ಚೆಲುವರಾಯ ಸ್ವಾಮಿ, ಒಂದಾನೊಂದು ಕಾಲದಲ್ಲಿ ಜೆಡಿಎಸ್ʻನಲ್ಲಿಯೇ ಇದ್ದವರು. ಕುಮಾರಸ್ವಾಮಿ ಅವರ ಪರಮಾಪ್ತ ಗೆಳೆಯರಾಗಿದ್ದವರು. ಆದರೆ.. ಈಗಿನ ಪರಿಸ್ಥಿತಿಯೇ ಬೇರೆ. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಡಳಿತದ ಅವಧಿಯಲ್ಲಿ ಕುಮಾರಸ್ವಾಮಿ ಜೊತೆ ಬಿಟ್ಟು, ಕಾಂಗ್ರೆಸ್ ಸೇರಿದ 7 ಮಂದಿಯಲ್ಲಿ ಚೆಲುವರಾಯ ಸ್ವಾಮಿ ಕೂಡಾ ಒಬ್ಬರು. ಅಲ್ಲಿಂದ ಶುರುವಾದ ಇಬ್ಬರ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದಾಗ, ನಿಖಿಲ್ ವಿರುದ್ಧ ಕೆಲಸ ಮೈತ್ರಿ ಪಕ್ಷವಾಗಿದ್ದರೂ.. ನಿಖಿಲ್ ವಿರುದ್ಧ ಕೆಲಸ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಜೆಡಿಎಸ್ʻನ್ನು ಸೋಲಿಸಿ ಮೀಸೆ ತಿರುವಿದ್ದರು. ಅದಾದ ಮೇಲೆ ಮಂಡ್ಯ ಲೋಕಸಭೆಯಲ್ಲಿ ಕುಮಾರಸ್ವಾಮಿಯೇ ಸ್ಪರ್ಧಿಸಿ, ಗೆದ್ದು, ಕೇಂದ್ರದಲ್ಲಿ ಸಚಿವರೂ ಆದರು. ಈಗ ಮತ್ತೊಂದು ಸುತ್ತಿನ ಸಮರ ಶುರುವಾಗಿದೆ.
ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಜನತಾದರ್ಶನ ನಡೆಸಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಂಡ್ಯದಲ್ಲಿ ‘ಜನಸ್ಪಂದನ’ ನಡೆಸಿ, ಕುಮಾರಸ್ವಾಮಿಗೆ ಸಡ್ಡು ಹೊಡೆದಿದ್ದಾರೆ.
ಕುಮಾರಸ್ವಾಮಿ ಮಂಡ್ಯದಲ್ಲಿ ಜನತಾ ದರ್ಶನ ಮಾಡುತ್ತೇನೆ ಎಂದು ಈ ಹಿಂದೆಯೇ ಘೋಷಣೆ ಮಾಡಿದ್ದರು. ಹಾಗೆಯೇ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕುಮಾರಸ್ವಾಮಿ ಜನತಾ ದರ್ಶನ ನಡೆಸಿದ್ದರು. ಜನತಾದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ತೆರಳದಂತೆ ರಾಜ್ಯ ಸರ್ಕಾರವೇ ನಿರ್ಬಂಧ ವಿಧಿಸಿತ್ತು. ಹೀಗಾಗಿ ಜನತಾ ದರ್ಶನ ಕೇವಲ ಅರ್ಜಿ ಸ್ವೀಕಾರ, ಅಹವಾಲು ಆಲಿಕೆಗಷ್ಟೇ ಸೀಮಿತವಾಗಿತ್ತು. ಅಧಿಕಾರಿಗಳ ಗೈರಿನ ವಿಚಾರವಾಗಿ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನೂ ಹೊರಹಾಕಿದ್ದರು. ಆದರೆ ಚಲುವರಾಯಸ್ವಾಮಿ ಅವರು ಕೆರಗೋಡು ಗ್ರಾಮದಲ್ಲಿ ಸುಮಾರು ಐದು ತಾಸು ನಡೆಸಿದ ಜನತಾದರ್ಶನದಲ್ಲಿ ಜಿಲ್ಲೆಯ ಬಹುತೇಕ ಎಲ್ಲ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಜಿಲ್ಲಾಮಟ್ಟದ ಅಧಿಕಾರಿಗಳ ಅಸಹಕಾರದ ನಡುವೆಯೂ ಎಚ್.ಡಿ.ಕುಮಾರಸ್ವಾಮಿ ಅವರು ಸಂಜೆ 7 ಗಂಟೆವರೆಗೂ ಏಳು ತಾಸು ಜನರ ಅಹವಾಲು ಆಲಿಸಿ ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದರು. ಇದಕ್ಕೆ ಸಡ್ಡು ಹೊಡೆದು ಕೆರಗೋಡಿನಲ್ಲಿ ದಿಢೀರ್ ಆಗಿ ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಚಲುವರಾಯಸ್ವಾಮಿ ಅವರು ಕೂಡ ನೂರಾರು ಜನರಿಂದ ಅರ್ಜಿಗಳನ್ನು ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಅಧಿಕಾರಿಗಳ ಪೀಕಲಾಟ : ಇಲ್ಲಿ ನಡೆದಿರುವುದು ಪ್ರತಿಷ್ಠೆಯ ಯುದ್ಧ. ನರಕ ಅನುಭವಿಸುತ್ತಿರುವುದು ಸರ್ಕಾರಿ ಅಧಿಕಾರಿಗಳು. ಏಕೆಂದರೆ ಕುಮಾರಸ್ವಾಮಿ ಮಂಡ್ಯದ ಸಂಸದ ಹಾಗೂ ಕೇಂದ್ರ ಸರ್ಕಾರದಲ್ಲಿ ಸಚಿವರು. ಹೀಗಾಗಿ ಅಧಿಕಾರಿಗಳ ಮೇಲೆ ಹಕ್ಕು ಚಲಾಯಿಸುವ ಅಧಿಕಾರ ಇದ್ದೇ ಇರುತ್ತದೆ. ಆದರೆ.. ಇಲ್ಲಿನ ಸ್ಥಳೀಯ ಸರ್ಕಾರದ ನೇತೃತ್ವ ಕಾಂಗ್ರೆಸ್ಸಿನದ್ದು. ಅಧಿಕಾರಿಗಳ ಮೇಲೆ ಸಹಜವಾಗಿಯೇ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿಯೂ ಆಗಿರುವ ಚೆಲುವರಾಯ ಸ್ವಾಮಿ ಹಿಡಿತ ಇದ್ದೇ ಇರುತ್ತದೆ.
ಈಗ ಮಂಡ್ಯದ ಅಧಿಕಾರಿಗಳದ್ದು ಅತ್ತ ದರಿ ಇತ್ತ ಪುಲಲಿ ಪರಿಸ್ಥಿತಿ. ಸೆಂಟ್ರಲ್ ಮಿನಿಸ್ಟರ್ ಮಾತು ಕೇಳಬೇಕೋ.. ಅಥವಾ.. ಸ್ಟೇಟ್ ಮಿನಿಸ್ಟರ್ ಮಾತು ಕೇಳಬೇಕೋ.. ಅವರ ಸಭೆಗೆ ಹೋಗಬೇಕೋ.. ಇವರ ಸಭೆಗೆ ಹೋಗಬೇಕೋ.. ಅವರಿಗೆ ಮರ್ಯಾದೆ, ಗೌರವ ಕೊಡಬೇಕೋ. ಇವರಿಗೆ ಗೌರವ ಕೊಡಬೇಕೋ.. ಈ ಗೊಂದಲದಲ್ಲಿರುವ ಅಧಿಕಾರಿಗಳು ʻಮಂಡ್ಯ ಜಿಲ್ಲೆಯ ಸಹವಾಸ ಸಾಕಪ್ಪಾ ಸಾಕುʼ ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ.



