ಇತ್ತೀಚೆಗೆ ಅದರಲ್ಲೂ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಕುಮಾರಸ್ವಾಮಿ, ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಬಿಜೆಪಿಯವರೂ ಅಷ್ಟೆ, ಕುಮಾರಸ್ವಾಮಿ (HD Kumaraswamy) ಹೇಳಿದ್ದೆಲ್ಲ ಸರಿ ಅಂತಿದ್ದಾರೆ. ಇದಕ್ಕೆಲ್ಲ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನಗಳಿಗೆ ಕುಸಿದಿದ್ದು ಕಾರಣವಾ.? ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಹೋದರೆ ಪಕ್ಷದ ಅಸ್ಥಿತ್ವವೇ ಇಲ್ಲದಂತಾಗುವ ಭಯವಾ? ಯಾವುದನ್ನೂ ಕುಮಾರಸ್ವಾಮಿ ಇಲ್ಲ ಎನ್ನುವುದಿಲ್ಲ. ಆದರೆ ದೇವೇಗೌಡರ (HD Devegowda) ವಾದವೇ ಬೇರೆ. ಅವರದ್ದು ಏಕಾಂಗಿ ಮಂತ್ರ.
ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಏನು ಮಾಡುವುದೆಂದು ತಡಕಾಡುತ್ತಿರುವಾಗ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಕುಮಾರಸ್ವಾಮಿಯೇ (HD Kumaraswamy) ಹೊರತು, ಅಧಿಕೃತ ವಿರೋಧ ಪಕ್ಷ ಬಿಜೆಪಿಯಂತೂ ಅಲ್ಲ. ಬಿಜೆಪಿಯವರಿಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನೂ ಆಯ್ಕೆ ಮಾಡುವುದಕ್ಕೆ ಆಗಿಲ್ಲ. ಹೀಗಿರುವಾಗಲೇ (HD Kumaraswamy) ಕುಮಾರಸ್ವಾಮಿ ಹಂತ ಹಂತವಾಗಿ ಜೆಡಿಎಸ್ ಶಾಸಕರ ಜೊತೆಯಲ್ಲೇ ಬಿಜೆಪಿಯತ್ತ ವಾಲುತ್ತಿದ್ದಾರೆ ಎನ್ನುವುದು ಗುಟ್ಟೇನಲ್ಲ.
ಇದೀಗ ಬಿಜೆಪಿ ಶಾಸಕಾಂಗ ಪಕ್ಷದ ಲೆಟರ್ ಹೆಡ್ ನಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy) ಸಹಿ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ನಡೆಯುತ್ತಿರುವ ಊಹಾಪೋಹಗಳಿಗೆ ಈ ಸಹಿ ಮತ್ತಷ್ಟು ಪುಷ್ಠಿ ಕೊಟ್ಟಂತಾಗಿದೆ. ಬೆಂಗಳೂರಿನಲ್ಲಿ ನಡೆದ ಇಂಡಿಯಾ ಒಕ್ಕೂಟ ಸಭೆಗೆ ಆಗಮಿಸಿದ್ದ ವಿಪಕ್ಷ ನಾಯಕರನ್ನು ಸ್ವಾಗತ ಮಾಡಲು ಐಎಎಸ್ ಅಧಿಕಾರಿಗಳ ನೇಮಕ ಮಾಡಿದ್ದನ್ನು ಖಂಡಿಸಿ ಹಾಗೂ ಸದನದಲ್ಲಿ ಬಿಜೆಪಿ ಶಾಸಕರ ಅಮಾನತು ವಿರೋಧಿಸಿ ರಾಜ್ಯಪಾಲರಿಗೆ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ದೂರನ್ನು ನೀಡಿತ್ತು.
ಪ್ರತಿಭಟನೆಯಲ್ಲಿ ಬಿಜೆಪಿಗೆ ಜೆಡಿಎಸ್ ಸಾಥ್ ನೀಡಿತ್ತು. ಇದೀಗ ಬಿಜೆಪಿ ಶಾಸಕಾಂಗ ಪಕ್ಷದ ಲೆಟರ್ ಹೆಡ್ ನಲ್ಲಿ ಬಿಜೆಪಿ ನಾಯಕರು ರಾಜ್ಯಪಾಲರಿಗೆ ನೀಡಿರುವ ದೂರಿನ ಪ್ರತಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಸಹಿ ಇದೆ. ಬಿಜೆಪಿ ನಾಯಕರ ಸಹಿ ಜೊತೆಗೆ ಎಚ್ ಡಿ ಕೆ ಸಹಿ ಹಾಕಿರುವುದು ಸಹಜವಾಗಿಯೇ ಕುಮಾರಸ್ವಾಮಿ (HD Kumaraswamy) ಬಿಜೆಪಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ಎಂದು ಸುಳಿವು ಕೊಟ್ಟಿದೆ.
ಮುಂದಿನ ದಿನಗಳಲ್ಲಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸುತ್ತೇವೆ ಎಂದು ಸ್ವತಃ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾಗೆ ನೋಡಿದರೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೋರಾಟಕ್ಕೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಮುಂಚೂಣಿಯಲ್ಲಿತ್ತು. ಆಗ ಅಂದರೆ 2018ರಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ, ಬಹುಮತ ಸಿಕ್ಕಿರಲಿಲ್ಲ. ಆಗ ಕಾಂಗ್ರೆಸ್, ಜೆಡಿಎಸ್ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಹೆಚ್ಚು ಸ್ಥಾನಗಳಿದ್ದರೂ ಕಾಂಗ್ರೆಸ್ ಜೊತೆ ಸೇರಿದ್ದ ಕುಮಾರಸ್ವಾಮಿಗೆ ಸಿಎಂ ಪಟ್ಟ ಕಟ್ಟಿತ್ತು. ಅದಾದ ಮೇಲೆ ಸರ್ಕಾರವನ್ನು ಕೆಡವಿದ್ದು, ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚಿಸಿದ್ದೆಲ್ಲವೂ ಈಗ ಇತಿಹಾಸ.
ಇತ್ತೀಚೆಗೆ ಕುಮಾರಸ್ವಾಮಿ ಮೋದಿಯವರು ದೇವೇಗೌಡರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಉತ್ಸಾಹದ ಮಾತುಗಳನ್ನಾಡಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ಹೋದರೆ ತಪ್ಪೇನು ಎಂದು ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಮಹಾಘಟಬಂಧನ್ ಸಭೆಯಲ್ಲಿ ದೇವೇಗೌಡರ ಜೆಡಿಎಸ್ಗೆ ಆಹ್ವಾನವೂ ಇರಲಿಲ್ಲ. ಜೆಡಿಎಸ್ನ್ನು ದೂರ ಇಡಬೇಕೆಂದು ಕಾಂಗ್ರೆಸ್ ನಾಯಕರೇ ಷರತ್ತು ವಿಧಿಸಿದ್ದರಂತೆ. ಅತ್ತ ಎನ್ಡಿಎ ಸಭೆಗೂ ಹೋಗದೆ, ಇತ್ತ ಮಹಾಘಟಬಂಧನ್ ಸಭೆಗೂ ಆಹ್ವಾನವಿಲ್ಲದೆ ಏಕಾಂಗಿಯಾಗಿದ್ದಾರೆ ಕುಮಾರಸ್ವಾಮಿ ಮತ್ತು ದೇವೇಗೌಡ.
ಲೋಕಸಭೆ ಚುನಾವಣೆಯೂ ಹತ್ತಿರದಲ್ಲಿದ್ದು, ಜೆಡಿಎಸ್ ಕೇವಲ ಒಂದು ಸ್ಥಾನ ಹೊಂದಿದೆ. ಕಾಂಗ್ರೆಸ್ ರಣೋತ್ಸಾಹದಲ್ಲಿದೆ. ಬಿಜೆಪಿ ಹಾಗೂ ಜೆಡಿಎಸ್ ಎರಡನ್ನೂ ಸೋಲಿಸಿ, ಮಿಷನ್ 20 ಯೋಜನೆಯೊಂದಿಗೆ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಬಿಜೆಪಿ ಶಾಸಕಾಂಗ ಪಕ್ಷದ ಲೆಟರ್ ಹೆಡ್ನಲ್ಲಿ ಕುಮಾರಸ್ವಾಮಿ ಸಹಿ ಹಾಕಿರುವುದು ಸಹಜವಾಗಿಯೇ ಬಿಜೆಪಿಗೆ, ಜೆಡಿಎಸ್ ಹತ್ತಿರವಾಗುತ್ತಿರುವ ಸುಳಿವು ಕೊಟ್ಟಿದೆ.
ಆದರೆ ದೇವೇಗೌಡರು (HD Devegowda) ಮಾತ್ರ ಏಕಾಂಗಿ ಮಂತ್ರ ಜಪಿಸಿದ್ದಾರೆ. ಗುರುವಾರ ತಡರಾತ್ರಿವರೆಗೂ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ (HD Devegowda), ನನಗೆ ರಾಷ್ಟ್ರ ರಾಜಕಾರಣವೂ ಗೊತ್ತಿದೆ. ರಾಜ್ಯ ರಾಜಕಾರಣವೂ ಗೊತ್ತಿದೆ. ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ ಯಾವುದರ ಅಗತ್ಯವೂ ಇಲ್ಲ. ಎನ್ಡಿಎನೂ ಇಲ್ಲ. ಇಂಡಿಯಾನೂ ಇಲ್ಲ. ನಾವು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ (HD Devegowda) ಎಂದಿದ್ದಾರೆ.



