ಎಲ್ಲರಲ್ಲೂ ಕುತೂಹಲ. ಆತಂಕ. ಏಕೆಂದರೆ ಆ ಹೇಳಿಕೆ ನೀಡಿರುವುದು ಕುಮಾರಸ್ವಾಮಿ. ಕುಮಾರಸ್ವಾಮಿ ಅವರ ಪ್ರಕಾರ ರಾಜ್ಯ ಕಾಂಗ್ರೆಸ್ಸಿನ ಪ್ರಭಾವಿ ಸಚಿವರೊಬ್ಬರು ಸುಮಾರು ೫೦ರಿಂದ ೬೦ ಶಾಸಕರನ್ನು ಕರೆದುಕೊಂಡು ಹೋಗ್ತಾರೆ. ಬಿಜೆಪಿ ಸೇರುತ್ತಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತನವಾಗಲಿದೆ. ಆದರೆ ಆ ಪ್ರಭಾವಿ ಸಚಿವ ಯಾರು ಅನ್ನೋದು ಮಾತ್ರ ಸಸ್ಪೆನ್ಸ್.
ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಈ ಸರ್ಕಾರ ಯಾವಾಗ ಹೋಗುತ್ತೊ ಗೊತ್ತಿಲ್ಲ. ಸರ್ಕಾರದ ಪ್ರಭಾವಿ ಸಚಿವರೊಬ್ಬರು ಪಕ್ಷ ತೊರೆಯುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದಿರುವ ಕುಮಾರಸ್ವಾಮಿ ‘ಆ ಪ್ರಭಾವಿ ಸಚಿವ’ ಯಾರು ಅನ್ನೋದನ್ನ ಸ್ಪಷ್ಟವಾಗಿ ಹೇಳಲಿಲ್ಲ. ಸಣ್ಣಪುಟ್ಟವರು 50-60 ಶಾಸಕರನ್ನು ಕರೆದುಕೊಂಡು ಹೋಗಲು ಆಗುತ್ತಾ, ಅವರು ಪ್ರಭಾವಿಗಳೇ ಆಗಿರಬೇಕು ತಾನೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆ ಕಳೆಯಲಿ. ಆಮೇಲೆ ಕರ್ನಾಟಕದಲ್ಲೂ ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬದಲಾವಣೆ ಆಗುತ್ತದೆ. ಆದರೆ, ಅದಕ್ಕೆ ಕಾರಣಕರ್ತರಾಗಿ ಕರ್ನಾಟಕದಲ್ಲಿ ಯಾರು ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ ಎಂದಿರುವ ಕುಮಾರಸ್ವಾಮಿ, ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಾಮಾಣಿಕತೆ, ನಿಷ್ಠೆ ಎನ್ನೋದು ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕೋ ಅದನ್ನೇ ಮಾಡಿಕೊಂಡು ಹೋಗುತ್ತಿದ್ದಾರೆ. ಇವತ್ತು ಇಲ್ಲಿ ಇರ್ತಾರೆ, ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗುತ್ತಾರೆ. ಇದು ಈಗಿನ ರಾಜಕೀಯದಲ್ಲಿ ನಡೆದುಕೊಂಡು ಬಂದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ತೋರಿಸುತ್ತಿರುವವರಲ್ಲಿ ಬಿಕೆ ಹರಿಪ್ರಸಾದ್ ಒಬ್ಬರು. ಹರಿಪ್ರಸಾದ್ ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿ ಇನ್ನೂ ಹಲವರು ಅಸಮಾಧಾನಿತರು ಇದ್ದಾರೆ. ಒಂದೊಂದೇ ಧ್ವನಿ ಹೊರಬರುತ್ತದೆ. ಅಧಿಕಾರದಲ್ಲಿ ಉಳಿದುಕೊಳ್ಳಲು ವ್ಯಾಪಾರಕ್ಕೆ ಹೋಗಿದ್ದಾರೆ. ಅಕ್ರಮಗಳನ್ನು ಸರಿಪಡಿಸಿಕೊಳ್ಳಲು ಹೋಗಿರುವ ಮಾಹಿತಿಯೂ ನನಗಿದೆ ಎಂದು ಹೇಳಿದ್ಧಾರೆ.
ಇನ್ನು ರಾಜ್ಯ ಸರ್ಕಾರಕ್ಕೆ ಟೆನ್ಷನ್ ಕೊಟ್ಟಿರುವುದು ಬೆಳಗಾವಿ ಪಾಲಿಟಿಕ್ಸ್. ಅಲ್ಲಿ ಪ್ರಭಾವಿ ನಾಯಕ ಎಂದರೆ ಸತೀಶ್ ಜಾರಕಿಹೊಳಿ. ಇವರು ಕುಮಾರಸ್ವಾಮಿ ಸರ್ಕಾರವನ್ನು ಕೆಡವಿದ್ದ ರಮೇಶ್ ಜಾರಕಿಹೊಳಿ ಅಣ್ಣ. ಆದರೆ ಸೈದ್ಧಾಂತಿಕವಾಗಿ ಅತೀ ಹೆಚ್ಚು ಸ್ಪಷ್ಟತೆ ಇರುವ ನಾಯಕ ಸತೀಶ್ ಜಾರಕಿಹೊಳಿ. ಇನ್ನು ಹಲವು ನಾಯಕರಿಗೆ ಸಿಎಂ ಪಟ್ಟದ ಮೇಲೆ ಕಣ್ಣಿದೆಯಾದರೂ, ಸರ್ಕಾರವನ್ನು ಬೀಳಿಸುವಷ್ಟು ಪ್ರಭಾವಿಗಳಲ್ಲ.
ಸರ್ಕಾರದ ಪತನದ ಮಾತು ಹೇಳಿರುವುವರಲ್ಲಿ ಕುಮಾರಸ್ವಾಮಿ ಮೊದಲಿಗರೇನಲ್ಲ. ಈಶ್ವರಪ್ಪ, ಸಿಟಿ ರವಿ, ರವಿಕುಮಾರ್, ಚಲವಾದಿ ನಾರಾಯಣ ಸ್ವಾಮಿ ಆದಿಯಾಗಿ ಹಲವರು ಹೇಳಿಕೆ ಕೊಟ್ಟಿದ್ದಾರೆ. ಆದರೆ ಈ ಬಾರಿ ಹೇಳಿಕೆ ನೀಡಿರುವುದು ಕುಮಾರಸ್ವಾಮಿ. ಟೆನ್ಷನ್ ಶುರುವಾಗಿದೆ.



