ಕಿಚ್ಚ ಸುದೀಪ್ ಹಚ್ಚಿದ ಕಿಚ್ಚು ನಂ.1 : ಮ್ಯಾಕ್ಸ್ ಟೈಟಲ್ ಟೀಸರ್
ಕಿಚ್ಚ ಸುದೀಪ್ ಹಚ್ಚಿದ ಕಿಚ್ಚು ನಂ.2 : ಆರ್.ಚಂದ್ರು ನಿರ್ದೇಶನದ, ವಿಜಯೇಂದ್ರ ಪ್ರಸಾದ್ ಕಥೆ-ಚಿತ್ರಕಥೆಯ ನಿರ್ದೇಶನದಲ್ಲಿ ಆಕ್ಟಿಂಗ್
ಕಿಚ್ಚ ಸುದೀಪ್ ಹಚ್ಚಿದ ಕಿಚ್ಚು ನಂ.3 : ಹೆಚ್ಚೂ ಕಡಿಮೆ 10 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕಿಳಿಯುತ್ತಿರೋದು.
ಸುದೀಪ್ ಇದ್ದಕ್ಕಿದ್ದಂತೆ ಬ್ಯುಸಿಯಾಗಿಬಿಟ್ಟಿದ್ದಾರೆ. ಒಂದರ ಹಿಂದೊಂದು ಸಿನಿಮಾ.. ಒಂದರ ಹಿಂದೊಂದು ಸಿನಿಮಾ.. ಒಂದರ ಹಿಂದೊಂದು ಸಿನಿಮಾ.. ನಡುವೆ ಎಂದಿನಂತೆ ಕ್ರಿಕೆಟ್ಟು, ಟಿವಿ, ಓಡಾಟಗಳಿದ್ದೇ ಇರುತ್ವೆ.
ಮ್ಯಾಕ್ಸ್ ಟೈಟಲ್ ಟೀಸರ್ ಸ್ಟೋರಿ : ಬರುವವರೆಲ್ಲಾ ಜ್ವಾಲಾಮುಖಿಯಿಂದ ತಪ್ಪಿಸಿಕೊಳ್ಳಬಹುದು, ಭೂಕಂಪದಿಂದ ತಪ್ಪಿಸಿಕೊಳ್ಳಬಹುದು, ಚಂಡಮಾರುತದಿಂದಲೂ ತಪ್ಪಿಸಿಕೊಳ್ಳಬಹುದು, ಸುನಾಮಿಯಿಂದ ಕೂಡ ತಪ್ಪಿಸಿಕೊಳ್ಳಬಹುದು. ಆದರೆ, ಇವನ ಹತ್ತಿರ ತಗಲಾಕಿಕೊಂಡರೆ, ಸಾವೇ ಇಲ್ಲ ಅಂತ ವರ ತಗೊಂಡು ಹುಟ್ಟಿದವನೂ ಕೂಡ ಸತ್ತ.. ಕೆ46 (Kichcha 46) ಟೈಟಲ್ ಟೀಸರ್ ಮ್ಯಾಕ್ಸ್`ನಲ್ಲಿ ಬರೋ ಡೈಲಾಗ್ ಇದು. ಮ್ಯಾಕ್ಸ್.. ಇದೇ ಟೈಟಲ್. ಈ ಡೈಲಾಗ್ ಹೇಳೋದು ಪೊಲೀಸರು. ಪೊಲೀಸರು ಹೇಳುತ್ತಿದ್ದಂತೆಯೇ ಮ್ಯಾಕ್ಸ್ ಬರ್ತಾನೆ. ಆದರೆ, ಬರ್ತಾನೆ ಅಷ್ಟೆ. ತೋರಿಸಲ್ಲ. ಸುದೀಪ್ ಪಾತ್ರ ಹೇಗಿದೆ ಅನ್ನೋ ಲುಕ್ ರಿವೀಲ್ ಆಗಲ್ಲ. ಹಳೆಯ ಟೀಸರ್ ನೆನಪಿಸಿಕೊಂಡೇ ಫ್ಯಾನ್ಸ್ ಖುಷಿ ಪಡ್ಬೇಕು. ಆದರೂ ಟೈಟಲ್, ಡೈಲಾಗ್ ಹಾಗೂ ಮ್ಯೂಸಿಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕಿಚ್ಚ ಸುದೀಪ್ ಅವರ ಜನ್ಮದಿನದ ಪ್ರಯುಕ್ತ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ‘ಮ್ಯಾಕ್ಸ್’ ಟೈಟಲ್ ಟೀಸರ್ ರನ್ನು (Max tittle teaser) ಬಿಡುಗಡೆ ಮಾಡಲಾಗಿದೆ. ಆ ಮೂಲಕ ಕಿಚ್ಚನ ಅಭಿಮಾನಿಗಳಿಗೆ ‘ಮ್ಯಾಕ್ಸ್’ ಚಿತ್ರತಂಡ ಬಂಪರ್ ಗಿಫ್ಟ್ ಅನ್ನೇ ನೀಡಿದೆ. ಇದೀಗ ಆ ನಿರೀಕ್ಷೆ ಡಬಲ್ ಮಾಡುವಂತಿದೆ ಮ್ಯಾಕ್ಸ್ (Max) ಟೈಟಲ್ ಟೀಸರ್.
ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ಧಾನು ನಿರ್ಮಾಣದ ಸಿನಿಮಾ ಮ್ಯಾಕ್ಸ್. ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳಿದ್ದಾರೆ. ಮ್ಯಾಕ್ಸ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಟೈಟಲ್ ಟೀಸರ್ ಸಹ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಮಹಾಬಲಿಪುರಂನಲ್ಲಿ ಅದ್ಧೂರಿ ಸೆಟ್ ಹಾಕಿದ್ದು, ಶೂಟಿಂಗ್ ನಡೆಯುತ್ತಿದೆ.
10 ವರ್ಷಗಳ ನಂತರ ಮತ್ತೆ ಡೈರೆಕ್ಟರ್ : ತಮ್ಮ 50ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೂ ಸರ್‍ಪ್ರೈಸ್ ಕೊಟ್ಟಿರುವ ಸುದೀಪ್, ಕೆಕೆ ಚಿತ್ರದ ಮೂಲಕ ಮತ್ತೆ ಡೈರೆಕ್ಟರ್ (Director sudeep)ಆಗುತ್ತಿದ್ದಾರೆ. ಈ ಚಿತ್ರಕ್ಕೆ ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಬಂಡವಾಳ ಹೂಡಲಿದ್ದಾರೆ.
ಕೆಕೆ ಚಿತ್ರದ ಪೋಸ್ಟರ್ ನೋಡುತ್ತಿದ್ದರೆ ಇದೊಂದು ಕ್ರೈಂ-ಥ್ರಿಲ್ಲರ್-ಆಕ್ಷನ್ ಇರಬಹುದು ಎಂದು ಊಹೆ ಮಾಡಬಹುದು. ಪೋಸ್ಟರ್ನಲ್ಲಿ ಗಾಡ್ ಫರ್ಗಿವ್ಸ್, ಐ ಡೋಂಟ್ – ಕಿಂಗ್ ಕಿಚ್ಚ ಅಂದರೆ ದೇವರು ಕ್ಷಮಿಸಬಹುದು, ನಾನಲ್ಲ – ಕಿಂಗ್ ಕಿಚ್ಚ ಎಂಬ ಕ್ಯಾಪ್ಷನ್ ಕೂಡ ಇದೆ.
ಕಿಚ್ಚ ಸುದೀಪ್ 2006ರಲ್ಲಿ ಮೈ ಆಟೋಗ್ರಾಫ್ ಮೂಲಕ ಡೈರೆಕ್ಟರ್ ಆದವರು. ಬಳಿಕ ‘ನಂ 73, ಶಾಂತಿ ನಿವಾಸ’, ‘ವೀರ ಮದಕರಿ’, ‘ಜಸ್ಟ್ ಮಾತ್ ಮಾತಲ್ಲಿ’, ‘ಕೆಂಪೇಗೌಡ’ ಹಾಗೂ ‘ಮಾಣಿಕ್ಯ’ ಚಿತ್ರಗಳನ್ನ ಸುದೀಪ್ ನಿರ್ದೇಶನ ಮಾಡಿದರು. ‘ಮಾಣಿಕ್ಯ’ ಬಳಿಕ 9 ವರ್ಷಗಳ ಗ್ಯಾಪ್ ನಂತರ ಕಿಚ್ಚ ಸುದೀಪ್ ಈಗ ‘ಕೆಕೆ’ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.
ಕಬ್ಜ ಚಂದ್ರು + ಬಾಹುಬಲಿ ಪ್ರಸಾದ್ ಜೊತೆ ಹೊಸ ಸಿನಿಮಾ : ಕಿಚ್ಚನ 47ನೇ ಸಿನಿಮಾ ಡೈರೆಕ್ಟರ್ ಆರ್. ಚಂದ್ರು. (R. Chandru) ಇತ್ತೀಚೆಗೆ ಕಬ್ಜ ಚಿತ್ರದಲ್ಲಿ ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಂಡಿದ್ದ ಸುದೀಪ್ ಅವರನ್ನುಕಂಪ್ಲೀಟ್ ಹೀರೋ ಆಗಿ ನಿರ್ದೇಶಿಸುವ ಚಾನ್ಸ್ ಚಂದ್ರು ಅವರಿಗೆ ಸಿಕ್ಕಿದೆ.
ಇನ್ನೊಂದು ವಿಶೇಷ ಸುದ್ದಿ ಏನೆಂದರೆ ಈ ಚಿತ್ರಕ್ಕೆ ಕತೆ, ಚಿತ್ರಕತೆ ಬರೆದಿರುವುದು ವಿಜಯೇಂದ್ರ ಪ್ರಸಾದ್. ರಾಜಮೌಳಿ (Rajamouli) ಅವರ ತಂದೆ ವಿಜಯೇಂದ್ರ ಪ್ರಸಾದ್, (Vijayendra prasad) ರಾಜಮೌಳಿಯ ಎಲ್ಲ ಚಿತ್ರಗಳಿಗೂ ಕಥೆ-ಚಿತ್ರಕಥೆ ಬರದಿದ್ದವರು. ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಸೇರಿದಂತೆ ಬೇರೆಯವರಿಗೂ ಕಥೆ ಚಿತ್ರಕಥೆ ಕೊಟ್ಟಿದ್ದಾರೆ. ಅಂಥಾ ಯಶಸ್ವೀ ಬರಹಗಾರ ತಮ್ಮ ಕತೆ, ಚಿತ್ರಕತೆಯನ್ನು ಸುದೀಪ್ ಅವರಿಗೆ ನೀಡಿದ್ದಾರೆ. ಈ ಕತೆ, ಚಿತ್ರಕತೆ ಇಟ್ಟುಕೊಂಡು ಆರ್.ಚಂದ್ರು ಅದ್ದೂರಿಯಾಗಿ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ.
ಸಿನಿಮಾ ಮೇಕಿಂಗ್ ಮತ್ತು ಪ್ರಚಾರ ಎರಡರಲ್ಲೂ ಫೇಮಸ್ ಆಗಿರುವ ಚಂದ್ರು ಅವರಿಗೆ ಈಗ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಇದೆ. ಆ ಅದ್ಭುತವಾದ ಸ್ಕ್ರಿಪ್ಟ್ ಅನ್ನು ಆರ್.ಚಂದ್ರೂ ಅದ್ದೂರಿಯಾಗಿ, ಭರ್ಜರಿಯಾಗಿ ಸಿನಿಮಾ ರೂಪಕ್ಕೆ ತರಲಿದ್ದಾರೆ.



