ಮಿನಿಸ್ಟರ್ ಆಗಿದ್ದ ಕೆಎನ್ ರಾಜಣ್ಣ, ಈಗ ಮಾಜಿ ಸಚಿವ. ರಾಜಣ್ಣ ಅವರಿಗೆ ರಾಜೀನಾಮೆ ಕೊಡುವುದಕ್ಕೂ ಬಿಡದೆ, ವಜಾ ಮಾಡಲಾಗಿದೆ. ರಾಜಣ್ಣ ಅವರು ಕೊಟ್ಟಿದ್ದ ರಾಜೀನಾಮೆಯನ್ನೂ ಡಸ್ಟ್ ಬಿನ್ ಒಳಗೆ ಹಾಕಿ.. ಡಿಸ್ ಮಿಸ್ ಮಾಡಲಾಗಿದೆ. ಕೆಎನ್ ರಾಜಣ್ಣ ವಿವಾದಾತೀತ ಪುರುಷರೇನಲ್ಲ. ಬಿಜೆಪಿಯಲ್ಲಿ ಯತ್ನಾಳ್ ಇದ್ದಂತೆಯೇ.. ಕಾಂಗ್ರೆಸ್ಸಿನಲ್ಲಿ ರಾಜಣ್ಣ ಇದ್ದರು. ಆದರೆ.. ರಾಜಣ್ಣ ಬೆನ್ನ ಹಿಂದಿದ್ದವರು ಸಿದ್ಧರಾಮಯ್ಯ. ಹೀಗಾಗಿ.. ಕೆಎನ್ ರಾಜಣ್ಣ ಅವರಿಗೆ ಏನೂ ಆಗಲಿಕ್ಕಿಲ್ಲ ಎಂಬ ಭಾವನೆ ಇತ್ತು. ಆದರೆ.. ಹಾಗಾಗಿಲ್ಲ.
ಹೋರಾಟ ಮಾಡ್ತಿದ್ದವರು ರಾಹುಲ್ ಗಾಂಧಿ. ದೇಶಾದ್ಯಂತ ಹೋರಾಟ ನಡೆಸುತ್ತಿರುವಾಗ.. ಕನಿಷ್ಠ ಸೈಲೆಂಟ್ ಆಗಿದ್ದರೂ ಸಾಕಿತ್ತು. ಆದರೆ.. ರಾಜಣ್ಣ ಸುಮ್ಮನೆ ಇರಲಿಲ್ಲ. ವೋಟರ್ ಲಿಸ್ಟ್ ಯಾವ ಕಾಲದಲ್ಲಿ ಮಾಡಿದ್ದು? ನಮ್ಮದೇ ಸರ್ಕಾರ ಇರುವಾಗ ಮಾಡಿರೋದು ಅಲ್ವಾ? ಆವಾಗ ಎಲ್ಲಾ ಕಣ್ಮುಚ್ಚಿ ಕುಳಿತಿದ್ರಾ.. ಎಂಬ ಪ್ರಶ್ನೆ ಎತ್ತಿದ್ದರು. ಮತಪಟ್ಟಿ ಅಕ್ರಮಗಳು ನಡೆದಿರುವುದು ಸತ್ಯ. ಆದರೆ, ಆ ಅಕ್ರಮಗಳು ನಮ್ಮ ಕಣ್ಮುಂದೆನೆ ನಡೆದಿದ್ದಲ್ಲ. ನಮಗೆ ಅವಮಾನ ಆಗಬೇಕು. ನಾವು ನೋಡಿಕೊಳ್ಳಲಿಲ್ಲವಲ್ಲ ಎಂದಿದ್ದ ಮಾತು.. ರಾಹುಲ್ ಗಾಂಧಿಯವರ ಕಪಾಳಕ್ಕೆ ಹೊಡೆದಂತಿತ್ತು.
ರಾಜಣ್ಣ ಅವರ ಈ ಹೇಳಿಕೆ ರಾಹುಲ್ ಗಾಂಧಿ ಗಮನಕ್ಕೆ ಬಂದಿದ್ದು ತಡವಾಗಿ. ಹೀಗಾಗಿ.. ಶುಕ್ರವಾರ ಪ್ರತಿಭಟನೆ ನಡೆದು, ಮಾರನೇ ದಿನ ಹೇಳಿಕೆ ಕೊಟ್ಟಿದ್ದರೂ.. ಸೋಮವಾರ ವಜಾ ಆಗಿದ್ದಾರೆ. ನೇರವಾಗಿ ಸುರ್ಜೇವಾಲ ಅವರ ಮೂಲಕ ಸಂದೇಶ ಕಳಿಸಿದ್ದ ರಾಹುಲ್ ಗಾಂದಿ ಕೆಎನ್ ರಾಜಣ್ಣ ಅವರನ್ನು ಡಿಸ್ ಮಿಸ್ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ.
ಸ್ವತಃ ಸಿದ್ಧರಾಮಯ್ಯ ʻʻಈಗ ಅಧಿವೇಶನ ನಡೆಯುತ್ತಿದೆ, ಬಿಟ್ಟು ಬಿಡೋಣ. ಸದ್ಯಕ್ಕೆ ಬೇಡʼʼ ಎಂಬ ಮಾತಿಗೂ ಬಗ್ಗಿಲ್ಲ. ರಾಹುಲ್ ಗಾಂಧಿ ಹಠ ಹಿಡಿದಿದ್ದಾರೆ. ʻʻವಜಾ ಬೇಡ. ರಾಜೀನಾಮೆ ಕೇಳಿ ಪಡೆದುಕೊಳ್ಳೋಣʼʼ ಎಂದಾಗಲೂ ಜಗ್ಗಿಲ್ಲ. ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಅಂಗೀಕರಿಸುತ್ತೇನೆ ಎನ್ನುವ ಮಾತಿಗೂ ಕರಗಿಲ್ಲ. ಡಿಸ್ ಮಿಸ್ ಎಂದು ಹಠ ಹಿಡಿದಿದ್ದಾರೆ. ಕನಿಷ್ಠ ಸಿದ್ಧರಾಮಯ್ಯ ಜೊತೆಯಲ್ಲೂ ಮಾತನಾಡಿಲ್ಲ. ನೇರವಾಗಿ ಸುರ್ಜೇವಾಲ ಮೂಲಕ ಮಾತನಾಡಿಸಿದ್ದಾರೆ.
ಕೊನೆಗೆ ರಾಜೀನಾಮೆ ಪತ್ರ ನೀಡಿದ್ದರೂ.. ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಿಗೆ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಶಿಫಾರಸು ಮಾಡಿ ಪತ್ರ ಬರೆಯುವಂತಾಗಿದೆ. ಸಿಎಂ ಸಿದ್ದರಾಮಯ್ಯ ಪತ್ರದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಸೂಚನೆ ಹೊರಡಿಸಿ, ಕೆ.ಎನ್.ರಾಜಣ್ಣರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದಾರೆ.
ಆದರೆ.. ಈ ಬೆಳವಣಿಗೆ ಸಿದ್ಧರಾಮಯ್ಯ ಅವರಿಗೆ ದೊಡ್ಡ ಹಿನ್ನಡೆ ಎನ್ನುವುದಂತೂ ಸತ್ಯ. ಯಾವ ಹಂತದಲ್ಲೂ ಸಿದ್ಧರಾಮಯ್ಯ ಕೈಮೇಲಾಗಲು ಬಿಟ್ಟಿಲ್ಲ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸುರ್ಜೇವಾಲ ಅವರ ವಿರುದ್ಧ ನೇರವಾಗಿ ಸವಾಲು ಹಾಕಿದ್ದ ರಾಜಣ್ಣ, ಈ ಬಾರಿ ರಾಹುಲ್ ಗಾಂಧಿ ಹೋರಾಟವನ್ನೇ ಪ್ರಶ್ನೆ ಮಾಡಿ ಹೊರದಬ್ಬಿಸಿಕೊಂಡಿದ್ದಾರೆ. ಅವಮಾನ ಆಗಿರುವುದು ಕೆಎನ್ ರಾಜಣ್ಣ ಅವರಿಗೆ. ಆದರೆ.. ಪೆಟ್ಟು ಬಿದ್ದಿರುವುದು ಸಿದ್ಧರಾಮಯ್ಯ ಅವರಿಗೆ.
ಏಕೆಂದರೆ ಸಿದ್ಧರಾಮಯ್ಯ ಬಣದ ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಎಂಎಲ್ಸಿ ರಾಜೇಂದ್ರ ಸಾಥ್, ಪರಮೇಶ್ವರ್ ಅವರ ಮಾತೂ ನಡೆದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ I am helpless. ನಾನು ಹೈಕಮಾಂಡ್ ಆದೇಶವನ್ನು ಪಾಲಿಸಿದ್ದೇನೆ ಎಂದಿದ್ದಾರೆ ಸಿದ್ಧರಾಮಯ್ಯ. ಹೌದು, ಸಿದ್ಧರಾಮಯ್ಯ, ಈ ಬಾರಿ ಮೊದಲಿನ ಅವಧಿಯಷ್ಟು ಪವರ್ ಫುಲ್ ಅಲ್ಲ.



