ಬಿಜೆಪಿ ಜಾತಿಗಳನ್ನು ಒಡೆಯುತ್ತಿದೆ. ಧರ್ಮಗಳನ್ನು ಒಡೆಯುತ್ತಿದೆ. ಕೋಮುಗಳ ನಡುವೆ ಬೆಂಕಿ ಹಚ್ಚುತ್ತದೆ. ಕೋಮು ದ್ವೇಷ ಇಲ್ಲದೆ ಅದು ರಾಜಕೀಯ ಮಾಡುವುದಕ್ಕೆ ಬರಲ್ಲ ಎನ್ನುವುದು ವಿರೋಧಿಗಳ ಟೀಕೆ. ಜಾತಿಗಳನ್ನು ಒಡೆಯುವುದು ಕಾಂಗ್ರೆಸ್. ನಾವು ಇಲ್ಲದಿದ್ದರೆ.. ಇಷ್ಟು ಹೊತ್ತಿಗೆ ಹಿಂದೂಗಳ ಸರ್ವನಾಶ ಆಗುತ್ತಿತ್ತು ಎನ್ನುವ ಅರ್ಥದ ಸಮರ್ಥನೆ ಬಿಜೆಪಿ ನಾಯಕರಿಂದ ಬರುತ್ತದೆ.
ಆದರೆ.. ಇಲ್ಲಿ ಎರಡು ಹೇಳಿಕೆಗಳಿವೆ. ಎರಡೂ ಹೇಳಿಕೆಗಳನ್ನು ನೋಡಿ.
ಕುರುಬರು ಬಿಜೆಪಿಗೆ ವೋಟ್ ಹಾಕಬೇಡಿ : ಸಿಎಂ ಸಿದ್ದರಾಮಯ್ಯ
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಬ್ಬ ಕುರುಬ ಸಮುದಾಯದವರಿಗೂ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪನವರಿಗೂ ಟಿಕೆಟ್ ತಪ್ಪಿಸಿದೆ. ಒಬ್ಬ ಮುಸಲ್ಮಾನನಿಗಾಗಲಿ, ಒಬ್ಬ ಕ್ರಿಶ್ಚಯನ್ನರಿಗಾಗಲಿ ಟಿಕೇಟು ನೀಡಿಲ್ಲ. ಮೋದಿಯನ್ನು ನೋಡಿ ಯಾಮಾರಬೇಡಿ. ಕುರುಬರು ಬಿಜೆಪಿಗೆ ಒಂದೇ ಒಂದು ವೋಟೂ ಹಾಕಬಾರದು ಎಂದಿದ್ಧಾರೆ ಸಿದ್ದರಾಮಯ್ಯ.
ಮೋದಿಯವರು ಕರಿಕಂಬಳಿ ವೇಷ ಹಾಕಿಕೊಂಡು ಭಾಷಣ ಮಾಡಿರುವುದು ಕೇವಲ ನಾಟಕವೇ ಹೊರತು, ಕುರುಬ ಸಮುದಾಯದ ಮೇಲಿನ ಪ್ರೀತಿಯಿಂದಲ್ಲ ಎಂದಿದ್ಧಾರೆ ಸಿದ್ದರಾಮಯ್ಯ. ಅಂದಹಾಗೆ ಇದೇ ಮೊದಲ ಬಾರಿಗೆ ಕುರುಬರು ಬಿಜೆಪಿಗೆ ಮತ ನೀಡಬಾರದು ಎಂಬ ಜಾತಿ ಕಾರ್ಡ್ ಬಳಸಿದ್ದಾರೆ. ಅದೂ ಬಹಿರಂಗವಾಗಿ.
ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಜಾತಿ ಲೆಕ್ಕಾಚಾರ, ತಂತ್ರಗಾರಿಕೆ ಮಾಡುತ್ತವಾದರೂ.. ಈ ರೀತಿ ಒಂದು ಜಾತಿಯವರಿಗೆ ಬಹಿರಂಗವಾಗಿ ಹೇಳೋದಿಲ್ಲ. ಕಳೆದ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಈ ಕೆಲಸ ಮಾಡಿದ್ದರು. ಈಗ ಸಿದ್ದರಾಮಯ್ಯ ಕುರುಬ ಸಮುದಾಯದವರಿಗೆ ಈ ಮಾತು ಹೇಳಿದ್ದಾರೆ. ಬಹಿರಂಗವಾಗಿ.
ಬಿಜೆಪಿ ಜಾತಿ ಧರ್ಮ ಒಡೆಯುತ್ತಿದೆ : ಡಿಸಿಎಂ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಕುರುಬರು ಬಿಜೆಪಿಗೆ ವೋಟ್ ಹಾಕಬೇಡಿ ಎನ್ನುತ್ತಿದ್ದರೆ.. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ಜಾತಿ, ಧರ್ಮ ಒಡೆಯೋ ಕೆಲಸ ಮಾಡಿದೆಯೇ ಹೊರತು ಮತ್ತೇನಿಲ್ಲ. ಅವರ ಕೆಲಸವೇ ಧರ್ಮ ಹಾಗೂ ಜಾತಿಗಳ ನಡುವೆ ತಂದಿಕ್ಕುವುದು ಎಂದಿದ್ಧಾರೆ.



