ಸಿನಿಮಾಗಳು ಬರ್ತಾನೇ ಇದ್ವು. ಓಪನಿಂಗ್ ಬೊಂಬಾಟ್ ಆಗ್ತಿತ್ತು. ಒಳ್ಳೆಯ ವಿಮರ್ಶೆಗಳೂ ಬರ್ತಾ ಇದ್ವು. ಆದರೆ ಅದೇಕೋ ಏನೋ.. ಎರಡು ಮೂರು ದಿನಕ್ಕೇ ಚಿತ್ರದ ಬಗ್ಗೆ ಇದ್ದ ಕ್ರೇಜ್ ಡೌನ್ ಆಗಿ ಹೋಗ್ತಿತ್ತು. ಇದು ಗಣೇಶ್ ತಮ್ಮ ಈ ಹಿಂದಿನ ಹಲವು ಚಿತ್ರಗಳಲ್ಲಿ ಎದುರಿಸಿದ ಅತೀ ದೊಡ್ಡ ಸಮಸ್ಯೆ.
ಭಟ್ಟರ ಜೊತೆ ಮಾಡಿದ್ದ ಮುಗುಳುನಗೆ, ಗಾಳಿಪಟ 2, ಭಾವನಾ ಜೊತೆ ನಟಿಸಿದ್ದ 99, ತ್ರಿಬಲ್ ರೈಡಿಂಗ್, ಬಾನದಾರಿಯಲ್ಲಿ.. ಹೀಗೆ ಹಲವು ಚಿತ್ರಗಳು ಓಪನಿಂಗ್ ಪಡೆದು, ಒಳ್ಳೆಯ ರಿಯಾಕ್ಷನ್ ಕೂಡಾ ಪಡೆದು ಆಮೇಲೆ ತಣ್ಣಗಾಗಿಬಿಟ್ಟಿದ್ದವು. ಚಮಕ್ʻನಂತಹ ಹಿಟ್ ಕೊಟ್ಟಿದ್ದ ಸಿಂಪಲ್ ಸುನಿ-ಗಣೇಶ್ ಜೋಡಿಗೂ ಸಖತ್ ಚಿತ್ರದಲ್ಲಿ ಗೆಲುವು ಸಿಕ್ಕಿರಲಿಲ್ಲ. ಆ ನಿರೀಕ್ಷೆಯನ್ನೆಲ್ಲ ನೀಗಿಸಿದೆ ಕೃಷ್ಣಂ ಪ್ರಣಯ ಸಖಿ.
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಸುದೀರ್ಘ ಕಾಲದಿಂದ ಮರೀಚಿಕೆಯಾಗಿದ್ದ ಸೂಪರ್ ಹಿಟ್ ಸಿನಿಮಾ ಸಿಕ್ಕಿದೆ. ಗೆದ್ದಿರುವುದು ಗಣೇಶ್ ಅಷ್ಟೇ ಅಲ್ಲ, ನಿರ್ದೇಶಕ ಶ್ರೀನಿವಾಸ ರಾಜು, ನಿರ್ಮಾಪಕ ಪ್ರಶಾಂತ್ ಸಿ ರುದ್ರಪ್ಪನವರೂ ಗೆದ್ದಿದ್ದಾರೆ.
ಇನ್ನು ಚಿತ್ರದ ಇನ್ನೊಬ್ಬ ಹೀರೋ ಎಂದರೆ ಅದು ಅರ್ಜುನ್ ಜನ್ಯ. ಮೈ ಮ್ಯಾರೇಜ್ ಈಸ್ ಫಿಕ್ಸ್ʻಡ್.. , ಚಿನ್ನಮ್ಮ, ದ್ವಾಪರ, ಹೇ.. ಗಗನಾ, ನಿನ್ನ ಹೆಗಲು, ಕಾಡದೆಯೇ ಹೇಗಿರಲಿ.. ಹೀಗೆ ಚಿತ್ರದ ಪ್ರತಿಯೊಂದು ಹಾಡೂ ಸೂಪರ್ ಹಿಟ್. ಚಿನ್ನಮ್ಮ ಹಾಗೂ ದ್ವಾಪರ ಹಾಡುಗಳಂತೂ ರೀಲ್ಸ್ ಲೋಕದಲ್ಲಿ ಹೊಸ ದಾಖಲೆಯನ್ನೇ ಬರೆದಿವೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಿಲೀಸ್ ಆದ ಕೃಷ್ಣಂ ಪ್ರಣಯ ಸಖಿ, ನಿರಂತರವಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದಿದೆ. ಚಿತ್ರದ ಒಟ್ಟಾರೆ ಗಳಿಕೆ ಈ ಹಿಂದೆಯೇ ೩೦ ಕೋಟಿ ದಾಟಿತ್ತು. ಈಗ 50 ದಿನ ಪೂರೈಸಿದೆ. ಗಣೇಶ್ ಮತ್ತು ರಂಗಾಯಣ ರಘು ಅವರು ನುಡಿದಿದ್ದ ಭವಿಷ್ಯದಂತೆ, ಶ್ರೀನಿವಾಸ ರಾಜು ಅವರ ಕನಸಿನ ಗುರಿಯನ್ನೂ ಮುಟ್ಟಿತಾ.. ಅದರ ಬಗ್ಗೆ ಸ್ಪಷ್ಟತೆ ಇಲ್ಲ. ಏಕೆಂದರೆ ಅಧಿಕೃತ ಲೆಕ್ಕ ಕೊಡುತ್ತೇವೆ ಎಂದಿದ್ದ ಚಿತ್ರತಂಡ ಆ ಲೆಕ್ಕವನ್ನು ಕೊಟ್ಟಿಲ್ಲ. ಆದರೆ, ಕೃಷ್ಣಂ ಪ್ರಣಯ ಸಖಿ ದಾಖಲೆ ಬರೆದಿರುವುದಂತೂ ನಿಜ.
ಗಣೇಶ್ ಎದುರು ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಾಯಕಿಯಾಗಿ ನಟಿಸಿದ್ದರು. ಚಿತ್ರಕ್ಕೆ ಟ್ರೇಲರ್ ರಿಲೀಸ್ ಮಾಡದೆ ಕೇವಲ ಹಾಡುಗಳ ಮೂಲಕವೇ ಟ್ರೆಂಡ್ ಸೃಷ್ಟಿಸಿದ್ದ ಕೃಷ್ಣಂ ಪ್ರಣಯ ಸಖಿ, ಈಗ 50 ದಿನ ಪೂರೈಸಿದೆ.
ಗಣೇಶ್ ಕೃಷ್ಣನಾಗಿ, ಮಾಳವಿಕಾ ಪ್ರಣಯ ಪಾತ್ರದಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಜಾಹ್ನವಿ ಪಾತ್ರದಲ್ಲಿ ಶರಣ್ಯ ಶೆಟ್ಟಿ ಮಿಂಚು ಹರಿಸಿದ್ದಾರೆ. ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲ, ಶಶಿಕುಮಾರ್, ಶೃತಿ, ಅಶೋಕ್, ರಾಮಕೃಷ್ಣ, ಶ್ರೀನಿವಾಸ ಮೂರ್ತಿ, ಮಾನಸಿ ಸುಧೀರ್ ಸೇರಿದಂತೆ ಚಿತ್ರತಂಡದ ಪ್ರತಿಯೊಬ್ಬರೂ ಮಿಂಚು ಹರಿಸಿದ್ದಾರೆ. ಅದೆಲ್ಲವೂ ಸಕ್ಸಸ್ ಆಗಿ ಬಂದಿದೆ.
ಸದ್ಯಕ್ಕೆ ಗಣೇಶ್ ಮತ್ತು ರಮೇಶ್ ಅರವಿಂದ್ ಯುವರ್ ಸಿನ್ಸಿಯರ್‌ಲೀ ರಾಮ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ ಜೊತೆ ನಟಿಸುವುದಕ್ಕೂ ಸಿದ್ಧರಾಗಿರುವ ಗಣೇಶ್ ಚಿತ್ರ ಇನ್ನಷ್ಟೇ ಟೇಕಾಫ್ ಆಗಬೇಕಿದೆ.



