ಕೆಪಿಎಸ್‌ಸಿ ಪರೀಕ್ಷೆ ನಡೆದು ಪ್ರಶ್ನೆ ಪತ್ರಿಕೆಗಳ ಸ್ಥಿತಿ ನೋಡಿದರೆ.. ಥತ್.. ಇಂತವರೆಲ್ಲ ಪ್ರಶ್ನೆ ಪತ್ರಿಕೆ ಸಿದ್ಧ ಮಾಡ್ತಾರಾ ಅನ್ನೋ ಪ್ರಶ್ನೆ ಉದ್ಭವವಾಗದೇ ಇರದು. ಏಕೆಂದರೆ ಪ್ರಶ್ನೆ ಪತ್ರಿಕೆ ರೂಪಿಸಿದವರು ಬಹುಶಃ ಗೂಗಲ್ ಟ್ರಾನ್ಸ್ʻಲೇಷನ್ ಅಥವಾ ಎಐ ಬಳಸಿ ಅನುವಾದ ಮಾಡಿ.. ಚಲ್ತಾ ಹೈ ಎಂದು ಮಾಡಿದ್ದಾರೇನೋ ಎಂಬ ಅನುಮಾನ ಇತ್ತು. ಈಗ ನೋಡಿದರೆ, ಹಾಗೆಲ್ಲ ಏನೂ ಮಾಡಿಲ್ಲ. ಗೂಗಲ್ ಮತ್ತು ಎಐನ್ನು ಪ್ರಶ್ನೆ ಪತ್ರಿಕೆ ರೂಪಿಸುವುದಕ್ಕೆ ಬಳಸಿಲ್ಲ ಎಂದು ಉತ್ತರ ಸಿಕ್ಕಿದೆ. ಹಾಗಾದರೆ.. ಪ್ರಶ್ನೆ ಪತ್ರಿಕೆ ರೂಪಿಸಿದವರೇ ದಡ್ಡರಾ..? ಅಜ್ವಾನಿಗಳಾ..? ಅವಿದ್ಯಾವಂತರಾ..? ಅವರು ಆ ಹುದ್ದೆಗೆ ಪ್ರತಿಭೆಯಿಂದ ಬಂದವರೋ.. ಬೇರೆ ಮಾರ್ಗಗಳ ಮೂಲಕ ಬಂದವರೋ.. ಪ್ರಶ್ನೆ ಮೂಡುವುದು ಸಹಜವೇ.
ಸುಮ್ಮನೆ ಈ ಪ್ರಶ್ನೆ ಪತ್ರಿಕೆಗಳನ್ನೊಮ್ಮೆ ನೋಡಿ. ಉತ್ತರಗಳನ್ನೂ ನೋಡಿ.
ಅನುವಾದ ಮತ್ತು ಲೋಪಗಳ ಪಟ್ಟಿ
– ಪತ್ರಿಕೆ -1ರಲ್ಲಿ ‘ಕೆಳಗಿನ ಯಾವ ಘಟ್ಟಗಳು ಮಧ್ಯ, ಹಿಮಾಲಯ/ಕೆಳ ಹಿಮಾಲಯಗಳಲ್ಲಿವೆ?’ ಎಂಬ ಪ್ರಶ್ನೆಗೆ 5 ಉತ್ತರಗಳನ್ನು ನೀಡಲಾಗಿದೆ. ಕನ್ನಡ ಮುದ್ರಣದಲ್ಲಿ ಆಯ್ಕೆ ಸಂಖ್ಯೆ 3ರಲ್ಲಿ ‘4 ಹೇಳಿಕೆಗಳು ಸರಿ ಇವೆ’ ಎಂದು ಇದೆ. ಇಂಗ್ಲೀಷ್‌ನಲ್ಲಿ ‘Only 3 statements are correct’ ಎಂದಿದೆ. ಸರಿ ಉತ್ತರ ಯಾವುದು..? ಇಂಗ್ಲಿಷ್ ಉತ್ತರವೋ.. ಕನ್ನಡದ ಉತ್ತರವೋ..?
– ಹೇಳಿಕೆಗಳನ್ನು ಪರಿಗಣಿಸಿ ಸರಿ ಉತ್ತರ ನೀಡಬೇಕಿರುವ ಪ್ರಶ್ನೆಯೊಂದರಲ್ಲಿ, Triennial (ಮೂರು ವರ್ಷಗಳಿಗೊಮ್ಮೆ) ಎಂಬುದನ್ನು, ಕನ್ನಡದಲ್ಲಿ ಅನುವಾದದಲ್ಲಿ ‘ತ್ರೈಮಾಸಿಕ’ ಎಂದು ಗೊಂದಲ ಮೂಡಿಸಲಾಗಿದೆ. ಮೂರು ವರ್ಷಕ್ಕೊಮ್ಮೆ ಅಥವಾ ತ್ರೈಮಾಸಿಕ ಎರಡೂ ಪದಗಳ ನಡುವಿನ ವ್ಯತ್ಯಾಸವೂ ಗೊತ್ತಿಲ್ಲದಷ್ಟು ದಡ್ಡರಿದ್ದಾರಾ..?
– ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತು ಪ್ರಮಾಣ ‘ದ್ವಿಗುಣಗೊಂಡಿದೆ’ (doubled) ಎಂದು ಬರೆಯುವ ಬದಲು, ‘ಎರಡರಷ್ಟಕ್ಕಿಂತ ಹೆಚ್ಚಾಗಿದೆ’ ಎಂದು ಮುದ್ರಿಸಿ ಗೊಂದಲ ಸೃಷ್ಟಿಸಲಾಗಿದೆ. ಈ ಮಹಾನುಭಾವನಿಗೆ ಕನ್ನಡ ಕಲಿಸಿದ್ದು ಯಾರು..?
– ಪ್ರಶ್ನೆಯೊಂದರಲ್ಲಿ, ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಕಾಯ್ದೆ ಜಾರಿಗೊಳಿಸಿದ ನಂತರ ಎರಡು ಬಾರಿ ಮಾತ್ರ ಸರ್ಕಾರ ಗುರಿಗಳನ್ನು ಸಾಧಿಸಿದೆ ಎಂದು ಬರೆಯುವ ಬದಲು, ‘ಎಂಆರ್‌ಬಿಎಂ ಅಧಿನಿಯಮದ ಅಧಿನಿಯಮಿತಿಯ ನಂತರ, ಸರ್ಕಾರವು ಇಂದಿನವರೆಗೆ ಎರಡು ಬಾರಿ ಮಾತ್ರ ಗುರಿಗಳನ್ನು ಸಾಧಿಸಲಾಗಿದೆ’ ಎಂದು ಮುದ್ರಿಸಲಾಗಿದೆ. ಅರ್ಥವಾದವರಿಗೆ ನೊಬೆಲ್ ಕೊಡಬಹುದು.
– ಪ್ರಶ್ನೆ ಪತ್ರಿಕೆಯ ಮುಖಪುಟದಲ್ಲಿ ಪ್ರಶ್ನೆಪುಸ್ತಕವನ್ನು ‘ಪ್ರಶ್ನೆಪುಸ್ತಿಕೆ’ ಎಂದು ಬರೆಯಲಾಗಿದೆ. ಮುಖಪುಟವೇ ಹಿಂಗಾದರೆ..
– ವಿವರಣಾತ್ಮಕ ಪ್ರಶ್ನೆಯೊಂದರಲ್ಲಿ ನಿರ್ದೇಶನವನ್ನು ‘ನಿರ್ದೇಷನ’ ಎಂದು ಬರೆಯಲಾಗಿದೆ. ಅಸಲಿಗೆ ಇಂಗ್ಲೀಷಿನಲ್ಲಿ Directions ಎಂದು ಇದೆ. ಅದಕ್ಕೆ ಕನ್ನಡದಲ್ಲಿ ಸೂಚನೆಗಳು ಎಂದು ಬರೆಯುವುದು ಅರ್ಥಪೂರ್ಣ ಎನಿಸುತ್ತಿತ್ತು. ಇನ್ನು ನಿರ್ದೇಶನದಲ್ಲಿ ಷ ಪದ ಬಳಕೆ ತಪ್ಪು.
– ಆರ್‌ಟಿಇ ಕಾಯ್ದೆಯ ತಿದ್ದುಪಡಿ ಬಳಿಕ, ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದರೆ ಖಾಸಗಿ ಶಾಲೆಗಳನ್ನು ‘ನೊರೆಹೊರೆಯ ಶಾಲೆಗಳು’ ಎಂದು ಪರಿಗಣಿಸುವುದನ್ನು ಕೈಬಿಡಲಾಗಿದೆ, ಎಂದು ಬರೆಯುವ ಬದಲು, ‘ಯಾವುದೇ ವಾರ್ಡಿನ ಮಿತಿಗಳೊಳಗೆ ಸರ್ಕಾರ ಅಥವಾ ಸರ್ಕಾರಿ ಅನುದಾನಿತ ಶಾಲೆಯಿದ್ದು ನೆರೆಹೊರೆಯ ಶಾಲೆಗಳು ಎಂಬುದಾಗಿ ಮಾನ್ಯತೆ ಪಡೆದುಕೊಳ್ಳುವ ಖಾಸಗಿ ಶಾಲೆಗಳನ್ನು ಸ್ಥಳಾಂತರಿಸಲು ಆರ್‌ಟಿಇ ಅಧಿನಿಯಮದ ತಿದ್ದುಪಡಿಯನ್ನು ಮಾಡಲಾಗಿದೆ’ ಎಂದು ಅಸಂಬದ್ಧವಾಗಿ ಬರೆಯಲಾಗಿದೆ. ಈ ನೊರೆ ಹೊರೆ ಶಾಲೆಗಳನ್ನು ಇಡೀ ಕರ್ನಾಟಕದಾದ್ಯಂತ ಹುಡುಕಬೇಕಿದೆ.
– ನದಿಗಳು, ಕಣಿವೆಗಳು, ನದಿ ಹರಿಯುವ ಮಾರ್ಗ, ಕಣಿವೆಗಳ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಹೊಂದಿಸಿ ಬರೆಯಿರಿ ಪ್ರಶ್ನೆಯೊಂದರ ಕನ್ನಡ ಅನುವಾದ ಅರ್ಥಪೂರ್ಣವಾಗಿಲ್ಲ. ಇಂಗ್ಲೀಷ್‌ನಲ್ಲಿ ಓದಿ ಅರ್ಥೈಸಿಕೊಳ್ಳಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಇದೇ ರೀತಿ ಇವೆ. ಎರಡೂ ಪ್ರಶ್ನೆ ಓದುವುದರಿಂದ ಅಭ್ಯರ್ಥಿಗಳ ಸಮಯ ವ್ಯರ್ಥವಾಗುತ್ತದೆ.
ಕೆಪಿಎಸ್‌ಸಿ ಎಡವಟ್ಟಿನ ವಿರುದ್ಧ ಧ್ವನಿ ಎತ್ತಿರುವ ಅಭ್ಯರ್ಥಿಗಳ ಜೊತೆಗೆ ವಿರೋಧ ಪಕ್ಷಗಳ ನಾಯಕರು, ಶಾಸಕರು, ಸಂಸದರು, ಗಣ್ಯರು, ಡಾ.ರಾಜ್‌ಕುಮಾರ್ ಅಕಾಡೆಮಿ ಸೇರಿದಂತೆ ವಿವಿಧ ಕೋಚಿಂಗ್ ಇನ್ಸ್‌ಟಿಟ್ಯೂಟ್‌ಗಳು ಹಾಗೂ ಹೋರಾಟಗಾರರು ಧ್ವನಿ ಎತ್ತಿದ್ದಾರೆ. ಪತ್ರಿಕೆಯಲ್ಲಿನ ಲೋಪಗಳನ್ನು ನಮ್ಮ ಗಮನಕ್ಕೆ ತರಲಾಗಿದ್ದು, ಪರೀಕ್ಷೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ, ಕಷ್ಟಪಟ್ಟು ಓದಿರುವ ಅಭ್ಯರ್ಥಿಗಳ ಧ್ವನಿಯನ್ನು ನಾವು ಗೌರವಿಸಬೇಕು ಎಂದು ಡಾ.ರಾಜ್‌ಕುಮಾರ್ ಅಕಾಡೆಮಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.



