಷಯವೇನೆಂದರೆ ಸಿಟಿ ರವಿ ಅವರು ಒಂದು ರೀತಿಯಲ್ಲಿ ಒಂಟಿಯಾಗಿದ್ದಾರೆ. ಅವರು ಹಾಗೆ ಹೇಳಿರಬಹುದು ಎನ್ನುವ ಜನಾಭಿಪ್ರಾಯವೇ ಹೆಚ್ಚಾಗಿದೆ. ರಾಜಕೀಯವಾಗಿ ಜೊತೆಯಲ್ಲಿರುವವರೂ ಕೂಡಾ, ಸೈಡಿಗೇ ಬಂದು ಸಿಟಿ ರವಿ ಹಾಗೆ ಹೇಳಬಾರದಿತ್ತು ಎನ್ನುತ್ತಾರೆ. ಹೀಗಿದ್ದರೂ ಸರ್ಕಾರದ ವಿರುದ್ಧ ಮುಗಿಬಿದ್ದಿರುವುದೇಕೆ ಎಂದರೆ, ಸರ್ಕಾರ ಪ್ರತಿ ಹೆಜ್ಜೆಗೂ ತಪ್ಪುಗಳನ್ನು ಮಾಡಿದೆ. ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಮಾಡಿರುವ ಎಡವಟ್ಟುಗಳಿಗೆ ಲೆಕ್ಕವೇ ಇಲ್ಲ. ಅಂದಹಾಗೆ ಇದೆಲ್ಲ ಶುರುವಾಗಿದ್ದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತ ಚರ್ಚೆಯ ವೇಳೆ ಎನ್ನುವುದಕ್ಕಿಂತ ಇನ್ನೊಂದು ವಿಡಂಬನೆ ಇಲ್ಲ ಎನ್ನಬಹುದು.
ಸಿಟಿ ರವಿ ಮಾಡಿದ ತಪ್ಪು : ಸದನ ಮುಂದೂಡಿಕೆಯಾಗಿದ್ದಾಗ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಜಗಳಕ್ಕೆ ನಿಂತಿದ್ದು. ನಾಲಗೆ ಹದ್ದುಮೀರಿದ್ದು.
ಸರ್ಕಾರ ಮಾಡಿದ ತಪ್ಪುಗಳು :
ವಿಧಾನ ಪರಿಷತ್ ವ್ಯಾಪ್ತಿಯ ಒಳಗೆ ಸಭಾಪತಿ ಹೊರಟ್ಟಿಯವರ ಅನುಮತಿಯಿಲ್ಲದೆ ಪೊಲೀಸರು ಪ್ರವೇಶ ಮಾಡಿದ್ದು
ಸಭಾಪತಿಯವರ ಅನುಮತಿ ಇಲ್ಲದೆ ಸಿಟಿ ರವಿ ಅವರನ್ನು ಅರೆಸ್ಟ್ ಮಾಡಿದ್ದು
ಸದನದ ಒಳಗೆ ನಡೆದ ಗಲಾಟೆಯ ವಿಷಯದಲ್ಲಿ ಪೊಲೀಸರಾಗಲೀ, ಕೋರ್ಟ್ ಆಗಲೀ ಮಧ್ಯಪ್ರವೇಶ ಮಾಡುವಂತೆಯೇ ಇಲ್ಲ. ಹೀಗಿದ್ದರೂ ಕಾನೂನು ವ್ಯಾಪ್ತಿ ಮೀರಿ ವರ್ತಿಸಿದ್ದು
ಸಿಟಿ ರವಿ ಅವರನ್ನು ಪೊಲೀಸರು ಒಬ್ಬ ರೌಡಿಯೇನೋ ಎನ್ನುವಂತೆ ನಡೆಸಿಕೊಂಡಿರುವುದು
ಸಿಟಿ ರವಿ ವಿರುದ್ಧ ಗಂಭೀರ ಸೆಕ್ಷನ್ ಅಡಿ ಕೇಸ್ ದಾಖಲಾಗಿರಲಿಲ್ಲ. 7 ವರ್ಷಕ್ಕೂ ಹೆಚ್ಚಿನ ಶಿಕ್ಷೆ ಆಗುವ ಸೆಕ್ಷನ್ʻಗಳಡಿ ಕೇಸ್ ದಾಖಲಾಗಿದ್ದರೆ ಮಾತ್ರ ತಕ್ಷಣ ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ. ವಿಚಾರಣೆಯಾಗಿ ತಪ್ಪು ಎಂದು ಸಾಬೀತಾದರೂ ಆಗುವುದು ಗರಿಷ್ಠ 3 ವರ್ಷದ ಶಿಕ್ಷೆ. ಹೀಗಿರುವಾಗ 41ಎ ಅಡಿಯಲ್ಲಿ ಪೊಲೀಸರು ನೋಟಿಸ್ ಕೊಡಬಹುದಿತ್ತೇ ಹೊರತು, ತಕ್ಷಣ ಅರೆಸ್ಟ್ ಮಾಡುವಂತಿರಲಿಲ್ಲ. ಹೀಗಿದ್ದರೂ ಪೊಲೀಸರು ತಮ್ಮ ವ್ಯಾಪ್ತಿ ಮೀರಿ ವರ್ತಿಸಿದರು.
ಸುವರ್ಣ ಸೌಧ ಬರುವುದು ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಗೆ. ಅದನ್ನು ದಾಟಿ ಬೆಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಗೆ ಕರೆದುಕೊಂಡು ಹೋಗಿದ್ದು ಮತ್ತೊಂದು ಪ್ರಮಾದ.
ಇನ್ನು ಒಂದು ಕಡೆ ನಿಲ್ಲದಂತೆ 500 ಕಿ.ಮೀ.ಗೂ ಹೆಚ್ಚು ಸುತ್ತಾಡಿಸಿದ್ದು ಭಯ ಹುಟ್ಟಿಸುವ ತಂತ್ರ. ಪೊಲೀಸರು ಈ ರೀತಿ ಮಾಡುವ ಅಗತ್ಯವೂ ಇರಲಿಲ್ಲ.
ಸಿಟಿ ರವಿ ಅವರ ರಕ್ಷಣೆಗಾಗಿ ಪೊಲೀಸರು ಸುತ್ತಾಡಿಸಿದ್ದಾರೆ ಎನ್ನುವುದು ಹಾಸ್ಯಾಸ್ಪದ. ಏಕೆಂದರೆ ಪೊಲೀಸ್ ಠಾಣೆ ಸುರಕ್ಷತಾ ಕೇಂದ್ರವೇ ಹೊರತು, ಠಾಣೆಯ ಹೊರಗಿನ ರಸ್ತೆಗಳಲ್ಲ.
ಇನ್ನು ಸಿಟಿ ರವಿ ಕೊಟ್ಟ ದೂರನ್ನು ದಾಖಲಿಸಿಕೊಳ್ಳದೇ ಇರುವುದು, ಅರೆಸ್ಟ್ ಆದ ತಕ್ಷಣ ಮೆಡಿಕಲ್ ಟೆಸ್ಟ್ ಮಾಡಿಸದೇ ಇರುವುದು, ರಕ್ತ ಬರುವಂತೆ ಏಟು ಬಿದ್ದಿರುವುದು.. ಇವೆಲ್ಲ ಕರ್ನಾಟಕ ಪೊಲೀಸ್ ವ್ಯವಸ್ಥೆಗೆ ಮಾಡಿರುವ ಅವಮಾನವೇ ಹೊರತು, ಮತ್ತೇನಲ್ಲ.
ಸದನದ ನಿಯಮ 198 ರ ಪ್ರಕಾರ ಸದನದ ವ್ಯಾಪ್ತಿಯಲ್ಲಿ ಜನಪ್ರತಿನಿಧಿಯೊಬ್ಬರ ಅರೆಸ್ಟ್ ಮಾಡುವುದಕ್ಕೆ ಸಭಾಪತಿ/ಸ್ಪೀಕರ್ ಅನುಮತಿ ಕಡ್ಡಾಯ.
ನಿಯಮ 199ರ ಪ್ರಕಾರ ಸದನದ ಹೊರಗೆ ಅರೆಸ್ಟ್ ಆದರೆ ತಕ್ಷಣ ಮ್ಯಾಜಿಸ್ಟ್ರೇಟ್ ಮೂಲಕ ಸ್ಪೀಕರ್/ಸಭಾಪತಿಗಳಿಗೆ ಮಾಹಿತಿ ನೀಡಬೇಕು.
ಇನ್ನು ಪ್ರಕರಣದ ಬಗ್ಗೆ ಸಭಾಪತಿ ಬಸರವಾಜ ಹೊರಟ್ಟಿ ಪರಿಶೀಲನೆ ಮಾಡಿ, ಇಬ್ಬರಿಗೂ ಸಂಯಮದ ಪಾಠ ಹೇಳಿ ರೂಲಿಂಗ್ ಕೊಟ್ಟಾಗಿದೆ. ಇದು ಹೇಗೆ ಪೊಲೀಸರ ವ್ಯಾಪ್ತಿಗೆ ಬರಲು ಸಾಧ್ಯ..?
ಕಾಂಗ್ರೆಸ್ಸಿಗರ ವಾದವನ್ನೂ ಕೇಳಿ..
ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಗಲಾಟೆಯಾಗಿದ್ದು ಸದನದ ಕಲಾಪ ಮುಂದೂಡಿದ್ದ ಸಮಯದಲ್ಲಿ. ಗಲಾಟೆ ನಡೆದಾಗ ಕುರ್ಚಿಯಲ್ಲಿ ಸಭಾಪತಿಗಳು ಇರಲಿಲ್ಲ. ಅಲ್ಲದೆ ಸಿಟಿ ರವಿ ಅರೆಸ್ಟ್ ಆಗಿದ್ದು ಸದನದ ಕಲಾಪ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆ ಆದ ಮೇಲೆ. ಹೀಗಾಗಿ ಸಿಟಿ ರವಿ ಅರೆಸ್ಟ್ ಮಾಡಿದ್ದು ಕಾನೂನು ಪ್ರಕಾರ ಸರಿ ಎನ್ನುತ್ತಿದೆ ಕಾಂಗ್ರೆಸ್.



