ರಾಜ್ಯ ಸರ್ಕಾರ ಅಧಿಕಾರಕ್ಕೆ (HD Kumaraswamy) ಬಂದ ದಿನದಿಂದಲೂ ಪ್ರತಿಪಕ್ಷ ನಾಯಕರಂತೆಯೇ ಆಕ್ಟಿವ್ ಆಗಿರುವುದು ಕುಮಾರಸ್ವಾಮಿ. ಈ ಬಾರಿಯ ಅಧಿವೇಶನ ಆರಂಭದಿಂದಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವರು ಕುಮಾರಸ್ವಾಮಿ. ಸಿದ್ದರಾಮಯ್ಯ (Siddaramaiah) ಮಗನ ಮನೆಯಲ್ಲಿ ನಡೆದಿದೆ ಎನ್ನಲಾದ ಸಭೆ, ವೈಎಸ್`ಟಿ ಟ್ಯಾಕ್ಸ್, ಅಕ್ಕಿ ಕೊಡುವ ವಿಚಾರದಲ್ಲಿ ಹಣಕಾಸಿನ ಕೊರತೆ ಎದುರಿಸಿದ್ದು, ಮಂಡ್ಯದಲ್ಲಿ ನಡೆದ ಕಂಡಕ್ಟರ್ ಆತ್ಮಹತ್ಯೆ ಯತ್ನ ಪ್ರಕರಣ, ಚೆಲುವರಾಯಸ್ವಾಮಿ ವಿರುದ್ಧದ ಹೋರಾಟ.. ಎಲ್ಲದರಲ್ಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಕುಮಾರಸ್ವಾಮಿ.
ಕುಮಾರಸ್ವಾಮಿ ಹಿಟ್ & ರನ್ ಮಾಡುತ್ತಾರೆ ಎಂಬ ಆರೋಪಕ್ಕೆ ಅವರೀಗ ದಾಖಲೆ ಕೊಟ್ಟು ಉತ್ತರ ಕೊಟ್ಟಿದ್ದಾರೆ. 2 ಪುಟಗಳ ವರ್ಗಾವಣೆ ದರ ಪಟ್ಟಿಯನ್ನು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರಾಜ್ಯದ ಜನತೆಗೆ ಐದು ಗ್ಯಾರಂಟಿ ನೀಡಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ಹಣಕ್ಕಾಗಿ ಪೋಸ್ಟಿಂಗ್ ಗ್ಯಾರಂಟಿ ನೀಡಲು ಮುಂದಾಗಿದೆ. ಈ ಬಗ್ಗೆ ಒಂದು ನಿರ್ದಿಷ್ಟಇಲಾಖೆಗೆ ಸಂಬಂಧಿಸಿದ ದರ ಪಟ್ಟಿ ನನ್ನ ಬಳಿಯಿದೆ. ಈ ಪಟ್ಟಿಯನ್ನು ಸ್ಪೀಕರ್ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇನೆ. ಅದನ್ನು ಸರಿಪಡಿಸುತ್ತಾರೋ ಅಥವಾ ಬಿಡುತ್ತಾರೋ ಮುಂದಿನದ್ದು ಅವರಿಗೆ ಬಿಟ್ಟದ್ದು ಎಂದಿದ್ದಾರೆ ಕುಮಾರಸ್ವಾಮಿ.
ಅವರ ಹೆಸರೇಳಲ್ಲ, ಯಾವ ಇಲಾಖೆ ಎಂಬುದೂ ಬೇಡ. ಅದನ್ನು ಯಾರೋ ನನಗೆ ತಂದು ನೀಡಿದ್ದಾರೆ ಎಂದ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ಜಾಹೀರಾತನ್ನೂ ಪ್ರದರ್ಶಿಸಿ ಮುಂದೆ ನಿಮ್ಮ ಬಗ್ಗೆ ಈ ತರಹ ಜಾಹೀರಾತು ಬರಬಾರದು ಎಂಬ ಕಾರಣಕ್ಕೆ ಹೇಳುತ್ತಿದ್ದೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನೀವು ಭ್ರಷ್ಟಾಚಾರ ತೊಡೆದು ಹಾಕುವುದಾದರೆ ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದಕ್ಕೂ ಮೊದಲು ನೀವು ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದಿಂದ 1.5 ಲಕ್ಷ ಕೋಟಿ ರು. ಲೂಟಿ ಆಗಿದೆ ಎಂದು ಜಾಹೀರಾತು ನೀಡಿದ್ದಿರಿ. ಈ ಬಗ್ಗೆ ತನಿಖೆ ನಡೆಸಿ ಅಕ್ರಮವನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದ್ದಾರೆ ಕುಮಾರಸ್ವಾಮಿ.
ಎಚ್.ಡಿ. ಕುಮಾರಸ್ವಾಮಿ ಮಾಡಿದ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ರೀತಿ ಬೆಂಗಳೂರು ಸ್ಟಾಕ್ ಎಕ್ಸ್ಚೇಂಜ್ ದರ ಪಟ್ಟಿಏನಿದೆ? ಎಂಬದು ಗೊತ್ತಾಗಲಿ. ಸದನದಲ್ಲೇ ಅದನ್ನು ಬಹಿರಂಗಪಡಿಸಿ. ಇಲಾಖೆ ಯಾವುದು ಎಂಬುದನ್ನೂ ತಿಳಿಸಿ’ ಎಂದು ಒತ್ತಾಯಿಸಿದರು. ಇದಕ್ಕೆ ನಿರಾಕರಿಸಿದ ಕುಮಾರಸ್ವಾಮಿ, ‘ಬೇಡ ಮುಖ್ಯಮಂತ್ರಿಗಳಿಗೆ ಕಳುಹಿಸುತ್ತೇನೆ. ನಾನು ಅದನ್ನು ಬಹಿರಂಗಪಡಿಸಲು ಹೋಗಲ್ಲ. ಅವರೇ ನಿರ್ಧಾರ ಮಾಡಲಿ’ ಎಂದು ಸ್ಪೀಕರ್ ಯು.ಟಿ. ಖಾದರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ 2 ಪುಟಗಳ ಕಾಗದಗಳನ್ನು ಕಳುಹಿಸಿಕೊಟ್ಟರು.



