ಮೂಗಿನಿಂದ ರಕ್ತ ಸೋರಿಕೆಯಾದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನ ಜಯನಗರ ಅಪೊಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಬಳಿಕ ಡಿಸ್ ಚಾರ್ಜ್ ಮಾಡಲಾಗಿದೆ. ಇದರ ಬಗ್ಗೆ ಮಾತನಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ʻʻಜೆಡಿಎಸ್ ಹಾಗೂ ಬಿಜೆಪಿ ನಾಯಕರ ಕೋರ್ ಕಮಿಟಿ ಸಭೆ ನಡಿತಾ ಇತ್ತು. ಸುದ್ದಿಗೋಷ್ಟಿ ವೇಳೆ ಮೂಗಿನಿಂದ ರಕ್ತ ಸೋರಿಕೆಯಾಗಿದೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲʼʼ ಎಂದು ಹೇಳಿದ್ದಾರೆ. ಆದರೆ..
ಇದ್ದಕ್ಕಿದ್ದಂತೆ ಮೂಗಿನಲ್ಲಿ ರಕ್ತ ಸೋರಿಕೆಯಾಗಿದ್ದು ಏಕೆ..? ಒತ್ತಡ ಜಾಸ್ತಿ ಆಯ್ತಾ..? ನಿದ್ರೆ, ವಿಶ್ರಾಂತಿ ಸಿಗದೇ ಇದ್ದ ಕಾರಣಕ್ಕೆ ಹೀಗಾಯ್ತಾ..? ದೇಹದಲ್ಲಿ ಉಷ್ಣತೆ ಹೆಚ್ಚಾದ ಕಾರಣ ಹೀಗೆಲ್ಲ ಆಯ್ತಾ.? ಹಾರ್ಟ್ ಸಮಸ್ಯೆಗೂ ಇದಕ್ಕೂ ಏನಾದರೂ ಸಂಬಂಧ ಇದ್ಯಾ… ಈ ಪ್ರಶ್ನೆಗಳಿಗೆ ಸ್ವತಃ ಕುಮಾರಸ್ವಾಮಿಯವರೇ ಉತ್ತರ ಕೊಟ್ಟಿದ್ದಾರೆ.
ಮೂರು ಬಾರಿ ವಾಲ್ ರಿಪ್ಲೇಸ್ ಮೆಂಟ್ ಆಗಿದೆ. ಬ್ಲಡ್ ತಿನ್ನರ್ ಮಾತ್ರೆ ತಗೊತ್ತಿನಿ. ಆ ಬ್ಲಡ್ ತಿನ್ನರ್ ತೆಗೆದುಕೊಳ್ಳೋದು ಬ್ಲಡ್ ಕ್ಲಾಟ್ ಆಗಬಾರದ್ದು ಅಂತ. ಒತ್ತಡಗಳು ಜಾಸ್ತಿಯಾದಾಗ, ರೆಸ್ಟ್ ಲೆಸ್ ಕೆಲಸ ಮಾಡಿದಾಗ. ಮೂಗಿನಿಂದ ರಕ್ತ ಸ್ರಾವ ಆಗೋದು ಸಹಜ ಆಗಿದೆ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದಿದ್ದಾರೆ.
ನನಗೆ ಸಿಕ್ಕಿರುವ ಸಮಯ ಒಂದೊಂದು ಕ್ಷಣವು ಮುಖ್ಯ. ಜನರಿಗೆ ಏನಾದ್ರು ಒಂದು ಸಹಾಯ ಮಾಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಜನರ ಕೊಡುಗೆ ಕೊಡಬೇಕು. ಜನತೆ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು. ಅದರಿಂದ ಒಂದು ತಾತ್ಕಾಲಿಕ ಸಮಸ್ಯೆ ಆಗಿದೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಕುಮಾರಸ್ವಾಮಿ.
ಆಗಾಗ ಬಂದು ಹೆಲ್ತ್ ಚೆಕಪ್ ಮಾಡಿಸಿಕೊಳ್ತಿದ್ರು. ಅದ್ರೆ ಇತ್ತೀಚಿನ ಕೆಲಸದ ಒತ್ತಡಗಳು ಇತ್ತು. ಕಳೆದ 15 ದಿನಗಳಿಂದ ನಿರಂತರ ಓಡಾಟ ಇತ್ತು. ಬೆಳಗ್ಗೆ 4.30 ಕ್ಕೆ ಎದ್ದೆಳ್ತಾ ಇದ್ರು. ರಾತ್ರಿ 12 ತನಕ ಪುಸ್ತಕ ಓದ್ತಾ ಇರ್ತಾರೆ. ಈಗ ಎಕೋ, ಸೇರಿ ಹಲವು ಪರೀಕ್ಷೆಗಳು ನಡೆದಿವೆ, ಎಲ್ಲವೂ ಸರಿ ಹೋಗಲಿದೆ ಅನ್ನೋದು ನಿಖಿಲ್ ಕುಮಾರಸ್ವಾಮಿ ಅವರ ಮಾತು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಸ್ಪತ್ರೆಗೆ ಆಗಮಿಸಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿ, ವೈದ್ಯರ ಬಳಿ ಮಾಹಿತಿ ಪಡೆದುಕೊಂಡಿದ್ಧಾರೆ. ಕುಮಾರಸ್ವಾಮಿ ಅವರಿಗೆ ಆಯಾಸ, ಕೆಲಸದ ಒತ್ತಡ ಇರಬಹುದು. ವೈದ್ಯರು ಚೆಕಪ್ ಮಾಡ್ತಾ ಇದ್ದಾರೆ. ಆತಂಕ ಪಡುವಂತಹದು ಏನು ಇಲ್ಲ. ನಮ್ಮ ತಂದೆ ಸಹ ಆತಂಕ ಪಡ್ತಾ ಇದ್ದರು. ಹೀಗಾಗಿ ಭೇಟಿ ಮಾಡಿ ವಿಚಾರಿಸಲು ಬಂದೆ. ನಾನು ಕೂಡ ಮಾತನಾಡಿದ್ದೇನೆ, ಆರಾಮವಾಗಿದ್ದಾರೆ. ಸಿಟಿ ಸ್ಕ್ಯಾನ್ ಸೇರಿ ಕೆಲವು ಪರೀಕ್ಷೆಗಳು ಮಾಡ್ತಾ ಇದ್ದಾರೆ. ಯಾರು ಗಾಬರಿ ಪಡುವಂತಹದು ಏನು ಇಲ್ಲ ಎಂದು ಹೇಳಿದ್ದಾರೆ.
ಸಂಸದ ಡಾ. ಸಿ. ಎನ್. ಮಂಜುನಾಥ್ ಮಾತನಾಡಿ, ಕುಮಾರಸ್ವಾಮಿ ಅವರಿಗೆ ಕೆಲವು ಗಂಟೆಗಳ ಹಿಂದೆ ಮೂಗಿನಿಂದ ರಕ್ತ ಸೋರಿತ್ತು. ಇಎನ್ ಟಿ ಪರೀಕ್ಷೆಗಳು ಆಗಿವೆ. ಎಲ್ಲಾ ನಾರ್ಮಲ್ ಇದೆ. ನಾನು ಕೂಡ ಚೆಕ್ ಮಾಡಿದ್ದೆ. ಅವರಿಗೆ ಬ್ಲಡ್ ತಿನ್ನರ್ ಮಾತ್ರೆ ಕೊಡ್ತಿದ್ವಿ. ದಿನಕ್ಕೆ ಎರಡು ಮಾತ್ರೆ ತಗೊಳ್ತಾ ಇದ್ರು. ಈ ಮಾತ್ರೆ ತೆಗೆದುಕೊಳ್ಳುವಾಗ ಮೂಗಿನಿಂದ ರಕ್ತ ಬರಬಹುದು. ಇನ್ನೊಂದು ಗಾಳಿಯಲ್ಲಿ ಟ್ರಾವೆಲ್ ಮಾಡುವಾಗ ಮೂಗು ಡ್ರೈ ಆಗುತ್ತೆ. ಅದರಿಂದಲೂ ಹೀಗೆ ಆಗಬಹುದು ಎಂದಿದ್ದಾರೆ.



