ಯತ್ನಾಳ್ ವಿರುದ್ಧ ವಿಜಯೇಂದ್ರ ಬಣದವರಷ್ಟೇ ಅಲ್ಲ, ಅತ್ತ ಜೆಡಿಎಸ್ ನಾಯಕ ಜಿಟಿ ದೇವೇಗೌಡ ಕೂಡಾ ಕಿಡಿ ಕಾರುತ್ತಿದ್ದಾರೆ. ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಅವರೂ ಕೂಡಾ ಯತ್ನಾಳ್ ಅವರನ್ನು ಮೆಂಟಲ್ ಎಂದಿದ್ದರು. ಇದೀಗ ಯತ್ನಾಳ್ ವಿರುದ್ಧ ತಿರುಗಿಬಿದ್ದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ, ಯತ್ನಾಳ್ ಆರೋಪಕ್ಕೆ ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ. ಮುಡಾ ಹಗರಣದಲ್ಲಿ ಜಿಟಿಡಿಯೂ ಲಾಭ ಮಾಡಿದ್ದಾರೆ ಎಂದಿದ್ದ ಯತ್ನಾಳ್ ಆರೋಪಕ್ಕೆ ಏಕವಚನದಲ್ಲಿಯೇ ತಿರುಗಿ ಬಿದ್ದಿರುವ ಜಿಟಿಡಿ ʻʻನಿನಗೇನೊ ಗೊತ್ತು ನನ್ನ ಯೋಗ್ಯತೆ, ಆಸ್ತಿ, ಸಾಲದ ಲೆಕ್ಕ. ನಾನು ಭ್ರಷ್ಟಾಚಾರ ಮಾಡಿರುವುದನ್ನು ನೀನು ಸಾಬೀತು ಮಾಡಿದರೆ ರಾಜೀನಾಮೆ ನೀಡುತ್ತೇನೆ. ನಿನ್ನ ವಿಚಾರವೂ ನನಗೆ ಗೊತ್ತಿದೆ.. ನಿನ್ನ ವಿಚಾರವನ್ನು ನಾನೂ ಬಹಿರಂಗಪಡಿಸುತ್ತೇನೆ.. ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ಹುಷಾರ್..ನೀನು ರಾಜಕೀಯಕ್ಕೆ ಬಂದಾಗ ಏನಿತ್ತು.. ನಂತರ ನೀನು ಹೇಗೆ ದುಂಡಗಾದೆ ಅನ್ನೋದು ಗೊತ್ತಿದೆ ಎಂದು ಬಸನಗೌಡ ಪಾಟೀಲ ಯತ್ನಾಳ್ʻರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.
ಯತ್ನಾಳ್ ಅವರಿಗೆ ನೀನ ರಾಜಕೀಯಕ್ಕೆ ಬಂದ ದಿನದಿಂದಲೂ ನನಗೆ ಗೊತ್ತು. ಸೌಹಾರ್ದ ಬ್ಯಾಂಕಿನಲ್ಲಿ ಎಷ್ಟು ಹಣ ಡೆಪಾಸಿಟ್ ಮಾಡಿಸಿಕೊಂಡಿದ್ದೀಯ ಅನ್ನೋದು ಗೊತ್ತು..ಆ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದೀಯ ಅನ್ನೋದು ಗೊತ್ತು ಎಂದಿರುವ ಜಿಟಿ ದೇವೇಗೌಡ, ಇನ್ನೊಂದು ತಮ್ಮದೇ ಪಕ್ಷದ ನಾಯಕರಾದ ಕುಮಾರಸ್ವಾಮಿ ಅವರನ್ನೂ ಬಿಟ್ಟಿಲ್ಲ.
ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಧಂ ಬೇಕು ಎಂದಿರುವ ಜಿಟಿ ದೇವೇಗೌಡ, ನೇರ ಸವಾಲ್ ಹಾಕಿರುವುದು ತಮ್ಮದೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ. ನನ್ನನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲು ಧಂ ಬೇಕು ಎಂದುರುವ ಜಿಟಿ ದೇವೇಗೌಡ ಬಿಜೆಪಿಯಲ್ಲಿ ಯತ್ನಾಳ್ ಮೇಲೆ, ಜೆಡಿಎಸ್‌ನಲ್ಲಿ ನನ್ನ ಮೇಲೆ ಕ್ರಮ ಕೈಗೊಳ್ಳೋಕೆ ಧಂ ಬೇಕು ಎಂದಿದ್ದಾರೆ. ಇನ್ನೂ 6 ತಿಂಗಳು ಪಕ್ಷದ ಯಾವುದೇ ಸಭೆ, ಕಾರ್ಯಕ್ರಮಗಳಿಗೆ ಹೋಗಲ್ಲ ಎಂದು ನೇರವಾಗಿಯೇ ಹೇಳಿರುವ ಜಿಟಿಡಿ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಸಮರ್ಥನೆ ಮಾಡ್ಕೊಂಡಿದ್ದಾರೆ.
ಸಿದ್ದರಾಮಯ್ಯರನ್ನು ಸಮರ್ಥನೆ ಮಾಡಿಕೊಂಡಿದ್ದಕ್ಕೇ ಹೆಚ್‌ಡಿಕೆ ಕೆಂಗಣ್ಣಿಗೆ ಗುರಿಯಾಗಿದ್ದ ಜಿಟಿಡಿ, ಮತ್ತೊಮ್ಮೆ ಮುಡಾ ಹಗರಣದಲ್ಲಿ ಬಹಿರಂಗವಾಗಿ ಸಿದ್ದು ಸಮರ್ಥನೆಗಿಳಿದಿದ್ದಾರೆ. ವಿಶೇಷ ಎಂದರೆ ಕುಮಾರಸ್ವಾಮಿ ಸಂಸದರಾಗಿ ದೆಹಲಿಗೆ ಹೋದಾಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ಹುದ್ದೆ ನಿರೀಕ್ಷೆಯಲ್ಲಿದ್ದರು ಜಿಟಿ ದೇವೇಗೌಡ. ಆದರೆ ಅದಾಗದೇ ಆ ಸ್ಥಾನ ಸುರೇಶ್ ಬಾಬು ಪಾಲಾದಾಗ ಜಿಟಿ ದೇವೇಗೌಡ ತಿರುಗಿಬಿದ್ದರು. ಈಗಲೂ ಕೂಡಾ ಕುಮಾರಸ್ವಾಮಿ V/S ಜಿಟಿ ದೇವೇಗೌಡ ವಾಕ್ ಸಮರ ಬಹಿರಂಗವಾಗಿ ನಡೆಯುತ್ತಲೇ ಇದೆ.
ಜಿಟಿಡಿ ಇಂತಹ ಹೇಳಿಕೆಗಳಿಗೆ ಕೊಡುತ್ತಿರುವ ಸಮರ್ಥನೆ ಎಂದರೆ ʻಕುಮಾರಸ್ವಾಮಿ ಶಾಸಕರ ಅಭಿಪ್ರಾಯ ಸಂಗ್ರಹ ಎಂದು ಬಾಯಲ್ಲಿ ಹೇಳುತ್ತಾರಷ್ಟೇ.. ಆದರೆ ಅವರು ಮೊದಲೇ ನಿರ್ಧಾರ ಮಾಡಿದ್ದನ್ನೇ ಜಾರಿಗೆ ಮಾಡ್ತಾರೆ.ಶಾಸಕರ ಯಾವ ಮಾತಿಗೂ ಕುಮಾರಸ್ವಾಮಿ ಬೆಲೆ ಕೊಡುವುದಿಲ್ಲ. ಶಾಸಕರು, ನಾಯಕರ ಅಭಿಪ್ರಾಯ ಕೇಳುತ್ತೇನೆ ಎಂದು ಹೇಳುವುದು ಕೇವಲ ನಾಟಕʼ ಎಂದಿದ್ದಾರೆ ಜಿಟಿಡಿ. ಒಟ್ಟನಲ್ಲಿ ಧಂ ಇದ್ದರೆ ನನ್ನನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ನೇರ ಸವಾಲು ಹಾಕಿರುವ ಜಿಟಿಡಿ ಚಾಲೆಂಜ್‌ನ್ನು ಕುಮಾರಸ್ವಾಮಿ ಸ್ವೀಕರಿಸ್ತಾರಾ.. ಕಾದು ನೋಡಬೇಕು.



