ನಂದಿನಿ (Nandini Milk) ಹಾಲಿನ ದರವನ್ನು 5 ರೂ.ಗೆ ಹೆಚ್ಚಿಸುವ ಪ್ರಸ್ತಾಪ ಕುರಿತಂತೆ ಇದು ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ (CM Siddaramaiah) ನಿರ್ಧಾರ ತೆಗೆದುಕೊಳ್ಳಲಿದ್ದಾರೆ. (Nandini Milk) ಹಾಲಿನ ದರವನ್ನು ಲೀಟರಿಗೆ 5 ರು.ನಷ್ಟುಹೆಚ್ಚಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಹಾಲು ಒಕ್ಕೂಟಗಳು ಮತ್ತು ಕೆಎಂಎಫ್ ಪದಾಧಿಕಾರಿಗಳ (KMF) ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ ಸಂಜೆ 6ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಿದ್ದಾರೆ.
ಜುಲೈ 11ರಂದೇ ಕೆಎಂಎಫ್ (KMF) ಪದಾಧಿಕಾರಿಗಳು ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಹಾಲಿನ ದರ ಏರಿಕೆ ಕುರಿತು ಚರ್ಚಿಸಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಸಭೆಯನ್ನು ಮುಂದೂಡಲಾಗಿತ್ತು. ಇದೀಗ ಮುಖ್ಯಮಂತ್ರಿಯವರು ಈ ಕುರಿತು ಚರ್ಚಿಸಲು ಸಮಯ ಕೊಟ್ಟಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸಭೆ ನಡೆಯಲಿದೆ. ಜೊತೆಗೆ ಹಾಲಿನ ದರ ಹೆಚ್ಚಳದ ಬಗ್ಗೆಯೂ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೈನು ರಾಸುಗಳ ನಿರ್ವಹಣಾ ವೆಚ್ಚದಲ್ಲಿ ನಿರಂತರ ಏರಿಕೆ ಆಗುತ್ತಿದೆ. ಮೆಕ್ಕೆಜೋಳ, ಅಕ್ಕಿತೌಡು, ಖನಿಜ ಪದಾರ್ಥಗಳ ಬೆಲೆ ಹೆಚ್ಚಳ, ಹತ್ತಿಕಾಳು ಹಿಂಡಿ ಸೇರಿದಂತೆ ಇತರೆ ಪಶು ಅಹಾರದಲ್ಲಿ ಶೇ.30ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ವಿದ್ಯುತ್ ದರ ಹೆಚ್ಚಳ, ಪ್ರತಿ ಕೆಜಿ ಪಶು ಆಹಾರ ಉತ್ಪಾದನೆಯ ವೆಚ್ಚ ಎರಡು ವರ್ಷದ ಹಿಂದೆ 18 ರು. ಇತ್ತು. ಈಗ 25 ರು.ಗಳಿಗೆ ತಲುಪಿದೆ. ಹೀಗಾಗಿ ಪ್ರತಿ ಲೀಟರ ಹಾಲಿನ ಬೆಲೆಯನ್ನು ತಲಾ 5 ರು.ಹೆಚ್ಚಳ ಮಾಡಬೇಕು ಎಂದು ಸಭೆಯಲ್ಲಿ ಹಾಲು ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಸಿದ್ದರಾಮಯ್ಯ 2 ರಿಂದ 3 ರೂ. ಹೆಚ್ಚಳಕ್ಕೆ ಸಮ್ಮತಿ ನೀಡಲಿದ್ದಾರೆ ಎನ್ನುವುದು ವಿಧಾನಸೌಧ ಮೂಲಗಳ ಮಾಹಿತಿ. ಆದರೆ ಇನ್ನೂ ಸ್ವಲ್ಪ ದಿನ ತಡೆಯೋಣ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇಂದು ಸಂಜೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.



