ಈ ವರ್ಷದ ಸೂಪರ್ ಹಿಟ್ ಚಿತ್ರ ಕೃಷ್ಣಂ ಪ್ರಣಯ ಸಖಿ. ಶ್ರೀನಿವಾಸರಾಜು ಅವರ ನಿರ್ದೇಶನದ, ಪ್ರಶಾಂತ್ ಜಿ. ರುದ್ರಪ್ಪ ಅವರು ನಿರ್ಮಾಣ ಮಾಡಿದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲೂ ಈ ಸಿನಿಮಾ ಅಬ್ಬರಿಸಿದೆ. ಈಗ ಅಬುದಾಬಿ ಹಾಗೂ ದುಬೈನಲ್ಲೂ ಸದ್ದು ಮಾಡ್ತಾ ಇದೆ.
ಕಳೆದ ಆಗಸ್ಟ್ ತಿಂಗಳಲ್ಲಿ ತೆರೆಕಂಡ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆದ ಅತ್ಯುತ್ತಮ ಫ್ಯಾಮಿಲಿ ಎಂಟರ್ಟೇನ್ ಸಿನಿಮಾ ಎಂದರೆ ಅದು ‘ಕೃಷ್ಣಂ ಪ್ರಣಯ ಸಖಿ’. ಗಣೇಶ್, ಶರಣ್ಯಾ ಶೆಟ್ಟಿ, ಮಾಳವಿಕಾ ನಾಯರ್ ಮೊದಲಾದವರು ನಟಿಸಿರೋ ಈ ಸಿನಿಮಾ ಗೆದ್ದು ಬೀಗಿದೆ. ಗಣೇಶ್ ವೃತ್ತಿ ಜೀವನಕ್ಕೆ ಈ ಚಿತ್ರ ಮೈಲೇಜ್ ಕೊಟ್ಟಿದೆ. ಪರಭಾಷೆಯ ಹಲವು ಸಿನಿಮಾಗಳ ರಿಲೀಸ್ ಮಧ್ಯೆಯೂ ಈ ಸಿನಿಮಾ ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ.
ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾತಂಡ ದುಬೈಗೂ ಕಾಲಿಟ್ಟಿದೆ. ವಿಶೇಷ ಪ್ರದರ್ಶನದಲ್ಲಿ ಗಣೇಶ್, ಮಾಳವಿಕಾ ನಾಯರ್, ರಂಗಾಯಣ ರಘು, ಶ್ರೀನಿವಾಸ್ ರಾಜು, ಪ್ರಶಾಂತ್ ಜಿ. ರುದ್ರಪ್ಪ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಭಾಗವಹಿಸಿದ್ದರು. ದುಬೈನಲ್ಲಿ ಇತ್ತೀಚೆಗೆ ರಶ್ಮಿ ವೆಂಕಟೇಶ್, ಸೆಂದಿಲ್ ಹಾಗೂ ತಂಡದವರು ಈ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ದುಬೈ ಹಾಗೂ ಅಬುದಾಬಿಯಲ್ಲಿ ಎರಡೂ ಕಡೆ ಪ್ರದರ್ಶನ ಮಾಡಲಾಗಿತ್ತು. ಎರಡೂ ಕಡೆಗಳಲ್ಲೂ ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡೂ ಕಡೆಗಳಲ್ಲೂ ಥಿಯೇಟರ್ ಹೌಸ್‌ಫುಲ್ ಆಗಿದೆ. ದುಬೈ ಕನ್ನಡಿಗರು ಈ ಸಿನಿಮಾ ನೋಡಿ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಬಾಕ್ಸ್ ಆಫೀಸ್ ಬಗ್ಗೆ ಲೆಕ್ಕ ಕೊಡುವ ಸಾಕ್ನಿಕ್ ವರದಿ ಮಾಡಿರುವ ಪ್ರಕಾರ ‘ಕೃಷ್ಣಂ ಪ್ರಣಯ ಸಖಿ’ ಈವರೆಗೆ ವಿಶ್ವಮಟ್ಟದಲ್ಲಿ 17.3 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಮಾಡಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ 20 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡುತ್ತಿರುವಾಗ ಕನ್ನಡದ ಸಿನಿಮಾಗಳು ಈ ರೀತಿಯ ಕಲೆಕ್ಷನ್ ಮಾಡುತ್ತಿರುವುದು ನಿಜಕ್ಕೂ ವಿಶೇಷ ಎನ್ನಬಹುದು. ಗಣೇಶ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ಒಂದು ದೊಡ್ಡ ಯಶಸ್ಸಿಗಾಗಿ ಅವರು ಕಾದಿದ್ದರು. ಹೀಗಾಗಿ, ‘ಕೃಷ್ಣಂ ಪ್ರಣಯ ಸಖಿ’ ಯಶಸ್ಸು ಅವರ ಜನಪ್ರಿಯತೆ ಹೆಚ್ಚಿಸಿದೆ. ಮಾಳವಿಕಾ ನಾಯರ್ ಅವರು ಕನ್ನಡಕ್ಕೆ ಬಂದು ಮಿಂಚಿದ್ದಾರೆ. ಈ ಚಿತ್ರದ ಗೆಲುವು ಕನ್ನಡ ಚಿತ್ರರಂಗಕ್ಕೆ ಹೊಸ ಸ್ಫೂರ್ತಿ ನೀಡಿದೆ.
ಈಗಲೂ ಕೂಡಾ ಚಿತ್ರದ ದ್ವಾಪರ ಹಾಗೂ ಚಿನ್ನಮ್ಮ ಹಾಡುಗಳ ಟ್ರೆಂಡ್ ಕಡಿಮೆಯಾಗಿಲ್ಲ. ಆದರೆ, ಎರಡನೇ ವಾರದ ನಂತರ ಚಿತ್ರದ ಕಲೆಕ್ಷನ್ ಸ್ಲಲ್ಪ ಕಡಿಮೆಯಾಗಿದೆ.



