ರಾಜಕೀಯ ಎಂದರೇನೇ ಹಾಗೆ. ಅಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ. ಶಾಶ್ವತ ಮಿತ್ರರೂ ಅಲ್ಲ. ಹಾಗೆಯೇ ನೋಡಿ.. 2019ರ ಎಲೆಕ್ಷನ್ನಿನಲ್ಲಿ ನಾವು ನಿಜವಾದ ಜೋಡೆತ್ತುಗಳು ಎಂದು ಕಂಡ ಕಂಡಲ್ಲಿ ಹೇಳುತ್ತಿದ್ದ ಕುಮಾರಸ್ವಾಮಿ ಮತ್ತು ಶಿವಕುಮಾರ್ ಇಬ್ಬರೂ ಈಗ ಶತ್ರುಗಳಾಗಿದ್ಧಾರೆ. ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದ ಸಿದ್ದರಾಮಯ್ಯ ಅವರ ಮಾತಿನ ವರಸೆ ಈಗ ಬದಲಾಗಿದೆ. ಆಗ ರಾಜ್ಯವನ್ನು ಕಟ್ಟಿದವರು ಎಂದು ಕರೆಸಿಕೊಂಡಿದ್ದ ದೇವೇಗೌಡ ಈಗ ರಾಜ್ಯವನ್ನು ಮುಳುಗಿಸಿದವರು ಎಂಬ ಕುಖ್ಯಾತಿ ಪಡೆದುಕೊಂಡಿದ್ಧಾರೆ.
ಇನ್ನು ಕಳೆದ ಬಾರಿ ಚುನಾವಣೆಯಲ್ಲಿ ಪರಿವಾರ್ ಪಾಲಿಟಿಕ್ಸ್ ಎಂದು ದೇವೇಗೌಡರ ಕುಟುಂಬದ ಹೆಸರು ಹೇಳದೇ ಟೀಕಿಸುತ್ತಿದ್ದ ಮೋದಿ ಮತ್ತು ಬಿಜೆಪಿಯ ನಾಯಕರು ಈಗ ಅದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ಧಾರೆ. ಪರಿವಾರ ರಾಜಕೀಯದ ಮಾತು ಈಗ ಕೇಳಿ ಬರುತ್ತಿಲ್ಲ.
ಅಂತಹುದೇ ವರಸೆ ಕುಮಾರಸ್ವಾಮಿಯವರದ್ದು. ಕಳೆದ ಬಾರಿ ಸುಮಲತಾ ಅವರ ಬಗ್ಗೆ ಜೆಡಿಎಸ್ ನಾಯಕರು ಟೀಕಿಸಿದ್ದ ಮಾತುಗಳು ಒಂದಾ.. ಎರಡಾ. ಕೆಲವು ಬಾರಿ ಗೌರವದ ಮಿತಿಯನ್ನೂ ದಾಟಿದ್ದವು. ಹಾಗೆ ನೋಡಿದರೆ.. ಸುಮಲತಾ ಅವರ ಬಗ್ಗೆ ಕುಮಾರಸ್ವಾಮಿ ಅವರಿಗಿಂತಲೂ ಇದ್ದುದರಲ್ಲಿ ಒಂದಷ್ಟು ಗೌರವದಿಂದ ಮಾತನಾಡಿದ್ದವರು ನಿಖಿಲ್ ಕುಮಾರಸ್ವಾಮಿ ಮಾತ್ರ. ಆದರೆ.. ಈಗ ಕಾಲ ಬದಲಾಗಿದೆ. ಶತ್ರುಗಳು ಮಿತ್ರರಾಗಿದ್ದಾರೆ. ಮಿತ್ರರು ಶತ್ರುಗಳಾಗಿದ್ಧಾರೆ.
ಇನ್ನು ವರದಿಗೆ ಬರುವುದಾದರೆ..
ಸಂಸದೆ ಸುಮಲತಾ ಅಂಬರೀಶ್ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭೇಟಿಯಾಗಿ ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯ ಮೂಲಕ ನೀವು ನಮಗೆ ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ಧಾರೆ. ಕುಮಾರಸ್ವಾಮಿ ಅವರನ್ನ ಮನೆಯ ಎದುರೇ ನಿಂತು ಸ್ವಾಗತಿಸಿ ಕರೆದೊಯ್ದಿದ್ದು ರಾಕ್ʻಲೈನ್ ವೆಂಕಟೇಶ್ ಮತ್ತು ಅಭಿಷೇಕ್ ಅಂಬರೀಷ್.
ಅಂಬರೀಷ್ ಮನೆ ನನಗೆ ಹೊಸದಲ್ಲ. ಸುಮಲತಾ ಅಕ್ಕ ಅವರ ಸಹಕಾರ ಕೋರಿದ್ದೇನೆ, ಮಂಡ್ಯದಲ್ಲಿ ತೀರ್ಮಾನ ಪ್ರಕಟ ಮಾಡ್ತೀನಿ ಅಂತ ಅವರೇ ಹೇಳಿದ್ದಾರೆ. ಅವರು ಬಿಜೆಪಿ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ವಿಜಯೇಂದ್ರ ಅವರ ಜೊತೆ ಹಲವು ವಿಚಾರಗಳನ್ನ ಚರ್ಚಿಸಿದ್ದಾರೆ. ಎಲ್ಲಾ ಮುಕ್ತವಾಗಿ ಚರ್ಚೆ ಮಾಡಿದ ಬಳಿಕ ನಿರ್ಧಾರ ಪ್ರಕಟಿಸುತ್ತೇನೆ. ಏಪ್ರಿಲ್ 4ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ ಕುಮಾರಸ್ವಾಮಿ.
ಸುಮಲತಾ ಅವರು ಈಗಲ್ಲ, ಏಪ್ರಿಲ್ 3ರಂದು ನಿರ್ಧಾರ ಹೇಳಲಿದ್ದಾರಂತೆ. ಸುಮಲತಾ ಅವರು ಮಂಡ್ಯದಲ್ಲಿ ಸಭೆ ನಡೆಸಲಿದ್ದು ಆ ದಿನ ದರ್ಶನ್ ಅವರೂ ಸುಮಲತಾ ಜೊತೆ ಇರ್ತಾರೆ. ಆಮೇಲೆ ಸುಮಲತಾ ನಿರ್ಧಾರ ಪ್ರಕಟಿಸಲಿದ್ದಾರೆ.
2019ರಲ್ಲಿ ನನಗೆ ರಾಜಕೀಯ ಅನುಭವ ಇರಲಿಲ್ಲ. ಈ 5 ವರ್ಷಗಳಲ್ಲಿ ಸ್ವಲ್ಪ ಅರಿವಾಗಿದೆ. ಮಂಡ್ಯ ಜನರಿಗೆ ಅನುಕೂಲವಾಗುವ ಹಾಗೆ ಹೆಜ್ಜೆ ಇಡುತ್ತೇನೆ. ನನ್ನ ಜೊತೆ ಇದ್ದವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅಭಿಮಾನಿಗಳನ್ನು ನೋಯಿಸುವ ಉದ್ದೇಶವೂ ಇಲ್ಲ ಎಂದಿದ್ದಾರೆ.
ಇದೇ ವೇಳೆ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸುಮಲತಾ ಅವರ ನಿರ್ಧಾರ ಏನಿರಬಹುದು ಎಂಬ ಬಗ್ಗೆ ಹೆಚ್ಚು ನಿರೀಕ್ಷೆಗಳೂ ಇಲ್ಲ. ಸುಮಲತಾ ಅವರು ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸುವ ಅವಕಾಶಗಳಿದ್ದಂತೆ ಕಾಣುತ್ತಿಲ್ಲ.
ಸುಮಲತ ಮತ್ತು ನಿಖಿಲ್ ಪರ ಮಂಡ್ಯ ಎರಡು ಗುಂಪುಗಳಾಗಿ ಒಡೆದು ಹೋಗಿತ್ತು. ಆಗ ನೂರಾರು ಜನ ತಮ್ಮ ತಮ್ಮ ನಾಯಕರಿಗಾಗಿ ಸ್ಥಳೀಯವಾಗಿ ಹೊಡೆದಾಡಿಕೊಂಡಿದ್ದರು. ಆ ಊರುಗಳಲ್ಲಿ, ಹಳ್ಳಿಗಳಲ್ಲಿ ಉದ್ಭವವಾಗಿದ್ದ ಜಗಳ ಕೊನೆಯಾಗಿವೆಯೋ.. ಇಲ್ಲವೋ.. ಗೊತ್ತಿಲ್ಲ. ಜಗಳವಾಡಿಕೊಂಡಿದ್ದ ಸ್ನೇಹಿತರು ಒಂದಾಗಿದ್ದಾರೆಯೋ.. ಇಲ್ಲವೋ ಗೊತ್ತಿಲ್ಲ. ಆದರೆ.. ನಾಯಕರಂತೂ ಒಂದಾಗಿದ್ದಾರೆ. ದಟ್ ಈಸ್ ಪಾಲಿಟಿಕ್ಸ್.



