KPSC, ರಾಜ್ಯದಲ್ಲಿ ಕಳ್ಳ ಮಳ್ಳರ ಆಟಕ್ಕೆ ಫೇಮಸ್ ಆಗಿದೆ. ಅವರು ಎಕ್ಸಾಂ ಕೊಟ್ಟಂಗೆ ಮಾಡ್ತಾರೆ, ಕೊಡಲ್ಲ. ಪರೀಕ್ಷೆ ಮಾಡಿದಂಗೆ ಮಾಡ್ತಾರೆ, ಮಾಡಲ್ಲ. ನೆಟ್ಟಗೆ ಒಂದು ಪ್ರಶ್ನೆ ಪತ್ರಿಕೆಯನ್ನೂ ಸಿದ್ಧ ಪಡಿಸೋಕೆ ಯೋಗ್ಯತೆ ಇಲ್ಲದವರು ತುಂಬಿಕೊಂಡಿರುವ KPSC ಮಾಡುತ್ತಿರುವ ಕಳ್ಳಾಟ ಮಳ್ಳಾಟಗಳು ಒಂದೆರಡಲ್ಲ. ಈಗಲೂ ಅಷ್ಟೇ, ಮಧ್ಯರಾತ್ರಿಗೆ ಹಾಲ್ ಟಿಕೆಟ್ ರಿಲೀಸ್ ಮಾಡಿ, ಬೆಳಗ್ಗೆ ಬಂದು ಎಕ್ಸಾಂ ಬರೀರಿ ಅನ್ನೋ ಬೃಹತ್ ನಾಟಕ ಆಡಿದೆ.
ಮೇ 2ರಂದು ಕೆಪಿಎಸ್ಸಿ ಕೊಟ್ಟ ಶಾಕ್. ಮೇ 3ರಂದು ನಡೆಯಲಿರುವ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ. ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಭಾಷಾಂತರದ ಗೊಂದಲದಿಂದ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯದೇ ಹೋಗಿದ್ದವರು. ಆಗ ಕೊನೆಗೂ ಇವರ ನೆರವಿಗೆ ಬಂದಿದ್ದ ಹೈಕೋರ್ಟ್, ಸುಮಾರು 120 ಅಭ್ಯರ್ಥಿಳಿಗೆ ಮುಖ್ಯ ಪರೀಕ್ಷೆ ಬರೆಯಲು ಅನುಮತಿ ನೀಡಿತ್ತು. ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದ ಕೆಪಿಎಸ್ಸಿ, ಈ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿ, ಮೇ 2ರಂದೇ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ನೀಡುವುದಾಗಿ ಇತ್ತೀಚೆಗೆ ಪ್ರಕಟಿಸಿತ್ತು.
ಅದರಂತೆ ಕಾದುಕೊಂಡಿದ್ದ ಅಭ್ಯರ್ಥಿಗಳಿಗೆ ಮೇ 2ರಂದು ಮಧ್ಯಾಹ್ನ 3ರೊಳಗೆ ಶುಲ್ಕ ಸಹಿತ ಅರ್ಜಿ ಸಲ್ಲಿಸುವಂತೆ ಸೂಚನೆ ಕೊಟ್ಟಿತ್ತು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಕಸ್ತೂರ್ ಬಾ ನಗರದಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮರುದಿನ 8 ಗಂಟೆಗೆ ಹೋಗಿ ಹಾಲ್ ಟಿಕೆಟ್ ಪಡೆದುಕೊಂಡು ಪರೀಕ್ಷೆ ಬರೆಯಬೇಕು ಎಂದು ಸೂಚಿಸಿದ್ದ ಕೆಪಿಎಸ್‌ಸಿ, ಮಧ್ಯರಾತ್ರಿಯಾದರೂ ಅರ್ಜಿ ಸ್ವೀಕಾರ ಮಾಡುತ್ತಲೇ ಇತ್ತು. ಆದರೆ, ಅಲ್ಲೇ ಇರೋದು ಟ್ವಿಸ್ಟು.
ಏಕೆಂದರೆ ಮಧ್ಯರಾತ್ರಿ 12 ಗಂಟೆಯವರೆಗೂ ಕಾದು ನಿಂತು ಅರ್ಜಿ ಸಲ್ಲಿಸಿದವರು, ಮರುದಿನ ಬೆಳಗ್ಗೆಯೇ ಬಂದು ಪರೀಕ್ಷೆ ಬರೆಯಬೇಕು ಎಂದರೆ ಹೇಗೆ..?
ಅಷ್ಟೇ ಅಲ್ಲ, ಬೆಂಗಳೂರಿನಲ್ಲಿರುವವರೇನೋ ಓಕೆ, ರಾಜ್ಯದ ಬೇರೆ ಬೇರೆ ಕಡೆಯಿಂದ ಅರ್ಧರಾತ್ರಿ ಬರುವುದು ಹೇಗೆ..? ಇನ್ನು ಅಪ್ಲಿಕೇಷನ್ ತುಂಬುವುದಕ್ಕೆ ಹಣ ಕಟ್ಟಬೇಕು. ಅದು ಡಿಡಿಯಲ್ಲೇ ಕಟ್ಟಬೇಕು. ಯಾವ ಬ್ಯಾಂಕ್ ಓಪನ್ ಇರುತ್ತದೆ.. ಒಟ್ಟಿನಲ್ಲಿ ಇವರು ಯಾರೂ ಪರೀಕ್ಷೆ ಬರೆಯಬಾರದು ಎಂಬ ಉದ್ದೇಶ ಇಟ್ಟುಕೊಂಡೇ ಈ ಅವಾಂತರ ಸೃಷ್ಟಿಸಲಾಗಿದೆ. ಬೆಳಗ್ಗೆಯಿಂದ ಟೈಮ್ ಇದ್ದರೂ, ಮಧ್ಯರಾತ್ರಿವರೆಗೆ ಕಾದು ʻಕಳ್ಳ ಮಳ್ಳʼ ಆಟ ಆಡಲಾಗಿದೆ ಎನ್ನುವುದು ಪರೀಕ್ಷೆ ತಪ್ಪಿಸಿಕೊಂಡವರ ಅಳಲು. ಹೈಕೋರ್ಟ್ ಕೊಟ್ಟರೂ ಅಧಿಕಾರಿಗಳು ಕೊಡಲ್ಲ, ಕೆಪಿಎಸ್‌ಸಿಯವರು ಬಿಡಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.