ಡಾ.ರಾಜ್ ಮಾಡದ ಪಾತ್ರಗಳಿಲ್ಲ. ಭಿಕ್ಷುಕನಿಂದ ಕೋಟ್ಯಧಿಪತಿಯವರೆಗೆ, ದೇವಾನುದೇವತೆಯ ಪಾತ್ರದಲ್ಲಿ, ರಾಕ್ಷಸನ ಪಾತ್ರದಲ್ಲಿ, ಕಳ್ಳನಾಗಿ, ಪೊಲೀಸ್ ಆಗಿ, ಡಿಟೆಕ್ಟಿವ್ ಆಗಿ, ಹುಚ್ಚನಾಗಿ, ಡಾಕ್ಟರ್ ಆಗಿ, ಪಂಡಿತನಾಗಿ, ಪೆದ್ದನಾಗಿ, ಭಕ್ತನಾಗಿ, ರಾಜನಾಗಿ, ಆಳಾಗಿ, ಮೇಯರ್ ಆಗಿ, ಸೈನಿಕನಾಗಿ, ರೈತನಾಗಿ, ಡ್ರೈವರ್, ವೇಟರ್, ಟೀಚರ್, ಪ್ರೊಫೆಸರ್, ಸಂಗೀತಗಾರ, ಕವಿ.. ಹೀಗೆ ಏನೇನೆಲ್ಲ ಪಾತ್ರ ಮಾಡಿದ್ದಾರೋ.. ಅದರಲ್ಲಿ ಇನ್ನೊಂದು ವಿಶೇಷ ದೂರದ ಬೆಟ್ಟ ಚಿತ್ರದ್ದು.
ದೂರದ ಬೆಟ್ಟ ಸಿನಿಮಾದಲ್ಲಿ ರಾಜ್ ಕುಲುಮೆಯಲ್ಲಿ ಕೆಲಸ ಮಾಡುವವನ ಪಾತ್ರ ಮಾಡಿದ್ಧಾರೆ. ಬಹುಶಃ ರಾಜ್ ಬಿಟ್ಟರೆ, ಆ ಪಾತ್ರದಲ್ಲಿ ನಟಿಸಿದ ಇನ್ನೊಬ್ಬ ಹೀರೋ ಕನ್ನಡಿಗರ ನೆನಪಿನಲ್ಲಿಲ್ಲ. ಈಗ ಅಂತಹ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ಕಾಟೇರದಲ್ಲಿ ದರ್ಶನ್ ಅವರದ್ದು ಕುಲುಮೆಗಾರನ ಪಾತ್ರ. ಆದರೆ ದರ್ಶನ್ ಅವರ ಪಾತ್ರ ಮಾತ್ರ ದೂರದ ಬೆಟ್ಟದ ಮುಗ್ದನಂತಿಲ್ಲ. ಬದಲಿಗೆ ಸುಡುವ ಕೆಂಡದಂತಹ ಪಾತ್ರ.
ಕಾಟೇರ ಚಿತ್ರ ಇದೇ ಡಿ.29ಕ್ಕೆ ರಿಲೀಸ್ ಆಗ್ತಾ ಇದೆ. ಕಾಟೇರ ರಿಲೀಸ್ ಆಗುವುದಕ್ಕೂ ಒಂದು ವಾರ ಮುಂಚೆ ಸಲಾರ್ ಮತ್ತು ಡಂಕಿ ರಿಲೀಸ್ ಆಗ್ತಾ ಇವೆ. ಎರಡೂ ಪ್ಯಾನ್ ಇಂಡಿಯಾ ಸಿನಿಮಾಗಳೇ. ಸಲಾರ್‌ಗೆ ಪ್ರಭಾಸ್ ಹೀರೋ. ಪ್ರಶಾಂತ್ ನೀಲ್ ಡೈರೆಕ್ಟರ್. ಹೊಂಬಾಳೆ ಬ್ಯಾನರ್ʻನ ಸಿನಿಮಾ. ಡಂಕಿಗೆ ಶಾರೂಕ್ ಖಾನ್ ಹೀರೋ. ರಾಜ್ʻಕುಮಾರ್ ಹಿರಾನಿ ಡೈರೆಕ್ಟರ್. ಈ ಎರಡೂ ಚಿತ್ರಗಳು ಬಿಡುಗಡೆಯಾದ ಒಂದೇ ವಾರಕ್ಕೆ ಬರ್ತಾ ಇರೋ ಕಾಟೇರ ಚಿತ್ರಕ್ಕೆ ಒಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ದರ್ಶನ್ ಕೊಟ್ಟಿರೋ ಉತ್ತರ ಇದು. ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕನ್ನಡದ ಸಿನಿಮಾ. ಈ ಸಿನಿಮಾ ಮಾಡಿರೋದು ಕನ್ನಡಿಗರಿಗೋಸ್ಕರ ಎಂದಿದ್ದಾರೆ.
ಡಿಸೆಂಬರ್ 29ಕ್ಕೆ ಯಾಕೆ ರಿಲೀಸ್ ಮಾಡುತ್ತಿದ್ದೇವೆ ಅಂದ್ರೆ, ನಮ್ಮ ಸಿನಿಮಾ, ನಮ್ಮ ಜಾಗವಿದು. ಯಾರಿಗೋ ಹೆದರಿಕೊಂಡು ನಾವ್ಯಾಕೆ ಬರಬೇಕ್ರಿ. ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು. ನಮಗ್ಯಾಕೆ ಹೆದರಿಕೆ. ನಮ್ಮ ಕನ್ನಡ ಜನ ಇದ್ದಾರಾ ಇಲ್ಲ ಅಂತ ನಮಗೆ ಡೌಟ್ ಬಂದು ಬಿಡಬೇಕು. ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಯಾವಾಗಲೂ ಕನ್ನಡಿಗರು ಕೈ ಹಿಡಿದೇ ಹಿಡಿಯುತ್ತಾರೆ ಅನ್ನೋದು ದರ್ಶನ್ ಆತ್ಮವಿಶ್ವಾಸ.
ದರ್ಶನ್ ಈ ಸಿನಿಮಾದಲ್ಲಿ ಕುಲುಮೆಯಲ್ಲಿ ಕೆಲಸ ಮಾಡುವವನ ಪಾತ್ರ ಮಾಡಿದ್ದು, ಆತನ ಎದುರು ಯಾರಿಗೂ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ಆತನ ಪ್ರಕಾರ ಕಬ್ಬಿಣ ಎರಡು ಬಾರಿಯಷ್ಟೇ ಕೆಂಪಗಾಗುತ್ತೆ. ಒಂದು ಬೆಂಕಿಯಲ್ಲಿ ಬೆಂದಾಗ.. ಇನ್ನೊಂದು ರಕ್ತದಲ್ಲಿ ನೆಂದಾಗ.. ಅಷ್ಟು ರೆಬಲ್ ಪಾತ್ರ ಅವರದ್ದು. ಕಾಟೇರ ಚಿತ್ರದ ಪಾತ್ರದ ಪವರ್ ಏನು ಅನ್ನೋದು ಟೀಸರಿನಲ್ಲಿ ಗೊತ್ತಾಗಿದೆ. ಟ್ರೇಲರಿನಲ್ಲಿ ಇನ್ನಷ್ಟು ಗೊತ್ತಾಗಲಿದೆ. ಸಿನಿಮಾ ಬಂದ ಮೇಲೆ ಪೂರ್ತಿ ಗೊತ್ತಾಗಲಿದೆ.



