ಸುಮಲತ. ಅವರು ಯಾರಿಗೆ ಬೆಂಬಲ ಕೊಡ್ತಾರೆ. ಅದು ದೊಡ್ಡ ಪ್ರಶ್ನೆ. ಯಕ್ಷ ಪ್ರಶ್ನೆ ಅಲ್ಲ. ಆದರೆ ಹಾಲಿ ಸಂಸದೆ ಆಗಿರುವ ಸುಮಲತಾ ಅವರ ನಿಲುವು ಈಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಏಕೆಂದರೆ.. ಮಂಡ್ಯ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಸುಮಲತಾ ಅಂಬರೀಷ್, ಈ ಬಾರಿ ಏನು ಮಾಡ್ತಾರೆ ಅನ್ನೋ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ. ಮಂಡ್ಯವನ್ನು ಜೆಡಿಎಸ್ʻಗೆ ಬಿಟ್ಟುಕೊಟ್ಟಿರುವ ಬಿಜೆಪಿ, ಸುಮಲತಾ ಅವರಿಗೆ ಟಿಕೆಟ್ ನೀಡಿಲ್ಲ. ಪಕ್ಷೇತರರಾಗಿ ನಿಂತು ಗೆದ್ದಿದ್ದ ಸುಮಲತಾ, ನಂತರ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಈಗ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರೀಗ ಜೆಡಿಎಸ್ ಅಭ್ಯರ್ಥಿ. ಹಾಗೆಂದು ಬಿಜೆಪಿ ಸುಮಲತಾ ಅವರನ್ನು ದೂರಕ್ಕೂ ತಳ್ಳಿಲ್ಲ. ಆದರೆ ಸುಮಲತಾ ಮೌನಕ್ಕೆ ಶರಣಾಗಿದ್ದಾರೆ. ಅದೇ ಈಗ ಕುತೂಹಲ ಸೃಷ್ಟಿಸಿದೆ. ಆದರೆ.. ಇದಕ್ಕೆಲ್ಲ ಕಾರಣ ಆಂತರಿಕ ಸಮೀಕ್ಷೆ ವರದಿ ಎನ್ನುತ್ತಿವೆ ಮೂಲಗಳು.
ಮಂಡ್ಯ ಆಂತರಿಕ ಸಮೀಕ್ಷೆ ಹೇಳಿದ್ದೇನು?
ಮಂಡ್ಯ ಕ್ಷೇತ್ರದಲ್ಲಿ ಈಗ 2019ರಲ್ಲಿದ್ದ ವಾತಾವರಣ ಇಲ್ಲ. 2019ರಲ್ಲಿ ಸುಮಲತಾ ಅವರು ಗೆಲ್ಲಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಯೇ ಅತಿ ದೊಡ್ಡ ಕಾರಣವಾಗಿತ್ತು. ಜೊತೆಗೆ ಕುಮಾರಸ್ವಾಮಿ, ರೇವಣ್ಣ, ಶಿವರಾಮೇಗೌಡ ಮೊದಲಾದ ನಾಯಕರ ಲಿಮಿಟ್ ಮೀರಿದ ಮಾತುಗಳೂ ಕಾರಣವಾಗಿತ್ತು. ಹೀಗಾಗಿ.. ಅಂಬರೀಷ್ ಅವರ ಪತ್ನಿ ಎಂಬ ಕಾರಣಕ್ಕೆ, ಅವರ ನಿಧನದ ಅನುಕಂಪವೂ ಮತದಾರರಲ್ಲಿ ಪ್ರಭಾವ ಬೀರಿತ್ತು. ಜೊತೆಗೆ ಕಾಂಗ್ರೆಸ್ ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಂಡರೂ.. ಕಾರ್ಯಕರ್ತರ ಮಟ್ಟದಲ್ಲಿ ಆಗಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಸುಮಲತಾ ಅವರಿಗೆ ಬೆಂಬಲಿಸಿದ್ದರು. ಇನ್ನುಳಿದಂತೆ ಯಶ್, ದರ್ಶನ್ ಪ್ರಚಾರದಿಂದ ಸುಮಲತಾ ಗೆದ್ದರು ಎನ್ನುವುದಕ್ಕಿಂತ, ಸುಮಲತಾ ಅವರ ಹೆಸರು ಮತದಾರರ ಮನಸ್ಸಿನಲ್ಲಿ ಇರುವ ಹಾಗೆ ನೋಡಿಕೊಂಡರು ಎಂಬುದಷ್ಟೇ ಮುಖ್ಯ. ಆದರೆ.. ಈ ಬಾರಿ ಹಾಗಾಗಲಿಲ್ಲ.
ಸುಮಲತಾ ಅವರು ಮಂಡ್ಯದ ಸೊಸೆಯಾಗಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂಬ ದೂರು ವ್ಯಾಪಕವಾಗಿದೆ. ಮಂಡ್ಯದಲ್ಲಿ ಮನೆ ಮಾಡುತ್ತೇನೆ ಎಂದು ಹೇಳಿದ್ದ ಸುಮಲತಾ, 5 ವರ್ಷ ಕಳೆದರೂ ಮಂಡ್ಯದಲ್ಲಿ ಮನೆ ಮಾಡಿಲ್ಲ. ಎಷ್ಟೇ ಹೊತ್ತಾದರೂ.. ಬೆಂಗಳೂರಿಗೆ ವಾಪಸ್ ಆಗುವ ಸುಮಲತಾ, ನಮ್ಮವರಲ್ಲ ಎಂಬ ಭಾವನೆ ಬೇರೂರುವಂತೆ ಮಾಡಿದ್ದರು. ಜೊತೆಗೆ ಸುಮಲತಾ ಅವರು ಮಾಧ್ಯಮಗಳಿಗೆ ಹೇಗೆ ಅಪರೂಪಕ್ಕೆ ಸಿಗುತ್ತಿದ್ದರೋ.. ಹಾಗೆಯೇ ಮತದಾರರಿಗೂ ಅಪರೂಕ್ಕಷ್ಟೇ ಸಿಗುತ್ತಿದ್ದರು. ಮಂಡ್ಯದ ಜನ ಸುಮಲತಾ ಅವರನ್ನು ರೆಗ್ಯುಲರ್ ಆಗಿ ನೋಡಿದ್ದು, ಕಳೆದ ವಿಧಾನಸಭೆ ಚುನಾವಣೆ ನಂತರವೇ.
ಇಷ್ಟೆಲ್ಲ ಆಗಿ ಮೊದಲೇ ನಡೆದ ಆಂತರಿಕ ಸಮೀಕ್ಷೆಗಳಲ್ಲಿ ಫಲಿತಾಂಶ ಸುಮಲತಾ ಅವರ ವಿರುದ್ಧವೇ ಬಂದಿದೆ. ಸುಮಲತಾ ಅವರು ಪಕ್ಷದ ಟಿಕೆಟ್ ಮೂಲಕವೇ ನಿಂತರೂ.. ಪಕ್ಷೇತರರಾಗಿ ನಿಂತರೂ ಗೆಲುವು ಗಗನಕುಸುಮ ಎಂಬ ಫಲಿತಾಂಶ ಸಿಕ್ಕಿದೆ. ಹೀಗಾಗಿ ಕುಮಾರಸ್ವಾಮಿಯವರೂ ಮಂಡ್ಯವನ್ನು ಸುಮಲತಾ ಅವರಿಗೆ ಕೊಡುವುದಾದರೆ.. ನಮಗೆ ಇನ್ನೆರಡು ಕ್ಷೇತ್ರ ಕೊಡಿ ಎನ್ನುತ್ತಿದ್ದರು. ಹೀಗಾಗಿ.. ಗೆದ್ದ ಒಂದು ಕ್ಷೇತ್ರವನ್ನು ಈಗಾಗಲೇ ಜೆಡಿಎಸ್ಸಿಗೆ ಕೊಟ್ಟಿರುವ ಬಿಜೆಪಿ, ಮಂಡ್ಯವನ್ನು ಬಿಟ್ಟು ಇನ್ನೊಂದು ಕ್ಷೇತ್ರ ಕೊಡುವ ಸವಾಲಿನಿಂದ ತಪ್ಪಿಸಿಕೊಂಡಿದೆ.
ಇನ್ನುಳಿದಂತೆ.. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಸಂಸದೆ ಸುಮಲತಾ, ಜೆಡಿಎಸ್-ಬಿಜೆಪಿ ಸಮನ್ವಯ ಸಮಿತಿ ಸಭೆಗೂ ಬಂದಿಲ್ಲ. ಹೊರಗೂ ಕಾಣಿಸಿಕೊಂಡಿಲ್ಲ. ಮಾತನ್ನೂ ಆಡಿಲ್ಲ. ಹೀಗಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆ.ಸಿ.ನಾರಾಯಣಗೌಡ ಅವರೂ ಸಹ ಸುಮಲತಾ ಹೆಸರನ್ನು ಸ್ಮರಿಸುವ ಗೋಜಿಗೂ ಹೋಗಲಿಲ್ಲ.ಆದರೆ ಮಧ್ಯಾಹ್ನದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸುಮಲತಾ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ಧಾರೆ.
ಸುಮಲತಾ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸುಮಲತಾ ಅವರಿಗೆ ಭವಿಷ್ಯದಲ್ಲಿ ಸೂಕ್ತ ಸ್ಥಾನಮಾನ ಸಿಗಲಿವೆ ಎಂದು ಬಿಜೆಪಿಯ ಹಿರಿಯ ನಾಯಕರು ಭರವಸೆಯನ್ನೂ ಕೊಟ್ಟಿದ್ಧಾರೆ. ಇಂದು ಸುಮಲತಾ ಅವರು ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಲಿದ್ದು, ಸಭೆಯ ನಂತರ ನಿರ್ಧಾರ ಹೊರಬೀಳಲಿದೆ.
ಈ ನಡುವೆ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಸುಮಲತಾ ಅವರು ಕಾಂಗ್ರೆಸ್ಸಿಗೆ ಬೆಂಬಲ ನೀಡಲಿ ಎಂದು ಕರೆ ಕೊಟ್ಟಿದ್ಧಾರೆ. ಒಂದೋ ತಟಸ್ಥವಾಗಿರಿ ಇಲ್ಲವೇ ಕಾಂಗ್ರೆಸ್ಸಿಗೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.
ಮಧ್ಯಾಹ್ನ 2.30ಕ್ಕೆ ಸಭೆ ನಿಗದಿಪಡಿಸಿದ್ದು, ಮುಂದಿನ ರಾಜಕೀಯ ನಡೆ ಹೇಗಿರಬೇಕೆಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ನಂತರ ತೀರ್ಮಾನ ಪ್ರಕಟಿಸಲಿದ್ದಾರೆ. ಅಂದಹಾಗೆ ಸುಮಲತಾ ಅವರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿಲ್ಲ. ವಿಜಯೇಂದ್ರ ಕೂಡಾ ಬಿಜೆಪಿ ಸೇರುವಂತೆ ಸುಮಲತಾ ಅವರಿಗೆ ಕೇಳಿಕೊಂಡಿದ್ದಾರೆ.



