ಇತ್ತೀಚೆಗೆ ಗಣೇಶ್ ಅವರಿಗೆ ಕಾಡ್ತಿರೋ ಅತಿ ದೊಡ್ಡ ಸಮಸ್ಯೆ ಎಂದರೆ.. ಸಿನಿಮಾ ರಿಲೀಸ್ ಆಗೋಕೂ ಮುನ್ನ ಭರ್ಜರಿ ನಿರೀಕ್ಷೆ ಹುಟ್ಟಿಸುತ್ತೆ. ಹಾಡುಗಳು ಎಂದಿನಂತೆ ಹಿಟ್ ಆಗ್ತವೆ. ವ್ಹಾರೆವ್ಹಾ.. ಮತ್ತೊಂದು ಮುಂಗಾರು ಮಳೆ ಗ್ಯಾರಂಟಿ ಅನ್ನೋ ಹೊತ್ತಿಗೆ ಸಿನಿಮಾ ರಿಲೀಸ್ ಆಗುತ್ತೆ. ಓಪನಿಂಗ್ ಭರ್ಜರಿಯಾಗಿಯೇ ಇರುತ್ತೆ. ಆ ಭರ್ಜರಿ ಕಮಾಯಿ ಎರಡು ಅಥವಾ ೩ ದಿನಕ್ಕೆ ಢಮಾರ್ ಆಗುತ್ತೆ. ಸಿನಿಮಾ ಫ್ಲಾಪ್. ಹಾಗಂತ ಗಣೇಶ್ ಅವರ ಇತ್ತೀಚಿನ ಚಿತ್ರಗಳು ಕಳಪೆ ಎಂದೇನಲ್ಲ. ಆದರೆ.. ಏನೋ ಒಂದು ಹೊಸತನ ಬೇಕಿತ್ತು ಅಂತಾ ಪ್ರೇಕ್ಷಕರಿಗೆ ಅನ್ನಿಸ್ತಾ ಇದೆ. ಆ ಹೊಸತನ ಏನು ಅನ್ನೋದು ಗಣೇಶ್ ಅವರಿಗೆ ಅಥವಾ ಗಣೇಶ್ ಚಿತ್ರಗಳ ನಿರ್ದೇಶಕರಿಗೆ ಅರ್ಥವಾಗ್ತಾ ಇಲ್ಲ.
ಅದು ಈ ಬಾರಿ ಆಗುತ್ತದೆಯಾ..? ಕೃಷ್ಣಂ ಪ್ರಣಯ ಸಖಿ ಚಿತ್ರ ಆಗಸ್ಟ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಹಾಡುಗಳ ಮೂಲಕ “ಕೃಷ್ಣಂ ಪ್ರಣಯ ಸಖಿ” ಪ್ರೇಕ್ಷಕರ ಮನ ತಲುಪಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಸಿನೆಮಾ. ಅರ್ಜುನ್ ಜನ್ಯ ಸಂಗೀತ ನೀಡಿರುವ ಏಳು ಹಾಡುಗಳಿದ್ದು. ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿದೆ. ಎಂದಿನಂತೆ.. ಎಲ್ಲ ಹಾಡುಗಳೂ ಹಿಟ್ ಆಗಿವೆ.. ಅದರಲ್ಲಿಯೂ ಚಿನ್ನಮ್ಮ.. ಹಾಡಿನ ಮೋಡಿಯೇ ಬೇರೆ ರೀತಿ ಇದೆ.
ಆಗಸ್ಟ್ 15ಕ್ಕೆ ತೆರೆ ಕಾಣುತ್ತಿರೋ ಚಿತ್ರಕ್ಕೆ ಟ್ರೇಲರ್ ಇಲ್ಲ. ಟ್ರೇಲರ್ ಯಾಕಿಲ್ಲ ಎಂಬ ಪ್ರಶ್ನೆಗೆ ನಿರ್ದೇಶಕ ಶ್ರೀನಿವಾಸ ರಾಜು ‘‘ಈ ಚಿತ್ರಕ್ಕೆ ಟ್ರೇಲರ್ ಅವಶ್ಯಕತೆ ಇರಲಿಲ್ಲ ಎಂದು ಒಂದು ವರ್ಷದ ಹಿಂದೆ ಅನಿಸಿತ್ತು. ಇದೊಂದು ಮ್ಯೂಸಿಕಲ್ ಚಿತ್ರವಾದ್ದರಿಂದ, ಈ ಚಿತ್ರವನ್ನು ಹಾಡುಗಳಿಂದ ಮಾತ್ರ ಪ್ರಮೋಟ್ ಮಾಡುವುದು ನನ್ನ ಆಸೆ. ಹಾಗಾಗಿ, ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿಲ್ಲ. ಇದು ಈ ಚಿತ್ರಕ್ಕೆ ಮಾತ್ರ” ಎಂದು ಹೇಳಿದ್ದಾರೆ.
ರಿಲೀಸ್‌ಗೂ ಮುನ್ನವೇ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಹಾಡುಗಳ ಮೂಲಕ ಪ್ರೇಕ್ಷಕರ ಮನ ತಲುಪಿದೆ. ನಿರೀಕ್ಷೆಗೂ ಮೀರಿ ಸಿನಿಮಾದ ಹಾಡುಗಳು ಹಿಟ್ ಅಗಿವೆ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಗಣೇಶ್ ಜೊತೆಗೆ ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ, ಹಿರಿಯ ನಟ ರಾಮಕೃಷ್ಣ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್ ಜಿ.ರುದ್ರಪ್ಪ ಬಂಡವಾಳ ಹೂಡಿರೋ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಐದನೇ ಹಾಡನ್ನ ಕವಿರಾಜ್ ಸಾಹಿತ್ಯ ಬರೆದಿದ್ದು, ಸಾಯಿಕಾರ್ತಿಕ್ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ಈ ಮಧುರ ಗೀತೆ ಮೂಡಿಬಂದಿದೆ.
ಹಾಡುಗಳೆಲ್ಲ ಹಿಟ್ ಆದ ಹಿನ್ನೆಲೆಯಲ್ಲಿ ಆನಂದ್ ಆಡಿಯೋ ಸಂಸ್ಥೆ ವಿಶೇಷ ಕಾರ್ಯಕ್ರಮ ಆಯೋಜಿಸಿ ಹಾಡುಗಳನ್ನು ಬರೆದವರನ್ನು ಹಾಗೂ ಹಾಡಿದರವನ್ನು ಫಲಕ ನೀಡಿ ಸನ್ಮಾನಿಸಿದ್ದು ವಿಶೇಷ. ಗಾಯಕರಾದ ಚಂದನ್ ಶೆಟ್ಟಿ, ಜಸ್ಕರಣ್ ಸಿಂಗ್, ಗೀತರಚನೆಕಾರ ನಿಶಾನ್ ರೈ ಅವರನ್ನು ಹಾಗೂ ಚಿತ್ರತಂಡದ ಸದಸ್ಯರನ್ನು ಆನಂದ್ ಆಡಿಯೋದ ಶ್ಯಾಮ್ ಮತ್ತು ಆನಂದ್ ಸನ್ಮಾನಿಸಿದ್ದಾರೆ.
ಈಗ ಬಿಡುಗಡೆಯಾಗಿ ಹಿಟ್ ಆಗಿರುವ ಹಾಡುಗಳು ಇವು.
- ನಿನ್ನ ಹೆಗಲು ನನಗಾಗೇ ಇರಲು ಬೇರೆ ಸುಖವ ಯಾಕೆ ಕೇಳಲಿ
- ಹೇ ಗಗನ ಮಳೆಯಾ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ
- ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
- ದ್ವಾಪರ ದಾಟುತ ನನ್ನನೇ ನೋಡಲು..
- ನೋಡುತ್ತ ನೋಡುತ್ತಾ ಅಂಗಾತ ಬಿದ್ದೋದೆ ಚಿನ್ನಮ್ಮ..ಸಿನಿಮಾ ಸ್ವಾತಂತ್ರ್ಯ ದಿನಾಚರಣೆಯಂದು ಬರುತ್ತೆ.. ಹಾಡೂ ಸಿಗುತ್ತೆ.. ಆದರೆ.. ಈ ಚಿತ್ರದೊಂದಿಗೆ ಗಣೇಶ್ ಅವರಿಗೆ ಅಂಟಿಕೊಂಡಿರೋ ಫ್ಲಾಪ್ ಮತ್ತು ಆವರೇಜ್ ಸಿನಿಮಾ ಸ್ಟಾರ್ ಅನ್ನೋ ಪಟ್ಟ ತೊಲಗಲಿ. ಗೋಲ್ಡನ್ ಸ್ಟಾರ್ ಎಂಬ ಪಟ್ಟ ಮತ್ತೊಮ್ಮೆ ಹೊಳೆಯಲಿ ಅನ್ನೋದು ಎಲ್ಲರ ಹಾರೈಕೆ.



