ಸಿಎಂ ಸಿದ್ದರಾಮಯ್ಯ ತಮ್ಮನ್ನು ತಾವು ಅಹಿಂದ ನಾಯಕ ಎಂದು ಕರೆಸಿಕೊಳ್ಳುತ್ತಾರೆ. ಹಾಗೆಂದು ಅವರು ಅಹಿಂದದವರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಕರ್ನಾಟಕದ ಅವರಿಗೆ ಮತ್ತು ಅವರ ಪಕ್ಷಕ್ಕೆ ವೋಟು ಹಾಕದೇ ಇರುವವರಿಗೂ ಅವರೇ ಮುಖ್ಯಮಂತ್ರಿ. ಹೀಗಿರುವಾಗ ಸಿಎಂ ಸ್ಥಾನ ಬದಲಾವಣೆ ಚರ್ಚೆ ಶುರುವಾಗುತ್ತಿದ್ದಂತೆ ಕುರುಬ vs ಒಕ್ಕಲಿಗ vs ಅಹಿಂದ vs ಲಿಂಗಾಯತ.. ಎಂಬ ಜಾತಿ ಜಗಳ ಶುರುವಾಗಿದೆ. ಈ ಜಾತಿ ಜಗಳ ಶುರುವಾಗುವುದಕ್ಕೂ ಕಾರಣ ಇದೆ. ವಾಸ್ತವ ಏನೆಂದರೆ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಉಳಿದರೆ.. ನೋ ಚೇಂಜ್. ಬದಲಾದರೆ.. ದಲಿತರಿಗೂ ಸೇರಿದಂತೆ ಯಾರಿಗೂ ಲಾಭ ಇಲ್ಲ.
ದಲಿತರ ಧ್ವನಿ ಗೆಲ್ಲೋದಿಲ್ಲ : ಮೊದಲಿಗೆ ದಲಿತ ಸಿಎಂ ಆಗುವುದಾದರೆ ಖರ್ಗೆ ಯಾಕಾಗಬಾರದು.. ಪರಮೇಶ್ವರ್ ಯಾಕಾಗಬಾರದು.. ಎಂದೆಲ್ಲ ಮಾತನಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರೂ ಆಗಿರುವ ಖರ್ಗೆ ಅವರು ತಮಗೆ ಸಿಎಂ ಸ್ಥಾನ ಕೊಡಿ ಎಂದು ಕೇಳೋದಕ್ಕೂ ಆಗಲ್ಲ. ಬೇರೆಯವರೂ ಹೇಳೋಕೆ ಆಗಲ್ಲ. ಹೇಳಿದರೆ ಅದನ್ನು ಸೋನಿಯಾ ಅಥವಾ ರಾಹುಲ್ ಗಾಂಧಿಯವರೇ ಹೇಳಬೇಕು.
ಇನ್ನು ಗೃಹ ಸಚಿವ ಪರಮೇಶ್ವರ್ ಹೆಸರು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಗೆ ಬರುತ್ತದೆ ಹೊರತು.. ಸೀರಿಯಸ್ ನೆಸ್ ಇಲ್ಲ. ಇದು ರಿಯಾಲಿಟಿ. ಪರಮೇಶ್ವರ್ ಅವರು ದಲಿತರೇ ಇರಬಹುದು.. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿದ ಮೇಲೆ ಹೈಕಮಾಂಡ್ ಡೈರೆಕ್ಟ್ ಕಾಂಟ್ಯಾಕ್ಟ್ ಇಲ್ಲ.
ಸತೀಶ್ ಜಾರಕಿಹೊಳಿ ಹೆಸರು ಏನಾಯ್ತು..?
ಸಿದ್ದರಾಮಯ್ಯ ಅವರ ಬ್ಲೂಬಾಯ್ ಎನ್ನಬಹುದು. ಸಿದ್ದಾಂತದ ವಿಚಾರಗಳಲ್ಲಿ ಸಿದ್ದರಾಮಯ್ಯ ಅವರಿಗಿಂತ ಖಡಕ್. ಟಿವಿ ಚಾನೆಲ್ಲುಗಳಿಗೆ ಬೇಕಾದಂತೆ ಬೈಟ್ ಕೊಡೋದಿಲ್ಲ, ವೇದಿಕೆಗಳಲ್ಲಿ ಅಬ್ಬರಿಸೋದಿಲ್ಲ ಅನ್ನೋದು ಪ್ಲಸ್ಸೂ ಹೌದು, ಮೈನಸ್ಸೂ ಹೌದು. ಬೆಳಗಾವಿಯಂತ ಬೆಳಗಾವಿಯನ್ನು ಹತೋಟಿಯಲ್ಲಿಟ್ಟುಕೊಂಡಿರೋ ವಾಲ್ಮೀಕಿ ನಾಯಕ. ಸರ್ಕಾರದಲ್ಲೂ ಒಳ್ಳೆಯ ಹೆಸರಿದೆ. ಸಿದ್ದು ಅವರಿಗೆ ಇವರ ಮೇಲೆ ಲವ್ ಸ್ವಲ್ಪ ಜಾಸ್ತೀನೇ ಇದೆ. ಆದರೆ.. ಬಹಿರಂಗವಾಗಿ ʻನಾನು ಈ ಬಾರಿಯ ಸಿಎಂ ಹುದ್ದೆʼ ರೇಸಿನಲ್ಲಿಲ್ಲʼ ಅಂತಿದ್ದಾರೆ.
ಲಿಂಗಾಯತರ ಧ್ವನಿ ಕಥೆ ಏನು..?
ಇನ್ನು ಲಿಂಗಾಯತರ ಪರವಾಗಿ ಎಂಬಿ ಪಾಟೀಲ್, ಈಶ್ವರ್ ಖಂಡ್ರೆ ಹೆಸರನ್ನು ಸಿದ್ದರಾಮಯ್ಯ ಬಣದವರೇ ತೇಲಿಬಿಟ್ಟಿದ್ದಾರೆ. ಇಬ್ಬರೂ ಶಾಸಕರಾಗಿ, ನಾಯಕರಾಗಿ ತಮ್ಮ ತಮ್ಮ ಕ್ಷೇತ್ರ ಮತ್ತು ಅಕ್ಕಪಕ್ಕದ ಎರಡು ಮೂರು ಜಿಲ್ಲೆಗಳಿಗಷ್ಟೇ ಸೀಮಿತವಾಗಿರುವ ನಾಯಕರು. ಇಬ್ಬರ ಹೆಸರೂ ಕೂಡಾ ಟೈಂ ಪಾಸ್ ಆಗಿ ಬರುತ್ತದೆಯೇ ಹೊರತು, ಎರಡೂ ಹೆಸರು ಬರ್ಖತ್ತಾಗೋದಿಲ್ಲ.
ಇನ್ನು ಮಠದವರ ಸಪೋರ್ಟ್ ಸಿಗುತ್ತದಾ ಎಂದರೆ.. ಎಂಬಿ ಪಾಟೀಲ್ ಬೆಂಬಲಿಸುವ ಲಿಂಗಾಯತರ ಸ್ವಾಮೀಜಿಗಳೆಲ್ಲ ಸಿದ್ದರಾಮಯ್ಯ ಪರವೇ ಇದ್ದಾರೆ ಈಶ್ವರ್ ಖಂಡ್ರೆ ಪರ ನಿಂತಿರೋವ್ರು ಸಿದ್ದರಾಮಯ್ಯ ವಿರುದ್ಧ ಇದ್ದಾರೆ. ಅಲ್ಲಿಗೆ ಸ್ವಾಮೀಜಿಗಳ ಸಪೋರ್ಟೂ ಸಿಗಲ್ಲ.
ಒಕ್ಕಲಿಗರ ಕಥೆ ಏನಾಗಬಹುದು..?
ಅವರಂತೆ.. ಇವರಂತೆ.. ಎಂದು ಯಾರ ಹೆಸರನ್ನೇ ಹೇಳಲಿ.. ಫೈಟ್ ಇರುವುದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಮಾತ್ರ. ಈಗ ಒಕ್ಕಲಿಗರ ಸ್ವಾಮೀಜಿಗಳು ಕೂಡಾ ಡಿಕೆ ಪರ ಮಾತನಾಡಿರೋದ್ರಿಂದ ವಿಷಯ ಸೀರಿಯಸ್ ಆಗಿದೆ. ಒಕ್ಕಲಿಗ ಮಠಾಧೀಶರು, ವೀರಶೈವ ಲಿಂಗಾಯತರಂತೆ ಅಲ್ಲ. ಆದಿಚುಂಚನಗಿರಿ ಮಠದವರು ಹೇಳಿದರೆ.. ಅದನ್ನು ಉಳಿದವರು ಫಾಲೋ ಮಾಡ್ತಾರೆ. ಹೀಗಾಗಿ.. ಇಲ್ಲಿ ಸಿದ್ದರಾಮಯ್ಯ ಅಥವಾ ಮತ್ತಿತರರು ʻಲಿಂಗಾಯತ ಮಠʼಗಳನ್ನು ನಿಭಾಯಿಸಿದಂತೆ ನಿಭಾಯಿಸಲು ಆಗುವುದಿಲ್ಲ.
ಡಿಕೆ ಶಿವಕುಮಾರ್ ಅವರಿಗೆ ಸ್ಥಾನ ಮಾನ ಸಿಗದೇ ಹೋದರೆ.. ಅವರು ಡಿಕೆ ಶಿವಕುಮಾರ್ ಅವರಿಂದ ದೂರವೇನೂ ಆಗುವುದಿಲ್ಲ. ಮುಂದಿನ ಬಾರಿ ಡಿಕೆ ಜೊತೆ ಗಟ್ಟಿಯಾಗಿ ನಿಲ್ಲಬಹುದಷ್ಟೇ.
ಸಿದ್ದರಾಮಯ್ಯ ಪವರ್ ಏನು..?
ಸಿದ್ದರಾಮಯ್ಯ ಅವರ ಶಕ್ತಿಯೇ ಅಹಿಂದ ಮತ್ತು ಫ್ರೀ ಹ್ಯಾಂಡ್. ಡಿಕೆ ಶಿವಕುಮಾರ್ ಅವರಂತೆ ತಮ್ಮ ಜೊತೆಗಿರುವವರ ಮೇಲೆ ದರ್ಬಾರ್ ಮಾಡಲ್ಲ. ಫ್ರೀ ಬಿಟ್ಟಿರ್ತಾರೆ.. ಫ್ರೀ ಹ್ಯಾಂಡ್ ಕೊಟ್ಟಿರ್ತಾರೆ. ಬೈದ್ರೂ ಪ್ರೀತಿಯಿಂದ ಬೈತಾರೆ. ದೌಲತ್ತು ತೋರಿಸಲ್ಲ. ದೊಡ್ಡ ದೊಡ್ಡ ತಪ್ಪುಗಳಿಗಷ್ಟೇ ಬ್ರೇಕ್ ಹಾಕ್ತಾರೆ. ಇದರಿಂದಾಗಿ ಸಿದ್ದರಾಮಯ್ಯ ಪರ ಶಾಸಕರ ಪ್ರೀತಿ ಜಾಸ್ತಿ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಒಮ್ಮೆ ಇವರ ಕ್ಷೇತ್ರಕ್ಕೆ ಬಂದು ಹೋದರೆ.. ಜಾರಿ ಹೋಗುವ ಒಂದಿಷ್ಟು ಮತಗಳು ಮತ್ತೆ ಬುಟ್ಟಿಗೆ ಬೀಳುತ್ತವೆ. ಆದರೆ.. ಅಂತಹ ಪವರ್ ಮೈಸೂರು ಭಾಗ ಬಿಟ್ಟರೆ ಬೇರೆ ಕಡೆ ಡಿಕೆಗೆ ಇಲ್ಲ. ಆ ಮೈಸೂರು ಭಾಗವೂ ಕೂಡಾ 2028ರ ಹೊತ್ತಿಗೆ ಏನಾಗುತ್ತದೋ.. ಗೊತ್ತಿಲ್ಲ.



