ಸುಮಾರು ಒಂದೂವರೆ ತಿಂಗಳ ಹಿಂದೆ ಕಿಚ್ಚ ಸುದೀಪ್ ಅವರ ಅಭಿಮಾನಿಯೊಬ್ಬರು ಒಂದೇ ಒಂದು ರಿಪ್ಲೈ ಕೊಡಿ ಬಾಸ್ ಎಂದು ಮನವಿ ಮಾಡಿದ್ದರು. ಯುವ ನಿಖಿಲ್ ಹೆಸರಿನ ಆ ಅಭಿಮಾನಿಯ ಆ ಒಂದು ರಿಪ್ಲೈ ಮನವಿಗೆ ಸುದೀಪ್ ರಿಪ್ಲೈ ಮಾಡಿದ್ದಾರೆ. ಆದರೆ.. ನೋಡುವುದಕ್ಕೆ ಆತನೇ ಇಲ್ಲ.
ನಟ ಸುದೀಪ್ ಅವರು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಸ್ಕ್ ಕಿಚ್ಚ ಎಂಬ ಹ್ಯಾಷ್ ಟ್ಯಾಗ್ʻನಲ್ಲಿ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಶೂಟಿಂಗ್ ವೇಳೆ ಬಿಡುವು ಸಿಕ್ಕಾಗ, ಏರ್ʻಪೋರ್ಟ್‌ನಲ್ಲಿ ಚೆಕಿಂಗ್ ಮುಗಿದು ವಿಮಾನ ಹೊರಡುವ ಮಧ್ಯೆ ಬಿಡುವು ಸಿಕ್ಕಾಗ.. ಹೀಗೆ.. ಅಂತಹ ಒಂದು ಸಂದರ್ಭದಲ್ಲಿ ಫೆಬ್ರವರಿ 25ರಂದು ಅಭಿಮಾನಿಯೊಬ್ಬರು ಅಭಿಮಾನಿಯೊಬ್ಬರು ಒಂದೇ ಒಂದು ರಿಪ್ಲೈ ಕೊಡಿ ಬಾಸ್ ಎಂದು ಕೇಳಿದ್ದರು. ಕಿಚ್ಚ ಸುದೀಪ್ ರಿಪ್ಲೈ ಕೂಡಾ ಮಾಡಿದ್ರು. ಆದರೆ.. ಕಾಲ ಮಿಂಚಿ ಹೋಗಿತ್ತು. ಯುವ ನಿಖಿಲ್ ಮೃತಪಟ್ಟಿದ್ದರು.
ಅಭಿಮಾನಿ ಯುವ ನಿಖಿಲ್ ಅವರು ಇತ್ತೀಚೆಗೆ ಮೃತಪಟ್ಟ ವಿಷಯ ತಿಳಿದ ಕಿಚ್ಚ ಸುದೀಪ್ ತಮ್ಮ ರಿಪ್ಲೈನಲ್ಲಿ ʻಈ ಸುದ್ದಿ ಕೇಳಲು ನಿಜಕ್ಕೂ ಬೇಸರವಾಗುತ್ತಿದೆ. ನನ್ನ ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಆತನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನನ್ನ ಸಂತಾಪಗಳುʼ ಎಂದು ಟ್ವೀಟ್ ಮಾಡಿದ್ಧಾರೆ.
ನಿಖಿಲ್ ಅವರ ಸ್ನೇಹಿತರು ಬಾಸ್ ರಿಪ್ಲೈ ಮಾಡಿದ್ಧಾರೆ.. ಎದ್ದೇಳೋ..ನೋಡೋ.. ಎಂದು ರಿಪ್ಲೈ ಮಾಡುತ್ತಿದ್ದು, ಕುಟುಂಬದವರ ಆಕ್ರಂದನ ವರ್ಣಿಸದಾಗಿದೆ.
ಅಭಿಮಾನಿಗಳು ಹಾಗೆಯೇ ಇರ್ತಾರೆ. ಒಂದು ರಿಯಾಕ್ಷನ್, ಒಂದು ನಗು, ಒಂದೊಳ್ಳೆ ಮಾತು, ಒಂದ್ ಸೆಲ್ಫಿ.. ಹೀಗೆ ಅಭಿಮಾನಿಗಳ ನಿರೀಕ್ಷೆಗಳು ಚಿಕ್ಕ ಚಿಕ್ಕವು. ನಟರಿಗೂ ಅಷ್ಟೆ.. ತಾವು ಈ ಹಂತಕ್ಕೆ ಬಂದಿರುವುದೇ ಅಂತಹ ಅಭಿಮಾನಿಗಳಿಂದ ಎಂಬ ಅರಿವು ಇರುತ್ತದೆ. ಕಿಚ್ಚ ಸುದೀಪ್ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ಧಾರೆ. ಅಂತಹ ಅಭಿಮಾನಿಗಳಲ್ಲಿ ಒಬ್ಬ ಅಭಿಮಾನಿಯ ದುರಂತ ಕಥೆ ಇದು.



