ನೋಡುತ್ತಾ ನೋಡುತ್ತಾ ನಿನ್ನನ್ನು ನೋಡುತ್ತಾ..
ಅಂಗಾತ ಬಿದ್ದೆ ಚಿನ್ನಮ್ಮ..
ಏನಂತ ಏನಂತ ಭೂಮಿಲಿ ನಂಗಂತ..
ಹುಟ್ಬುಟ್ಟೆ ನೀನು ಚಿನ್ನಮ್ಮ..
ಬೆಳದಿಂಗ್ಳ ಬಿಂದಿಗೇಲಿ ಹಿಡ್ಕೊಂಬುಟ್ಟು..
ಕುಡ್ಕೊಂಡು ಬೆಳ್ದೇನಮ್ಮ..
ನೀನಿಟ್ಟ ಹಣೆಬೊಟ್ಟು ಮ್ಯಾಲೆ ಹನಿ ನಕ್ಷತ್ರ ಆಗ್ತಾವಮ್ಮ..
ಚಿನ್ನಮ್ಮ.. ಚಿನ್ನಮ್ಮ.. ನೀ ನನ್ನ ಮುದ್ದುಗುಮ್ಮ..
ಒಂದು ಪಕ್ಕಾ ಲವ್ ಸಾಂಗು..
ಕವಿರಾಜ್ ಬರೆದಿರೋ ಹಾಡಿನಲ್ಲೊಂದಿಷ್ಟು ಕಾಮಿಡಿ ಇದೆ. ತುಂಟತನವಿದೆ. ರೊಮ್ಯಾಂಟಿಕ್ ಆಗಿದೆ.. ಹುಡುಗ ಹುಡುಗಿಯನ್ನು ಹೊಗಳುತ್ತಲ್ಲೇ ಕಾಳು ಹಾಕ್ತಿದ್ದಾನೆ. ʻಕೃಷ್ಣಂ ಪ್ರಣಯ ಸಖಿ’ ಸಿನಿಮಾ ಕೂಡ ಈ ಎಲ್ಲಾ ಎಲಿಮೆಂಟ್‌ಗಳನ್ನು ಹೊತ್ತು ಬಂದಿದ್ದು, ಹಾಡು ಬೊಂಬಾಟ್ ಆಗಿದೆ.
ದಂಡುಪಾಳ್ಯದಂತಹ ರಗಡ್ ಸಿನಿಮಾ ಆಕ್ಷನ್ ಕಟ್ ಹೇಳಿದ್ದ ಶ್ರೀನಿವಾಸ ರಾಜು, ಈಗ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹೀರೋ. ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಿಂದ ಪ್ರಶಾಂತ್ ಜಿ ರುದ್ರಪ್ಪ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗಷ್ಟೇ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ “ಚಿನ್ನಮ್ಮ” ಹಾಡು ರಿಲೀಸ್ ಆಗಿದ್ದು, ಸಖತ್ ಟ್ರೆಂಡಿಯಾಗಿದೆ.
ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ಆಗಸ್ಟ್ 15 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಈ ಸಿನಿಮಾದಲ್ಲಿ ಗಣೇಶ್ ಜೊತೆಗೆ ಸುಪ್ರೀಂ ಹೀರೋ ಶಶಿಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಗಣೇಶ್ ಎದುರು ಮಾಳವಿಕಾ ನಾಯರ್ ಹೀರೋಯಿನ್. ಈ ಹಾಡಿನಲ್ಲಿ ಬರುವ ಚಿನ್ನಮ್ಮ ಕೂಡಾ ಮಾಳವಿಕಾ ಅವ್ರೇ.
ಕವಿರಾಜ್ ಬರೆದಿರೋ ಹಾಡಿಗೆ ಸಖತ್ತಾಗಿ ಮ್ಯೂಸಿಕ್ ಕೊಟ್ಟಿರೋದು ಅರ್ಜುನ್ ಜನ್ಯ. ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ.
ಅರ್ಜುನ್ ಜನ್ಯ ಒಟ್ಟು ಒಟ್ಟು ಏಳು ಹಾಡು ಸಂಯೋಜಿಸಿದ್ದಾರೆ. ಆ ಪೈಕಿ ಎರಡನೇ ಹಾಡು ಬಿಡುಗಡೆಯಾಗಿದೆ. ಮೈಸೂರಿನಲ್ಲಿ ಬಿಡುಗಡೆಯಾದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ ಚಿನ್ನಮ್ಮ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ ಎಂದು ನಿರ್ದೇಶಕ ಶ್ರೀನಿವಾಸರಾಜು ಆತ್ಮವಿಶ್ವಾಸ ವ್ಯಕ್ತಪಡಿಸಿದ್ಧಾರೆ.
ನಾನು ಬಹಳ ಇಷ್ಟಪಡುವ ಗೀತರಚನೆಕಾರರಾದ ಕವಿರಾಜ್ ಅವರು ಬರೆದಿರುವ “ಚಿನ್ನಮ್ಮ” ಹಾಡು ತುಂಬಾ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ, ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಅವರ ಗಾಯನ ಮತ್ತು ಶೇಖರ್ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ವೆಂಕಟ್ ರಾಮಪ್ರಸಾದ್ ಅವರ ಛಾಯಾಗ್ರಹಣ ಎಲ್ಲವೂ ಸೊಗಸಾಗಿದೆ. ಈ ಹಾಡು ಚಿತ್ರೀಕರಣವಾದ ಜಾಗ ಕೂಡ ಅದ್ಭುತವಾಗಿದೆ. ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ ಎಂದಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.
ʻಕೃಷ್ಣಂ ಪ್ರಣಯ ಸಖಿ’ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಸಿನಿಮಾ. ಇಲ್ಲಿ ಗಣೇಶ್‌ಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ರೆ, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನಾ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ಸಿನಿಮಾದಲ್ಲಿದ್ದಾರೆ.



