ಕೆಎನ್ ರಾಜಣ್ಣ ವಿಚಾರದಲ್ಲಿ ಎಲ್ಲರನ್ನೂ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಇದು. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ. ರಾಷ್ಟ್ರೀಯ ನಾಯಕ. ಆದರೆ.. ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ ಪ್ರಕರಣದಲ್ಲಿ ಖರ್ಗೆಯವರ ಹೆಸರೇ ಬರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರೂ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಷ್ಟೇ ಅಲ್ಲ, ಕರ್ನಾಟಕದ ಪ್ರಭಾವಿ ನಾಯಕ. ಆದರೆ.. ರಾಜಣ್ಣ ಡಿಸ್ ಮಿಸ್ ಆದೇಶ ಜಾರಿ ಮಾಡಿದ್ದು ಹಾಗೂ ಜಾರಿ ಮಾಡಿಸಿದ್ದು ಎಲ್ಲವೂ ರಾಹುಲ್ ಗಾಂಧಿಯವರೇ.
ಇನ್ನು ಈ ವಿಚಾರದಲ್ಲಿ ಸಿದ್ಧರಾಮಯ್ಯ ಅವರು ಸಿಎಂ ಆಗಿದ್ದರೂ.. ಅವರಿಗೆ ಯಾವ ಅಧಿಕಾರವೂ ಇರಲಿಲ್ಲ. ಸಂಪುಟದಿಂದ ವಜಾ ಮಾಡುವುದು ಬೇಡ, ಅದು ಅವಮಾನಕಾರಿ. ಕನಿಷ್ಠ ಗೌರವಯುತವಾಗಿ ರಾಜೀನಾಮೆ ಪಡೆದುಕೊಳ್ಳೋಣ ಎಂಬ ಸಿದ್ದು ಸಲಹೆಯನ್ನೂ ಕೇರ್ ಮಾಡಲಿಲ್ಲ. ಜಸ್ಟ್ ಡಿಸ್ ಮಿಸ್. ದಟ್ಸ್ ಆಲ್ ಎಂದು ಬಿಟ್ಟರು ರಾಹುಲ್ ಗಾಂಧಿ. ಇಲ್ಲಿ ಯಾವ ಹಂತದಲ್ಲಿಯೂ ಸಿದ್ಧರಾಮಯ್ಯ ಅವರಿಗೆ ಖರ್ಗೆಯವರ ಹೆಸರು ಕೂಡಾ ನೆನಪಾಗಲಿಲ್ಲವೇ ಎಂಬುದು ಪ್ರಶ್ನೆ. ರಾಹುಲ್ ಗಾಂಧಿಯವರ ಆದೇಶವನ್ನೆಲ್ಲ ಜಾರಿ ಮಾಡಿಸಿದ್ದು ವೇಣುಗೋಪಾಲ್ ಹಾಗೂ ಸುರ್ಜೇವಾಲ.
ಹಾಗಾದರೆ ಕಾಂಗ್ರೆಸ್ಸಿನಲ್ಲಿ ಖರ್ಗೆ ಕೇವಲ ಉತ್ಸವ ಮೂರ್ತಿಯಾ.. ಇದು ಕಾಂಗ್ರೆಸ್ಸಿಗರನ್ನೂ ಕಾಡುತ್ತಿರುವ ಪ್ರಶ್ನೆ. ಪ್ರಿಯಾಂಕ್ ಖರ್ಗೆಯವರೇನೋ ಸಮರ್ಥನೆ ಮಾಡಿಕೊಂಡಿದ್ದಾರೆ. ಹೈಕಮಾಂಡ್ ವಿರುದ್ಧ ಮಾತನಾಡಿದರೆ.. ಅಷ್ಟೇ. ಯಾರೂ ಉಳಿಯಲ್ಲ ಎಂದೂ ಹೇಳಿದ್ದಾರೆ. ಆದರೆ.. ಹೈಕಮಾಂಡ್ ಎಂದರೆ.. ಅವರ ತಂದೆಯೇ ಎನ್ನುವುದು ಪ್ರಿಯಾಂಕ್ ಖರ್ಗೆಯವರಿಗೆ ಗೊತ್ತಿದ್ದಂತೆ ಇಲ್ಲ.
ಗೊತ್ತಿಲ್ಲ ಮಂತ್ರಿಗಳೇ ಎಲ್ಲ..! ರಾಹುಲ್ ಗಾಂಧಿಯ ಆರ್ಭಟ ಹೇಗಿದೆ ಎಂದರೆ.. ಸಿದ್ಧರಾಮಯ್ಯ ಕೂಡಾ ಮಂಗಳವಾರ ಮಾಧ್ಯಮದವರನ್ನು ತಪ್ಪಿಸಿಕೊಂಡೇ ಓಡಾಡಿದ್ದಾರೆ. ಆಪ್ತರ ಜೊತೆ ನಾನೇನು ಹೆದರಲ್ಲ. ನಾನು ಸ್ಥಿತಪ್ರಜ್ಞ ಎಂದೆಲ್ಲ ಬಡಬಡಿಸಿದ್ದಾರೆ. ಆದರೆ.. ಸಿದ್ಧರಾಮಯ್ಯ ಅವರಿಗೂ ನೋವಾಗಿದೆ. ತಮ್ಮ ಪರಮಾಪ್ತನನ್ನೇ ಉಳಿಸಿಕೊಳ್ಳೋಕೆ ಆಗಲಿಲ್ಲ ಎಂಬ ಕೊರಗು ಅವರಲ್ಲಿಯೂ ಇದೆ.
ಇನ್ನು ಕೆಎನ್ ರಾಜಣ್ಣನವರ ಆಪ್ತ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ ಸೇರಿದಂತೆ ಬಹುತೇಕ ಸಚಿವರು ʻಗೊತ್ತಿಲ್ಲ. ನನಗೆ ಮಾಹಿತಿ ಇಲ್ಲʼ ಎಂದು ಹೇಳಿ ತಪ್ಪಿಸಿಕೊಳ್ತಿದ್ದಾರೆ.
ರಾಹುಲ್ ಗಾಂಧಿ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂಬುದು ಬಹಿರಂಗವಾದ ನಂತರದಿಂದ ಕಾಂಗ್ರೆಸ್ ನಾಯಕರು ರಾಜಣ್ಣ ವಿಚಾರವಾಗಿ ಅನಗತ್ಯ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕದಂತೆ ಎಚ್ಚರಿಕೆಯ ನಡೆಯನ್ನಿಡುತ್ತಿದ್ದಾರೆ. ಬಹುತೇಕ ಎಲ್ಲ ಸಚಿವರು ಮಂಗಳವಾರ ರಾಜಣ್ಣ ಅವರನ್ನು ವಜಾಗೆ ನಿಖರ ಕಾರಣ ತಿಳಿದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದಷ್ಟೇ ಹೇಳಿದ್ದಾರೆ. ರಾಜಣ್ಣ ಅವರ ಹೇಳಿಕೆಯನ್ನು ಸದಾ ಸಮರ್ಥಿಸುತ್ತಿದ್ದ ಸಿದ್ದು ಬಣದ ಸಚಿವರಿಗೆ ಈ ಬೆಳವಣಿಗೆ ತೀವ್ರ ಅಸಮಾಧಾನ ತಂದಿದೆ. ರಾಜಣ್ಣ ಅವರ ಹೇಳಿಕೆಯ ಪೇಪರ್ ಕಟಿಂಗ್ ಗಳನ್ನು ಹೈಕಮಾಂಡ್‌ಗೆ ಕಳುಹಿಸಿ ಪ್ರೊಪಗಾಂಡ ಮಾಡಲಾಗಿದೆ ಎಂಬ ಬೇಸರವೂ ಇದೆ. ಆದರೆ ಬಾಯಿ ಬಿಡುವ ಧೈರ್ಯವಿಲ್ಲ. ಖರ್ಗೆಯವರಿಗೆ ನೋವು ಹೇಳಿಕೊಳ್ಳೋಣ ಎಂದರೆ.. ಖರ್ಗೆಯವರ ಶಕ್ತಿ ಸಾಮರ್ಥ್ಯ ಏನು ಎನ್ನುವುದನ್ನು ರಾಹುಲ್ ಗಾಂಧಿ ತೋರಿಸಿದ್ದಾರೆ. ಹೇಳಿಕೊಂಡರೆ ಉಪಯೋಗವಿಲ್ಲ ಎನ್ನುವುದು ಬಹುತೇಕ ಕಾಂಗ್ರೆಸ್ಸಿಗರ ಮಾತು.



