ಒಬ್ಬ ಹೀರೋನ ಒಂದೆರಡು ಸಿನಿಮಾ ಸೋತರೆ, ಆ ಹೀರೋನ ಮಾರ್ಕೆಟ್ ಬೀಳುತ್ತೆ. ಆದರೆ ಕೆಲವರಿರುತ್ತಾರೆ. ಸೋಲು ಮತ್ತು ಗೆಲುವು ಎರಡನ್ನೂ ಮೀರಿ ಬೆಳೆದಿರುತ್ತಾರೆ. ಹಿಂದಿಯಲ್ಲಿ ನೋಡಿದರೆ ಅಮಿತಾಭ್ ಬಚ್ಚನ್. ಆರಂಭದ ಚಿತ್ರಗಳು ಮಕಾಡೆ ಮಲಗಿದ್ದವು. ಆದರೆ.. ಟೈಂ.. ನೋಡಿ. ಬಚ್ಚನ್ ಅವರನ್ನು ಮೀರಿಸುವ ಇನ್ನೊಬ್ಬ ಸೂಪರ್ ಸ್ಟಾರ್ ಇನ್ನೂ ಬಾಲಿವುಡ್ಡಿಗೆ ಸಿಕ್ಕಿಲ್ಲ. ಅಕ್ಷಯ್ ಕುಮಾರ್ ಅವರ ಸತತ 15 ಸಿನಿಮಾಗಳು ಫ್ಲಾಪ್ ಆಗಿದ್ದವು. ಇಂಡಸ್ಟ್ರಿಯನ್ನೇ ಬಿಡೋಕೆ ಹೊರಟಿದ್ದ ಅಕ್ಷಯ್ ಕುಮಾರ್, ಬಾಲಿವುಡ್ʻನಲ್ಲಿ ಅತೀ ಹೆಚ್ಚು 100 ಕೋಟಿಗಿಂತ ಹೆಚ್ಚು ಚಿತ್ರಗಳ ಹೀರೋ. ಧಾರಾವಾಹಿಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಶಾರೂಕ್ ಖಾನ್ ಅವರನ್ನ, ಈಗ ಬಾಲಿವುಡ್ಡಿನಲ್ಲಿ ಕಿಂಗ್ ಖಾನ್ ಎಂದೇ ಕರೆಯುತ್ತಾರೆ. ಹಣೆಬರಹ..
ಅಂತಾದ್ದೇ ಒಂದು ಕೆಟ್ಟ ಹಣೆಬರಹದೊಂದಿಗೆ ಜರ್ನಿ ಶುರು ಮಾಡಿದ್ದವರು ಸುದೀಪ್. ಮೊದಮೊದಲ ಚಿತ್ರ ಶೂಟಿಂಗೇ ಮುಗೀಲಿಲ್ಲ. ಎರಡನೇ ಚಿತ್ರ ಒಂದು ವಾರವೂ ಓಡಲಿಲ್ಲ. 3ನೇ ಚಿತ್ರಕ್ಕೇ ಪೋಷಕ ನಟರಾಗಿ ನಟಿಸಿದ್ದ ಸುದೀಪ್, ಈಗ ಕನ್ನಡಿಗರ ಪಾಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದೇ ಫೇಮಸ್ ಆಗಿದ್ಧಾರೆ.
ಜನವರಿ 31. ಈ ದಿನವನ್ನು ಸುದೀಪ್ ಮರೆಯೋ ಹಾಗೇ ಇಲ್ಲ. ಗಾಂಧಿನಗರದಲ್ಲಿ ಅವಕಾಶಗಳಿಗೆ ಸುತ್ತಾಡುತ್ತಿದ್ದ ಹುಡುಗ, ಬ್ರಹ್ಮ ಅನ್ನೋ ಚಿತ್ರಕ್ಕೆ ಆಯ್ಕೆಯಾಗಿ ಬಣ್ಣ ಹಚ್ಚಿದ್ದು ಅದೇ ದಿನ. ಬ್ರಹ್ಮ ಚಿತ್ರಕ್ಕೆ ಅಂಬರೀಷ್ ಹೀರೋ. ಆದರೆ ಆ ಚಿತ್ರ ಸೆಟ್ಟೇರಿತಷ್ಟೇ, ಶೂಟಿಂಗ್ ಕೂಡಾ ಕಂಪ್ಲೀಟ್ ಆಗಲಿಲ್ಲ. ಅದಾದ ಮೇಲೆ ಬಂದಿದ್ದು ತಾಯವ್ವ. ಬಂದಷ್ಟೇ ವೇಗವಾಗಿ ಹೋದ ಸಿನಿಮಾ. ಅದು ಮುಗಿದ ಮೇಲೆ ಬಂದ ಸುನಿಲ್ ಕುಮಾರ್ ದೇಸಾಯಿಯವರ ಪ್ರತ್ಯರ್ಥದಲ್ಲಿ ಪೋಷಕ ನಟರಾಗಿ ಮಿಂಚಿದ ಸುದೀಪ್, ಆ ನಂತರ ತಮ್ಮದೇ ಬ್ಯಾನರಿನ ಸ್ಪರ್ಶ ಮೂಲಕ ಹೀರೋ ಆದರು. ಚೆಂದಕಿಂತ ಚೆಂದ ಎನ್ನುವಂತಿದ್ದ ಹುಡುಗ ಸ್ಟಾರ್ ನಟನಾಗಿದ್ದು ಹುಚ್ಚ ಚಿತ್ರದಿಂದ. ಅಂದಿನಿಂದ ಇಂದಿನವರೆಗೆ ಹುಚ್ಚ ಚಿತ್ರದ ಕ್ಯಾರೆಕ್ಟರ್ ಹೆಸರಿನೊಂದಿಗೇ ಬದುಕುತ್ತಿರುವ ಕಿಚ್ಚ, ಇಷ್ಟು ವರ್ಷಗಳಲ್ಲಿ ಸಂಪಾದಿಸಿದ್ದು ಅಭಿಮಾನಗಳ ಸೈನ್ಯವನ್ನೇ.
ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲೂ ಛಾಪು ಮೂಡಿಸಿರುವ ನಟ ಸುದೀಪ್. ಕನ್ನಡದಲ್ಲಿ ಹೇಗೆ ಎಲ್ಲ ಕಲಾವಿದರ ಜೊತೆಯಲ್ಲೂ ಪ್ರೀತಿ ಸ್ನೇಹ ಹೊಂದಿದ್ದಾರೋ.. ಹಾಗೆಯೇ ಪರಭಾಷೆಯಲ್ಲೂ ದೊಡ್ಡ ಗೆಳೆಯರ ಬಳಗವನ್ನೇ ಕಟ್ಟಿಕೊಂಡಿದ್ದಾರೆ ಸುದೀಪ್. ಇದೇ ಹಿನ್ನೆಲೆಯಲ್ಲಿ ತಮ್ಮ ಸಿನಿಮಾ ಜರ್ನಿಗೆ 28 ವರ್ಷ ತುಂಬಿದ್ದರ ಸಂಭ್ರಮವನ್ನು ಪುಟ್ಟ ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಯಾರು ನೆನಪಲ್ಲಿಟ್ಟುಕೊಂಡಿರ್ತಾರೋ.. ಆದರೆ ಸುದೀಪ್ ಮಾತ್ರ ತಮ್ಮ ಸಿನಿಮಾ ಜರ್ನಿಗೆ ಎಷ್ಟು ವಯಸ್ಸಾಯ್ತು ಅನ್ನೋದನ್ನು ಪ್ರತೀ ವರ್ಷ ಅಭಿಮಾನದಿಂದ ನೆನಪಿಟ್ಟುಕೊಂಡು ಹೇಳಿಕೊಳ್ತಾರೆ.
ನಾನು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರೊಂದಿಗೆ ಬ್ರಹ್ಮ ಚಿತ್ರದ ಶೂಟಿಂಗ್ ಆರಂಭಿಸಿದೆ. ಕೆಲವೇ ವರ್ಷಗಳ ಹಿಂದೆ ಇದು ನಡೆದಿದೆ ಎಂಬ ಭಾವನೆ. ಆದರೆ, ಈಗಾಗಲೇ ಇದಕ್ಕೆ 28 ವರ್ಷಗಳು ತುಂಬಿವೆ. ಎಲ್ಲರಿಗೂ ಧನ್ಯವಾದ.
ಮನರಂಜನಾ ಕ್ಷೇತ್ರದಲ್ಲಿ 28 ವರ್ಷಗಳು ನನ್ನ ಜೀವನದ ಅತ್ಯಂತ ಸುಂದರ ಭಾಗವಾಗಿದೆ. ಈ ಸಾಟಿಯಿಲ್ಲದ ಉಡುಗೊರೆಗಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಪೋಷಕರು, ಕುಟುಂಬ, ತಂತ್ರಜ್ಞರು, ನಿರ್ಮಾಪಕರು, ಬರಹಗಾರರು, ನನ್ನ ಸಹ-ನಟರು, ಮಾಧ್ಯಮ, ಮನರಂಜನಾ ಚಾನೆಲ್‌ಗಳು, ವಿತರಕರು, ಪ್ರದರ್ಶಕರು ಹಾಗೂ ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು.
ನಾನು ಜೀವನದಲ್ಲಿ ಗಳಿಸಿದ ಅತ್ಯಂತ ಅಮೂಲ್ಯ ಸಂಪಾದನೆ ಎಂದರೆ ಅದು ಅಭಿಮಾನಿಗಳು. ಅವರಿಗೂ ಧನ್ಯವಾದ. ಇದು ಏಳುಬೀಳಿನ ಪ್ರಯಾಣ. ನಾನು ಪ್ರತಿ ಕ್ಷಣವನ್ನು ಆನಂದಿಸಿದೆ. ನಾನು ತಪ್ಪೇ ಮಾಡದ ವ್ಯಕ್ತಿಯೇನೂ ಅಲ್ಲ. ಪರಿಪೂರ್ಣನಂತೂ ಖಂಡಿತಾ ಅಲ್ಲ, ನಾನು ನನ್ನ ಕೈಲಾದಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಅವಕಾಶಗಳು ಬಂದಾಗ ನನ್ನ ಶಕ್ತಿ ಮೀರಿ ಕೈಲಾಗಿದ್ದನ್ನು ನೀಡಿದ್ದೇನೆ. ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ ಸುದೀಪ್.



