ರಾಜ್ಯ ಬಿಜೆಪಿಯಲ್ಲಿ ಬಹುತೇಕರಿಗೆ ಜೆಡಿಎಸ್ ಜೊತೆ ಹೊಂದಾಣಿಕೆ ಇಷ್ಟವಿಲ್ಲ. ಇದರ ನಡುವೆಯೇ ಇತ್ತೀಚೆಗೆ ಕುಮಾರಸ್ವಾಮಿ ಕೊಟ್ಟಿದ್ದ ಒಂದು ಹೇಳಿಕೆ, ಬಿಜೆಪಿ ನಾಯಕರಿಗೆ ಟೆನ್ಷನ್ ಕೊಟ್ಟಿತ್ತು. ಇದೀಗ ನಿಖಿಲ್ ಕುಮಾರಸ್ವಾಮಿ ಅವರು ನೀಡಿರುವ ಇನ್ನೊಂದು ಹೇಳಿಕೆ ರಕ್ತ ಸೋರುತ್ತಿದ್ದ ಗಾಯದ ಮೇಲೆ ಉಪ್ಪು, ಕಾರ ಹಾಕಿ ಸವರಿ, ಬರೆ ಇಟ್ಟಂತಾಗಿದೆ. ಇಷ್ಟಕ್ಕೂ ನಿಖಿಲ್ ಹೇಳಿರೋದು ಇಷ್ಟೇ. ಕುಮಾರಸ್ವಾಮಿ ಮತ್ತೆ ಸಿಎಂ ಆಗೋದು ಗ್ಯಾರಂಟಿ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅನ್ನೋದು.
ಈಗಾಗಲೇ ಹೆಚ್ ಡಿ ಕುಮಾರಸ್ವಾಮಿ ಅವರು ಮೊನ್ನೆ ಹೇಳಿದ್ದ ʻʻಟಿಕೆಟ್ ಫೈನಲ್ ಆಗೋದು ದೆಹಲಿಯಲ್ಲಿ ಇಲ್ಲಲ್ಲʼʼ ಎಂಬ ಮಾತು ರಾಜ್ಯ ಬಿಜೆಪಿಯ ಕೆಲ ನಾಯಕರ ಪಂಚೇಂದ್ರಿಯಗಳಿಗೂ ಕೆಂಡ ಸುರಿದಿತ್ತು. ಅವರಿಗೆ ಆ ಫೀಲ್ ಆಗಲಿ ಎಂದೇ ಕುಮಾರಸ್ವಾಮಿ ಆ ಮಾತು ಹೇಳಿರುವುದು ಸತ್ಯ. ಕುಮಾರಸ್ವಾಮಿ ಅದೊಂದು ಮಾತಿನ ಮೂಲಕ ʻʻಮೈತ್ರಿಯ ಮಾತುಕತೆಯೇ ಆಗಲಿ, ಮತ್ತೊಂದೇ ಆಗಲಿ, ಟಿಕೆಟ್ ವಿಷಯವೇ ಇರಲಿ.. ಪ್ರತಿಯೊಂದನ್ನು ನಾನು ಕೇಂದ್ರ ಬಿಜೆಪಿ ನಾಯಕರ ಜೊತೆ ಕುಳಿತು ಬಗೆಹರಿಸಿಕೊಳ್ಳುತ್ತೇನೆ. ರಾಜ್ಯ ಬಿಜೆಪಿ ನಾಯಕರದ್ದು ಏನೂ ನಡೆಯೋದಿಲ್ಲʼʼ ಎಂದ ಮೆಸೇಜ್ ಕೊಟ್ಟಿದ್ದರು.
ರಾಜ್ಯ ಬಿಜೆಪಿಯ ವಿಜಯೇಂದ್ರ ಟೆನ್ಷನ್ ಆಗಿದ್ದಾರೆ ಎನ್ನವುದು ಜೆಡಿಎಸ್ ಒಳಗಿನ ಮಾತು. ಜೆಡಿಎಸ್ ವಿರುದ್ಧ ಹೋರಾಟ ನಡೆಸುತ್ತಲೇ ರಾಜಕೀಯ ಕಟ್ಟಿಕೊಂಡಿರುವವರೂ ಟೆನ್ಷನ್ ಆಗಿದ್ದಾರೆ. ಹಾಗೆ ನೋಡಿದರೆ.. ಕುಮಾರಸ್ವಾಮಿ ಅವರಿಗೆ ಬಿಜೆಪಿ ಬೇಕು. ಕೇಂದ್ರ ಬಿಜೆಪಿಗೂ ಜೆಡಿಎಸ್ ಬೇಕು. ಆದರೆ ರಾಜ್ಯ ಬಿಜೆಪಿಯ ಕೆಲವು ನಾಯಕರಿಗೆ ಬೇಕಿಲ್ಲ. ಭವಿಷ್ಯದಲ್ಲಿ ಮೈತ್ರಿ ಸರ್ಕಾರ ರಚೆನೆಯಾದರೆ ಮುಖ್ಯಮಂತ್ರಿ ಸ್ಥಾನ ಕುಮಾರಸ್ವಾಮಿ ಅವರಿಗೆ ಒಲಿದರೇ ಏನು ಮಾಡೋದು? ಇದು ಅವರ ಟೆನ್ಷನ್.
ನಿಖಿಲ್ ಕುಮಾರಸ್ವಾಮಿ ಮಾತಿಗೆ ಮಹತ್ವ ಬಂದಿರೋದೂ ಇಲ್ಲೇ. ತುಮಕೂರು ಜಿಲ್ಲೆಯ ಶಿರಾದಲ್ಲಿ ನಿಖಿಲ್ ನೀಡಿರುವ ಈ ಹೇಳಿಕೆಗೂ ಅಷ್ಟೇ ಮಹತ್ವ ಇದೆ. ಹಾಗೆ ನೋಡಿದರೆ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಜೆಡಿಎಸ್ ನಂ.2 ಪಕ್ಷ ಎನ್ನಬಹುದು. ಶಾಸಕರು, ಸಂಸದರ ಸಂಖ್ಯೆ ವಿಚಾರದಲ್ಲೇ ಆಗಲಿ, ಪ್ರಭಾವದಲ್ಲೇ ಆಗಲಿ.. ಬಿಜೆಪಿಗೆ ಸಾಟಿಯಲ್ಲ. ಆದರೆ, ನಾಯಕರ ವಿಷಯದಲ್ಲಿ ಹಾಗೆ ಹೇಳೋಕೆ ಬರೋದಿಲ್ಲ. ವಿಜಯೇಂದ್ರ ವಿರುದ್ಧ ಭಾವನೆ ಯಾವ ಮಟ್ಟಿಗೆ ಇದೆ ಎಂದರೆ.. ಕುಮಾರಸ್ವಾಮಿಗೆ ಅಧಿಕಾರ ಸಿಕ್ಕರೂ ಪರವಾಗಿಲ್ಲ. ವಿಜಯೇಂದ್ರಗೆ ಸಿಕ್ಕುವುದು ಬೇಡ ಎಂಬ ಮನಸ್ಥಿತಿ ಕೆಲವು ಬಿಜೆಪಿ ನಾಯಕರಲ್ಲೇ ಇದೆ.
ನಿಖಿಲ್ ಕಂಡ ಕನಸು ನನಸಾದರೆ, ಕುಮಾರಸ್ವಾಮಿ 3ನೇ ಬಾರಿ ಸಿಎಂ ಆಗುತ್ತಾರೆ. ಹಾಗಾಗಬೇಕು ಎಂದರೆ ಮೊದಲು ಗೆಲ್ಲಬೇಕು. ಗೆದ್ದ ಮೇಲೆ ಮೋದಿ-ಅಮಿತ್ ಶಾ ಕೃಪೆಯನ್ನೂ ಅ ಸಮಯದವರೆಗೆ ಕಾಯ್ದುಕೊಳ್ಳಬೇಕು. ವಿಜಯೇಂದ್ರ ಪ್ರಬಲರಾಗದಂತೆ ನೋಡಿಕೊಳ್ಳಬೇಕು.
ಲಾಸ್ಟ್ ಸಿಪ್ : ವಿಜಯೇಂದ್ರ ಅವರಿಗೆ ಸ್ಥಾನ ತಪ್ಪಿಸುವ ಕುತಂತ್ರ ಮಾಡಲು ಹೋಗಿ, ತಮ್ಮ ಬುಡಕ್ಕೇ ಪೆಟ್ಟು ಮಾಡಿಕೊಂಡರೆ.. ಆಗ ಲಾಭ ಆಗುವುದು ಕಾಂಗ್ರೆಸ್ಸಿಗೆ. ಹಾಗೇನಾದರೂ ಆದರೆ.. ಕಾಂಗ್ರೆಸ್ಸಿಂದ ಸಿಎಂ ಆಗುವುದು ಡಿಕೆ ಶಿವಕುಮಾರ್. ಸ್ಥಾನ ಮಾನ ಇಲ್ಲದಿದ್ದರೂ.. ಪಕ್ಷ ಕಟ್ಟುತ್ತೇನೆ ಎಂದು ಹೋರಾಡಿದ್ದ ಯಡಿಯೂರಪ್ಪರೂ ಶಕ್ತಿ ಕಳೆದುಕೊಂಡಿರುತ್ತಾರೆ. ಆಗ ಬಿಜೆಪಿ ಗತಿ..?



