ಚನ್ನಪಟ್ಟಣ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರಿಂದ ಒತ್ತಡ ಇದೆ. ಈ ಮಾತು ಕೇಳಿದವರು, ಜೆಡಿಎಸ್ ಕಾರ್ಯಕರ್ತರೆಲ್ಲ ಹಂಗಾರೆ.. ಈ ಬಾರಿ ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿಯಾಗುವುದು ಖಚಿತ ಎನ್ನುತ್ತಿದ್ದಾರೆ.
ಮುಂಬರುವ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಡದಿ ಸಮೀಪದ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ಶನಿವಾರ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ಕರೆದು ಸಮಾಲೋಚನೆ ನಡೆಸಿದ ಮೇಲೆ ಮಾತನಾಡಿರುವ ಕುಮಾರಸ್ವಾಮಿ, ಇನ್ನೊಂದು ವಾರದಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಮಾಡೋದಾಗಿ ಹೇಳಿದ್ದಾರೆ. ಜೊತೆಯಲ್ಲೇ ನಿಖಿಲ್ ಕುಮಾರಸ್ವಾಮಿ ನಿಲ್ಲಬೇಕು ಅಂತ ಶೇ.95ರಷ್ಟು ನಾಯಕರು, ಮುಖಂಡರ ಅಭಿಪ್ರಾಯವಿದೆ ಎಂದೂ ಹೇಳಿದ್ದಾರೆ. ಅಂದರೆ ಅವರ ಪ್ರಕಾರ 100 ಕಾರ್ಯಕರ್ತರಲ್ಲಿ 95 ಕಾರ್ಯಕರ್ತರು ನಿಖಿಲ್ ಅಭ್ಯರ್ಥಿಯಾಗಲಿ ಎನ್ನುತ್ತಿದ್ದಾರಂತೆ.
ನಿಖಿಲ್ ಅವರನ್ನು ಮಂಡ್ಯದಲ್ಲಿ ನಿಲ್ಲಿಸಿದಾಗ ಎಲ್ಲಾ ಪಕ್ಷಗಳು ಒಂದಾಗಿ ಸೋಲಿಸಿದರು. ಸಂಘಟಿತ ಷಡ್ಯಂತ್ರ ಸೋಲಿಸಲಾಯಿತು. ನಾನು ಈಗ ಎನ್‌ಡಿಎ ಭಾಗ, ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಯಾರೇ ನಿಂತು ಗೆದ್ದರೂ ಅದು ಎನ್‌ಡಿಎ ಗೆಲುವು, ಆ ಮೂಲಕ ಕಾಂಗ್ರೆಸ್ ವಿರೋಧಿ ಹೋರಾಟಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ನಾವೂ ಕೈಜೋಡಿಸಿದ ಹಾಗಾಗುತ್ತದೆ ಎಂದು ಹೇಳಿದ್ದಾರೆ ಕುಮಾರಸ್ವಾಮಿ. ಇತ್ತೀಚೆಗೆ ಚನ್ನಪಟ್ಟಣದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿರುವ ಕುಮಾರಸ್ವಾಮಿಯವರ ಪ್ರತೀ ಸಭೆಯಲ್ಲೂ ನಿಖಿಲ್ ಅವರೇ ಅಭ್ಯರ್ಥಿಯಾಗಲಿ ಎಂಬ ಘೋಷಣೆಗಳು ಮೊಳಗುತ್ತಿವೆ.
ಕುಮಾರಸ್ವಾಮಿಗೆ ಇರುವುದು ಒಂದೇ ಭಯ : ಏನೆಂದರೆ ನಿಖಿಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಮಂಡ್ಯದಲ್ಲೂ ಜೆಡಿಎಸ್‌ನವರು ಕೇಳಿದ್ದರು. ಮಂಡ್ಯದಲ್ಲೊಂದು ಕಾರ್ಯಕ್ರಮ ಮಾಡಿ ನಿಖಿಲ್ ಅವರನ್ನು ಮಂಡ್ಯ ಕ್ಷೇತ್ರದ ಜನರಿಗೆ ಅಭೂತಪೂರ್ವ ರೀತಿಯಲ್ಲಿ ಪರಿಚಯ ಮಾಡಿದ್ದರು. ನಿಖಿಲ್ ಎಲ್ಲಿದ್ದೀಯಪ್ಪ.. ಟ್ರೋಲ್ ಆಗಿದ್ದು ಅದೇ ಕಾರ್ಯಕ್ರಮದಲ್ಲಿ. ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ಮಾಡಿದಾಗ ಕುಮಾರಸ್ವಾಮಿಯೇ ಸಿಎಂ. ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋರಾಡಿದರೂ.. ನಿಖಿಲ್ ಸೋತಿದ್ದರು. ಅದಾದ ಮೇಲೆ ರಾಮನಗರ ಎಲೆಕ್ಷನ್ನಿಗೆ ನಿಂತಾಗಲೂ ಅಷ್ಟೇ, ಕುಮಾರಸ್ವಾಮಿ ಅವರಿಗೆ ಗೊತ್ತೇ ಆಗದಂತೆ ಅನಿತಾ ಕುಮಾರಸ್ವಾಮಿಯವರೇ ನಿಖಿಲ್ ಅವರನ್ನು ತಮ್ಮ ಬದಲಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಹಾಗಂತ ಕುಮಾರಸ್ವಾಮಿಯವರೇ ಹೇಳಿದ್ದರು ಕೂಡಾ. ಅಲ್ಲಿಯೂ ನಿಖಿಲ್‌ಗೆ ಸೋಲು ಎದುರಾಗಿತ್ತು. ಇದೀಗ ಚನ್ನಪಟ್ಟಣ. ಇಲ್ಲಿಯಾದರೂ ನಿಖಿಲ್ ಅವರನ್ನು ಗೆಲ್ಲಿಸುವ ಹಠ ತೊಟ್ಟಿರುವ ಕುಮಾರಸ್ವಾಮಿಗೆ ಒಂದು ಭಯ ಇದೆ. ಸಿಪಿ ಯೋಗೇಶ್ವರ್ ಅವರೇನಾದರೂ ಪಕ್ಷೇತರನಾಗಿಯೋ ಅಥವಾ ಕಾಂಗ್ರೆಸ್ ಸೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿಯೋ ನಿಂತರೆ ಏನಾಗಬಹುದು ಅನ್ನೋ ಆತಂಕ ಇದೆ.
ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆದ್ದಿರಬಹುದು. ಆದರೆ ಕ್ಷೇತ್ರದಲ್ಲಿ ಸಿಪಿವೈ ಪ್ರಭಾವಿ ನಾಯಕ ಅನ್ನೋದರಲ್ಲಿ ಅನುಮಾನ ಇಲ್ಲ. ಪಕ್ಷೇತರರಾಗಿ, ಸಮಾಜವಾದಿ ಪಕ್ಷದಿಂದ ಈಗಾಗಲೇ ಗೆದ್ದು ತೋರಿಸಿದ್ದಾರೆ. ಕಾಂಗ್ರೆಸ್ಸಿಂದಲೂ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಬಿಜೆಪಿಯಿಂದ ನಿಂತಾಗ ಮಾತ್ರ ಗೆಲುವು ಸಿಕ್ಕಿಲ್ಲ.
ಮತ್ತೊಮ್ಮೆ ದೊಡ್ಡ ಸವಾಲು ಎದುರಾಗಿ ನಿಖಿಲ್ ಸೋತರೆ ಹ್ಯಾಟ್ರಿಲ್ ಸೋಲಿನ ಭಯ ಕಾಡುತ್ತಲೇ ಇದೆ. ಆದರೂ.. ಮಗನನ್ನು ಎಂಎಲ್‌ಎ ಮಾಡುವ ಅವಕಾಶ ಬಿಟ್ಟುಕೊಡುವುದಕ್ಕೆ ಕುಮಾರಸ್ವಾಮಿ ತಯಾರಿಲ್ಲ. ಇನ್ನು ನಿಖಿಲ್ ಅವರೇ ಅಭ್ಯರ್ಥಿ ಎನ್ನುತ್ತಿರುವುದಕ್ಕೆ ಕಾರಣವೂ ಇದೆ. ಈ ಹಿಂದೆ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರನ್ನೂ ಇದೇ ರೀತಿಯ ಹಂಗಾಮಾದಲ್ಲಿ ಅಭ್ಯರ್ಥಿ ಮಾಡಲಾಗಿತ್ತು. ಅದೇ ರಿಪೀಟ್ ಆಗುತ್ತಿರುವುದರ ಅರ್ಥ, ಜೆಡಿಎಸ್ ಕಾರ್ಯಕರ್ತರಿಗೆ ಚೆನ್ನಾಗಿಯೇ ಅರ್ಥವಾಗುತ್ತಿದೆ.



