ಪ್ರಿಯಾಂಕ್ ಖರ್ಗೆ ಸೃಷ್ಟಿಸಿದ RSSಗೆ ಅಂಕುಶ ಹಾಕುವ ಚರ್ಚೆ ಈಗ ದೇಶಾದ್ಯಂತ ಭುಗಿಲೆದ್ದಿದೆ. ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರೀಗ ಪ್ರತಿದಿನ ಕನಿಷ್ಠ 1 ಗಂಟೆ ಮಾದ್ಯಮಗಳಿಗೆ ಮಾತನಾಡುವುದಕ್ಕೆ ಮೀಸಲಿಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಏನೇನೋ ಮಾತನಾಡುತ್ತಲೇ ಇದ್ದಾರೆ. ಆದರೆ.. ಇದರ ಹಿಂದೆ ಇರುವುದು ತಂತ್ರಗಾರಿಕೆ ಎಂದು ಹೇಳಿದ್ಧಾರೆ ಕುಮಾರಸ್ವಾಮಿ. ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತವರ ಟೀಂಗೆ ಕುಮಾರಸ್ವಾಮಿ ನೇರವಾಗಿಯೇ ಪ್ರಿಯಾಂಕ್ ತಂತ್ರಗಾರಿಕೆ ವಿವರಿಸಿದ್ದಾರೆ.
ಇದರ ಬಗ್ಗೆ ತಮಗೂ ಮಾಹಿತಿ ಇದೆ ಎಂದು ಹೇಳಿರುವ ವಿಜಯೇಂದ್ರ, ಪಕ್ಷದ ನಾಯಕರು, ಯಡಿಯೂರಪ್ಪ ಹಾಗೂ RSS ಪ್ರಮುಖರೂ ಕೂಡಾ ಇದನ್ನೇ ಹೇಳಿದ್ದಾರೆ ಎಂದು ವಿವರಣೆ ಕೊಟ್ಟಿದ್ದಾರೆ. ಆದರೆ.. ಏಕೆ ಸುಮ್ಮನಿರಲು ಆಗುತ್ತಿಲ್ಲ ಎಂದೂ ಹೇಳಿದ್ದಾರೆ.
ಕುಮಾರಸ್ವಾಮಿ ಸಲಹೆ ಏನು..?
ವಿಜಯೇಂದ್ರ ಅವರೇ.. ಪ್ರಿಯಾಂಕ್ ಖರ್ಗೆ ಅವರು ಅಟೆನ್ಷನ್ ಡೈವರ್ಷನ್ ಮಾಡುತ್ತಿದ್ದಾರೆ. ಅಷ್ಟೇ. ಅವರು ಎದುರಿಸುತ್ತಿರುವ ಸವಾಲು ಬೇರೆಯೇ ಇದೆ. ಆ ವಿಷಯದ ಬಗ್ಗೆ ಮಾತನಾಡದಂತೆ ತಡೆಯುವ ರಾಜಕೀಯ ತಂತ್ರಗಾರಿಕೆ ಇದು. ಇತ್ತೀಚೆಗೆ ಗೂಗಲ್ ಸಂಸ್ಥೆ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಹೋಯ್ತು. ಗೂಗಲ್ ಸಂಸ್ಥೆ ಕರ್ನಾಟಕದಲ್ಲೂ ಹೂಡಿಕೆಗೆ ಪ್ರಯತ್ನ ಪಟ್ಟಿತ್ತು ಎಂಬ ವಿಷಯವೇ ಇವರಿಗೆ ಗೊತ್ತಿರಲಿಲ್ಲ. ಎಲ್ಲ ಮುಗಿದ ಮೇಲೆ ಎಚ್ಚೆತ್ತರು.
ಐಟಿ ಬಿಟಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಪದೇ ಪದೇ ಮುಜುಗರ ಎದುರಾಗುತ್ತಿವೆ. ʻಬೆಂಗಳೂರು ರಸ್ತೆ ಗುಂಡಿʼಗಳ ಬಗ್ಗೆ ಆಕ್ರೋಶ ಹೊರಹಾಕಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್ ಅವರ ಸಂಸ್ಥೆ ಬರುವುದು ಬಿಟಿ ಅಂದ್ರೆ ಬಯೋಟೆಕ್ನಾಲಜಿ ಇರುವುದು ಇವರ ವ್ಯಾಪ್ತಿಯಲ್ಲೇ. ಇನ್ನು ಮೋಹನ್ ದಾಸ್ ಪೈ ಸೇರಿದಂತೆ ಹಲವು ಐಟಿ ಉದ್ಯಮಿಗಳು ʻಬೆಂಗಳೂರು ರಸ್ತೆ ಗುಂಡಿʼಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರಲ್ಲ.. ಅವರೂ ಕೂಡಾ ಐಟಿ ಇಲಾಖೆ ವ್ಯಾಪ್ತಿಯಲ್ಲೇ ಬರುತ್ತಾರೆ.
ಈಗ ಹೇಳಿ. RSSಗೆ ಅಂಕುಶ ಹಾಕಬೇಕು ಎಂದು ಪ್ರಿಯಾಂಕ್ ಖರ್ಗೆ ಬರೆದಿದ್ದ ಪತ್ರ ಗುಟ್ಟಾಗಿಯೇ ಇತ್ತು. ಆ ಪತ್ರವನ್ನು ಪ್ರಿಯಾಂಕ್ ಖರ್ಗೆಯವರೇ ಹೊರಬರುವಂತೆ ನೋಡಿಕೊಂಡರು. ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಹಾಗೂ ನೀವು (ಬಿಜೆಪಿ) ಎಲ್ಲರೂ RSS ಬಗ್ಗೆಯೇ ಮಾತನಾಡುತ್ತಾ ಕೂತಿರಿ. ಪ್ರಿಯಾಂಕ್ ಖರ್ಗೆ ವೈಫಲ್ಯ ಮುಚ್ಚಿ ಹೋಯ್ತು. ಅಷ್ಟೇ.. ಎಂದಿದ್ದಾರೆ.
ವಿಜಯೇಂದ್ರ ಅಸಹಾಯಕತೆ
ಅಚ್ಚರಿ ಎಂದರೆ ಈ ಮಾತನ್ನು RSS ಮುಖಂಡರೇ ವಿಜಯೇಂದ್ರ ಅವರಿಗೆ ಹೇಳಿದ್ದಾರಂತೆ. ಕೆಲವು RSS ಮುಖಂಡರು ಈ ವಿಷಯದ ಬಗ್ಗೆ ಮಾತನಾಡಬೇಡಿ ಎಂದೂ ಹೇಳಿದ್ದಾರಂತೆ. ಆದರೆ.. RSS ಇರುವ ಶೈಲಿಯಲ್ಲಿ ನಾವು ಇರುವುದಕ್ಕೆ ಆಗುವುದಿಲ್ಲ. ಸೈಲೆಂಟ್ ಆಗಿರುವುದಕ್ಕೆ ಆಗಲ್ಲ. ಮಾತನಾಡದೇ ಹೋದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ವಿಜಯೇಂದ್ರ.



