ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಬರೋ ಮನಸ್ಸು ಮಾಡಿದ್ದಾರೆ. ರಾಮನಗರದಲ್ಲಿ ಅವರು ಆಡಿದ ಮಾತು ಕೇಳುತಿದ್ದರೆ ಅವರು ರಾಮನಗರದಿಂದ 2028ಕ್ಕೆ ಚುನಾವಣೆಗೆ ಇಳಿಯೋದು ಪಕ್ಕಾ. ರಾಮನಗರಕ್ಕೂ ಕುಮಾರಸ್ವಾಮಿ ಅವರಿಗೂ ಅವಿನಾಭಾವ ನಂಟಿದೆ. ರಾಮನಗರದಿಂದ ಮೊದಲ ಬಾರಿ ಗೆದ್ದಾಗಲೇ ಸಿಎಂ ಆದವರು. 2ನೇ ಬಾರಿ ಸಿಎಂ ಆದಾಗಲೂ ಬೆನ್ನ ಹಿಂದೆ ರಾಮನಗರದ ಗೆಲುವೂ ಇತ್ತು. ಈಗ ಮತ್ತೆ ರಾಮನಗರದಿಂದ ಗೆದ್ದರೆ ಸಿಎಂ ಆಗಬಹುದಾ.. ಅದು ಹೇಗೆ ಸಾಧ್ಯ.. ಈ ಬಾರಿ ಬಿಜೆಪಿ ಜೊತೆ ಮೈತ್ರಿಯಲ್ಲಿ ಚುನಾವಣೆ ಎದುರಿಸುತ್ತಾರಲ್ಲ.. ಎಂದು ಪ್ರಶ್ನೆ ಮಾಡಬಹುದು. ಆದರೆ.. ಚಾನ್ಸ್ ಅಂತೂ ಇದೆ. ಅದಕ್ಕೆ ಎರಡು ರೂಟ್ ಇವೆ.
ದೇಶದಲ್ಲಿ ಬಿಜೆಪಿಗೆ 14 ಸಿಎಂ ಇದ್ದಾರೆ. ಅಂದರೆ ಬಿಜೆಪಿಯು 14 ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಹೊಂದಿದೆ. ಈ 14 ರಲ್ಲಿ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ರಾಜ್ಯಗಳಲ್ಲಿ ಇರುವುದು ಎನ್‌ಡಿಎ. ಗುಜರಾತ್, ರಾಜಸ್ತಾನ, ಮಧ್ಯಪ್ರದೇಶಗಳಲ್ಲಿ ಮಾತ್ರ ಮೈತ್ರಿ ಇಲ್ಲ. ಇನ್ನುಳಿದಂತೆ ಸಣ್ಣದ್ದೋ.. ಪುಟ್ಟದ್ದೋ.. ಒಂದಲ್ಲ ಒಂದು ಪಕ್ಷದ ಜೊತೆ ಮೈತ್ರಿಯಂತೂ ಇದೆ. ಉತ್ತರ ಪ್ರದೇಶದಲ್ಲೂ ಇದೆ. ಆದರೆ 14 ರಾಜ್ಯಗಳಲ್ಲೂ ಬಿಜೆಪಿಯೇ ಬಿಗ್ ಪಾರ್ಟನರ್. ವಿಶೇಷ ಎಂದರೆ ಬಿಹಾರವನ್ನು ಹೊರತುಪಡಿಸಿ್
ಆಂಧ್ರಪ್ರದೇಶ, ಬಿಹಾರ ಹಾಗೂ ಜಾರ್ಖಂಡ್‌ಗಳಲ್ಲಿ ಮಾತ್ರ ಬಿಜೆಪಿ ಅಧಿಕಾರವನ್ನ ಮಿತ್ರಪಕ್ಷಕ್ಕೆ ಕೊಟ್ಟಿದೆ. ಇವುಗಳಲ್ಲಿ ಬಿಹಾರದಲ್ಲಿ ಬಿಗ್ ಪಾರ್ಟನರ್ ಆಗಿದ್ದರೂ, ಸಿಎಂ ಆಗಿರುವುದು ಜೆಡಿಯುನ ನಿತೀಶ್ ಕುಮಾರ್. ಸದ್ಯಕ್ಕೆ ಜೆಡಿಎಸ್ ತಲೆಯಲ್ಲಿರುವುದು ಇದೇ ಬಿಹಾರ ಮಾಡೆಲ್. ಬಿಹಾರ ಮಾಡೆಲ್ಲಿನಂತೆ ಬಿಜೆಪಿ, ಸಿಎಂ ಸ್ಥಾನವನ್ನು ತಮಗೆ ಬಿಟ್ಟುಕೊಡಬಹುದು ಎಂಬ ನಿರೀಕ್ಷೆಯಂತೂ ಇದೆ.
ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನೆಂದರೆ ಬಿಹಾರದಲ್ಲಿ ಜೆಡಿಯು ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಾಗ ಆರಂಭದಲ್ಲಿ ಜೆಡಿಯುನೇ ಬಿಗ್ ದೋಸ್ತಿ. ಅದಾದ ಮೇಲೆ ಜೆಡಿಯುನೇ ಬಿಜೆಪಿಯನ್ನು ದೂರ ಇಟ್ಟು, ಬಿಜೆಪಿಯ ಸ್ವಯಂಬಲ ಗೊತ್ತಾಗುವಂತೆ ಮಾಡಿಕೊಟ್ಟಿತ್ತು. ನೋಡನೋಡುತ್ತಿದ್ದಂತೆ ಬಿಜೆಪಿ ಬಿಗ್ ಪಾರ್ಟನರ್ ಆಗಿದೆ. ಸರಿಸಮಾನವಾಗಿ ಕ್ಷೇತ್ರ ಹಂಚಿಕೆಯಾದರೂ, ಹೆಚ್ಚು ಗೆಲ್ಲುವುದು ಬಿಜೆಪಿಯೇ. ಆದರೆ ಕರ್ನಾಟಕದಲ್ಲ ಹಾಗಲ್ಲ. ಜೆಡಿಎಸ್ ಗೆದ್ದಿರುವ ಅತೀ ಹೆಚ್ಚು ಸ್ಥಾನ ಎಂದರೆ 58. ಅದೂ ಸಿದ್ದರಾಮಯ್ಯ ಅವರೂ ಜೆಡಿಎಸ್‌ನಲ್ಲಿದ್ದಾಗ. ಈಗ ಸಿದ್ದರಾಮಯ್ಯ ಅವರೂ ಇಲ್ಲ. ಜೆಡಿಎಸ್ ಬಲ ಪಾತಾಳಕ್ಕೆ ಕುಸಿದಿದೆ. ಈಗ ಜೆಡಿಎಸ್ ಪಕ್ಷದಲ್ಲಿರುವ ಶಾಸಕರ ಬಲ 17. ಆ 17ರಲ್ಲಿಯೂ ಕೆಲವರು ಆಗಲೇ ಕಾಂಗ್ರೆಸ್‌ನಲ್ಲಿ ಕಾಲಿಟ್ಟಿದ್ದಾರೆ. ಹೀಗಿರುವಾಗ ಜೆಡಿಎಸ್‌ಗೆ ಸಿಎಂ ಪೋಸ್ಟ್ ಸಿಗಬಹುದಾ..
ಒಂದು ಅವಕಾಶ ಇದೆ. ಅದೇನೆಂದರೆ ಬಿಜೆಪಿ+ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆ ನಡೆದು, ಮ್ಯಾಜಿಕ್ ನಂಬರ್ 113 ತಲುಪಬೇಕು. ಜೆಡಿಎಸ್, ಬಿಜೆಪಿಗಿಂತ ಹೆಚ್ಚು ಸೀಟು ಗೆಲ್ಲಬೇಕು. ಆಗ ಬೇಕಾದರೆ ಜೆಡಿಎಸ್ ಚೌಕಾಸಿ ಮಾಡಬಹುದು.
2ನೇ ಮಾರ್ಗವೂ ಇದೆ. ಹೇಗಿದ್ದರೂ ಬಿಜೆಪಿಯಲ್ಲಿ ಒಬ್ಬರನ್ನೊಬ್ಬರು ನಂಬುವ ಸ್ಥಿತಿಯಲ್ಲಿ ಇಲ್ಲ. ಅವರನ್ನು ಸೋಲಿಸಲು ಇವರು.. ಇವರನ್ನ ಸೋಲಿಸಲು ಅವರು ಪಣ ತೊಟ್ಟಿದ್ದಾರೆ. ಬಿಜೆಪಿ ನಾಯಕರಿಗೆ ವಿಜಯೇಂದ್ರ ಬೇಕು, ಅವರಿಂದ ವೋಟು ಬೇಕು. ಆದರೆ, ಅವರಿಗೆ ಅಧಿಕಾರ ಕೊಡುವುದು ಮಾತ್ರ ಬೇಡ. ಹೀಗಾಗಿ ಒಳಗೊಳಗೇ ಕೊರಗುವ, ಬಿಲ ಕೊರೆಯುವವರ ಸಂಖ್ಯೆ ಹೆಚ್ಚಾಗಿದೆ. ಹೈಕಮಾಂಡಿನವರೇ ಬೇಸತ್ತು.. ಇವರ ಸಹವಾಸವೇ ಬೇಡ. ಕುಮಾರಸ್ವಾಮಿಯೇ ಸಿಎಂ ಆಗಲಿ ಎಂದು ಬಿಟ್ಟುಕೊಡಬೇಕು. ಈ ಎರಡರಲ್ಲಿ ಒಂದು ಆದರೂ, ಕುಮಾರಸ್ವಾಮಿಯೇ ಸಿಎಂ. ಅಷ್ಟೇ.
ಅಂದಹಾಗೆ ಹಾಸನ ಸಮಾವೇಶದ ನಂತರ ಜೆಡಿಎಸ್ ನಾಯಕರೇ ಮಾತನಾಡಿಕೊಳ್ಳುತ್ತಿರುವಂತೆ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಕಾ ಮತ್ತು ಮಿನಿಮಮ್ ಅರವತ್ತು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಸಾಧ್ಯತೆ ಇದೆ. ಅವರ ವಿಶ್ವಾಸವೇ 60+ ಇರುವಾಗ ಬಿಜೆಪಿ ಎಷ್ಟು ಗೆಲ್ಲಬಹುದು.



