2024ರ ಆರಂಭದಲ್ಲಿ ವರ್ಷವಿಡೀ ಕುಂಟುತ್ತಾ.. ಕುಯ್ಯೋ ಮರ್ರೋ ಎನ್ನುತ್ತಾ ಹೋಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಒಂದು ಅರ್ಥದಲ್ಲಿ ಬೂಸ್ಟ್ ಕೊಟ್ಟಿದ್ದು ದುನಿಯಾ ವಿಜಯ್ ಅವರ ಭೀಮ. ಮತ್ತು ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ. ಅದಾದ ಮೇಲೆ ಶ್ರೀಮುರಳಿಯ ಬಘೀರ, ಶಿವಣ್ಣ ಅಭಿನಯದ ಭೈರತಿ ರಣಗಲ್ ಹಿಟ್ ಆದವು. ಅದು ಮುಗಿಯುವ ಹೊತ್ತಿಗೆ ಉಪೇಂದ್ರರ ಯುಐ, ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಬಂದವು. ಒಂದು ರೀತಿಯಲ್ಲಿ 2024ರ ಅಂತ್ಯಕ್ಕೆ ಬಂಪರ್ ಸಿಕ್ಕಿದಂತಾಯ್ತು.
ಇದೀಗ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. ವಿಜಯ್ ಕಾರ್ತಿಕೇಯ ನಿರ್ದೇಶನ ಮತ್ತು ಕಲೈಪುಲಿ ಎಸ್ ಥಾನು ನಿರ್ಮಾಣದ ಮ್ಯಾಕ್ಸ್ ಚಿತ್ರ , ವರ್ಷದ ಆರಂಭದಲ್ಲೇ ಖುಷಿ ಕೊಟ್ಟಿದೆ. ಪ್ಯಾನ್ ಇಂಡಿಯಾ ಮೂವಿ, 100 ಕೋಟಿ ಕ್ಲಬ್ ಸೇರಿದೆ. ಕರ್ನಾಟಕದಲ್ಲಿಯೇ ೫೦ ಕೋಟಿ ಬಾರ್ಡರ್ ದಾಟಿರುವ ಮ್ಯಾಕ್ಸ್, 2024ರ ಸೂಪರ್ ಡ್ಯೂಪರ್ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ.
ಕನ್ನಡದ ಜೊತೆ ತೆಲುಗು, ತಮಿಳಿನಲ್ಲೂ ಬಿಗ್ ಓಪನಿಂಗ್ ಆಗಿದೆ. ಮತ್ತು ಜನವರಿ 1ರಿಂದ ಮಲಯಾಳಂನಲ್ಲೂ ಮ್ಯಾಕ್ಸ್ ರಿಲೀಸ್ ಆಗಿದೆ.ವಿದೇಶಗಳಲ್ಲೂ ಮ್ಯಾಕ್ಸ್ ಮ್ಯಾಕ್ಸಿಮಮ್ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾ ಚೆನ್ನಾಗಿದ್ದ ಹಿನ್ನೆಲೆ ಥಿಯೇಟರ್ಸ್ ಹೆಚ್ಚಿಸಲಾಗಿತ್ತು.
ಚಿತ್ರದ ಬಗ್ಗೆ ಎಲ್ಲ ಕಡೆ ಪಾಸಿಟಿವ್ ರಿಪೋರ್ಟ್ ಬಂದಿದ್ದು ಕೂಡಾ ಚಿತ್ರಕ್ಕೆ ಸಹಕಾರಿಯಾಯ್ತು. ಕರ್ನಾಟಕದಲ್ಲಿ ಸಾಲು ಸಾಲು ರಜೆಗಳ ಲಾಭವೂ ಸಿಕ್ಕಿತು. ಅಲ್ಲದೆ ಇದೀಗ ತಮಿಳುನಾಡಿನಲ್ಲಿ ಚಿತ್ರ ನಿಧಾನಕ್ಕೆ ಟೇಕ್ ಆಫ್ ಆಗುತ್ತಿದೆ. ಈ ಬಾರಿಯ ಪೊಂಗಲ್ʻಗೆ ತಮಿಳಿನಲ್ಲಿ ಸಿನಿಮಾಗಳಿಲ್ಲ. ತೆಲುಗಿನಲ್ಲಿ ನಿರ್ಮಾಣವಾಗಿರುವ ರಾಮ್ ಚರಣ್-ಶಂಕರ್ ಕಾಂಬಿನೇಷನ್ನಿನ ಗೇಮ್ ಚೇಂಜರ್ ಬಿಟ್ಟರೆ ಬೇರೆ ಸಿನಿಮಾಗಳಿಲ್ಲ. ಇದು ಕೂಡಾ ಸುದೀಪ್ ಅವರಿಗೆ ವರವಾಗಬಹುದು. ಒಟ್ಟಿನಲ್ಲಿ ಸುದೀಪ್ ಮುಖದಲ್ಲಿ ನಗು ಅರಳಿದೆ.
ಗಳಿಕೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತನಾಡಲು ಸುದೀಪ್ ಕೂಡ ನಿರಕಾರಿಸಿದ್ದಾರೆ. ಅದು ತುಂಬಾನೇ ವೈಯಕ್ತಿಕ ವಿಚಾರ ಎಂದಿರೋ ಅವರು, ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ ಎಂದಷ್ಟೇ ಹೇಳಿದ್ದಾರೆ. ‘ಮ್ಯಾಕ್ಸ್’ ರಿಲೀಸ್ ವಿಳಂಬ ಆಗುತ್ತಲೇ ಬಂದಿತ್ತು. ಈ ಸಿನಿಮಾ ಲೇಟ್ ಆಗಿ ರಿಲೀಸ್ ಆದರೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್ಜಿ ಸ್ಟುಡಿಯೋಸ್’ನ ಕಾರ್ತಿಕ್ ಗೌಡ . ‘2024ರ ಕೊನೆಯಲ್ಲಿ ಇದ್ದೇವೆ. ಈ ವರ್ಷ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಮ್ಯಾಕ್ಸ್’ ಎಂದು ಅವರು ಬರೆದುಕೊಂಡು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಯಶಸ್ಸಿಗೆ ಕಾರಣವಾದ ಕೆಆರ್ಜಿ ಸ್ಟುಡಿಯೋ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಚಿತ್ರದ ಮುಖ್ಯ ಸ್ಥಂಭ. ಅವರಿಗೆ ಕಾರ್ತಿಕ್ ಅವರು ಧನ್ಯವಾದ ಹೇಳೋದನ್ನು ಮರೆತಿಲ್ಲ. 2024ರ ಆರಂಭದಲ್ಲಿ ‘ಹನುಮಾನ್’ ಚಿತ್ರವನ್ನು ಕೆಆರ್ಜಿ ಸ್ಟುಡಿಯೋಸ್ ಹಂಚಿಕೆ ಮಾಡಿತ್ತು. ಇದು ಕೆಆರ್ಜಿ ಕೈ ಸೇರಿದ್ದು ಸುದೀಪ್ ಅವರಿಂದಲೇ ಅಂತೆ. ಈ ಕಾರಣಕ್ಕೆ ಅವರಿಗೆ ವಿಶೇಷ ಥ್ಯಾಂಕ್ಸ್ ಹೇಳಿದ್ದಾರೆ.



