ಒಂದಾನೊಂದು ಕಾಲದಲ್ಲಿ ಅವರಿಬ್ಬರೂ ಕುಚಿಕು ಫ್ರೆಂಡ್ಸ್. ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತು. ಆದರೆ.. ಯಾರೂ ಮಾತನಾಡಲ್ಲ. ಹೀಗಾಗಿ ಮಾಧ್ಯಮಗಳು ಗೊತ್ತಿದ್ದರೂ.. ಹೇಳುವಂತಿಲ್ಲ. ಏಕೆಂದರೆ.. ಗೊತ್ತಿರುವ ವಿಷಯ ಹೇಳಿಬಿಟ್ಟರೆ, ಇಬ್ಬರೂ ನೋ ಅಂತಾರೆ. ಒಪ್ಪಿಕೊಳ್ಳಲ್ಲ. ಹೀಗಿರುವಾಗಲೇ.. ಸುದೀಪ್ ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್ ಮಧ್ಯೆ ಒಂದು ಯುದ್ಧವೇ ಶುರುವಾಗಿದೆ.
ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ರೀ ರಿಲೀಸ್ ಆಗಿದೆ. ಕೆಜಿ ರಸ್ತೆಯ ನರ್ತಕಿ ಸೇರಿದಂತೆ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಮತ್ತೆ ತೆರೆಗಪ್ಪಳಿಸಿದೆ. ಸುದೀಪ್ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿ ಸಂಭ್ರಮಿಸುತ್ತಿದ್ದಾರೆ. 7 ವರ್ಷಗಳ ಹಿಂದೆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಂದಹಾಗೆ ಹೆಬ್ಬುಲಿ ಚಿತ್ರಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.
ಸಿನಿಮಾ ರಿ-ರಿಲೀಸ್ ಆಗುತ್ತಿರುವ ಹೊತ್ತಿನಲ್ಲೇ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ಟ್ವಿಟರ್‌ನಲ್ಲಿ ಸ್ಟಾರ್ ನಟರ ವಿರುದ್ಧ ನೆಗೆಟಿವ್ ಪೋಸ್ಟ್ ಹಾಕುವ ಮೂಲಕ ಕಿತ್ತಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದಚ್ಚು-ಕಿಚ್ಚ ಅಭಿಮಾನಿಗಳ ನಡುವೆ ವಾಗ್ವಾದ ಶುರುವಾಗಿದೆ.
ಟ್ಟಿಟರ್‌ನಲ್ಲಿ ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ಪರಸ್ಪರ ಕೆಸರೆರಚಾಡಿಕೊಳ್ಳುತ್ತಿದ್ದಾರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಸುದೀಪ್ – ದರ್ಶನ್ ಅಭಿಮಾನಿಗಳ ಜಗಳ ಈಗ ಆರಂಭವಾಗಿದೆ. ನಮ್ಮ ಹೀರೊನೇ ಗ್ರೇಟ್ ಎಂದು ಹೇಳುವ ಭರದಲ್ಲಿ ಮತ್ತೊಬ್ಬ ನಟನನ್ನು ಅವರ ಅಭಿಮಾನಿಗಳನ್ನು ಕೆಣಕುವ ಕೆಲಸ ಆಗುತ್ತಲೇ ಇರುತ್ತದೆ. ಈ ಬಾರಿಯೂ ಆಗಿದೆ.
ಸುದೀಪ್ ಅಭಿಮಾನಿಗಳು ಬ್ಯಾನರ್, ಪೋಸ್ಟರ್ಗಳನ್ನು ಹಾಕಿ ಮರು ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ. ಇದರ ನಡುವೆಯೇ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿಮಾನಿಗಳು ಹಾಕಿರುವ ಪೋಸ್ಟರ್ ಒಂದು ಗಮನ ಸೆಳೆಯುತ್ತಿದೆ. ಪೋಸ್ಟರ್ನಲ್ಲಿನ ಒಂದು ಸಾಲು ಕಿಚ್ಚು ಹಚ್ಚಿದೆ.
‘ಹೆಬ್ಬುಲಿ’ ಸಿನಿಮಾದಲ್ಲಿ ಸುದೀಪ್ ಸೈನಿಕನ ಪಾತ್ರದಲ್ಲಿ ನಟಿಸಿರುವುದು ಗೊತ್ತೇ ಇದೆ. ಇದೇ ವಿಷಯವನ್ನು ಇಟ್ಟುಕೊಂಡು, ‘ಐ ಆಮ್ ನಾಟ್ ಎ ಖೈದಿ, ಐ ಆಮ್ ಎ ಸೋಲ್ಡರ್’ (ನಾನು ಖೈದಿ ಅಲ್ಲ, ನಾನು ಸೈನಿಕ) ಎಂಬ ಸಾಲನ್ನು ಬರೆದಿದ್ದಾರೆ. ಆ ಮೂಲಕ ಜೈಲಿನಲ್ಲಿರುವ ಕೈದಿ ನಂಬರ್ 6106, ದರ್ಶನ್‌ಗೆ ಟಾಂಗ್ ಕೊಟ್ಟಿದ್ದಾರೆ ಸುದೀಪ್ ಅಭಿಮಾನಿಗಳು. ಸುದೀಪ್ ಅಭಿಮಾನಿಗಳು ಹಾಕಿರುವ ಈ ಪೋಸ್ಟರ್ನ ಚಿತ್ರ ಹಾಗೂ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದರ್ಶನ್ ಜೈಲಿಗೆ ಹೋದ ಬಳಿಕ ಸುದೀಪ್ ಆ ಬಗ್ಗೆ ಹೆಚ್ಚಾಗೇನೂ ಮಾತನಾಡಿಲ್ಲ. ಆದರೆ ಸುದೀಪ್ ಬಹಿರಂಗವಾಗಿಯೇ ೨೦೧೧ರಲ್ಲಿ ವಿಜಯಲಕ್ಷ್ಮಿ ದರ್ಶನ್‌ಗೆ ಹೊಡೆದ ಪ್ರಕರಣವನ್ನೂ ನೆನಪಿಸಿದ್ದರು. ದರ್ಶನ್ ಹೆಸರು ಹೇಳಿರಲಿಲ್ಲ. ಶಿವಣ್ಣನ ಹೆಸರೂ ಹೇಳದೆ.. ವಿನಾಕಾರಣ ಶಿವಣ್ಣ ವಿಲನ್ ಆಗಿದ್ದ ಘಟನೆಯನ್ನೂ ನೆನಪಾಗುವಂತೆ ಮಾಡಿದ್ದರು. ಸುದೀಪ್ ಯಾರ ಹೆಸರು ಹೇಳದಿದ್ದರೂ.. ಇಡೀ ಘಟನೆಯ ಅರ್ಥ ಏನು ಅನ್ನೋದು ಎಲ್ಲರಿಗೂ ಗೊತ್ತಾಗಿತ್ತು. ಹಾಗಂತ ಇದಕ್ಕೆ ಕಿಚ್ಚು ಹಚ್ಚಿದ್ದು ಸುದೀಪ್ ಫ್ಯಾನ್ಸ್ ಅಷ್ಟೇ ಎಂದುಕೊಳ್ಳೋ ಹಾಗಿಲ್ಲ.
ಈ ಹಿಂದೆ ಸುದೀಪ್ ಅವರು ಯಾವುದೇ ಕಾಂಟ್ರವರ್ಸಿಗೆ ಸಿಕ್ಕಿಕೊಂಡರೂ. ದರ್ಶನ್ ಫ್ಯಾನ್ಸ್ ಸುದೀಪ್ ಅವರ ಸಮಸ್ತ ಕುಟುಂಬವನ್ನು ನಡುಬೀದಿಗೆ ತಂದು ಮರ್ಯಾದೆ ತೆಗೆದಿದ್ದಾರೆ. ಈಗ ಸುದೀಪ್ ಅಭಿಮಾನಿಗಳಲ್ಲಿ ಕೆಲವರು ದರ್ಶನ್, ಜೈಲಿಗೆ ಹೋಗಿರುವುದನ್ನು ಸಂಭ್ರಮಿಸುತ್ತಿದ್ದಾರೆ. ಅದೇ ಕಾರಣಕ್ಕೆ ಈಗ ಸುದೀಪ್ ಅಭಿಮಾನಿಗಳು ಹೀಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಹೆಬ್ಬುಲಿ’ ಸಿನಿಮಾ 2017 ರಲ್ಲಿ ಬಿಡುಗಡೆ ಆಗಿತ್ತು, ಕೃಷ್ಣ ನಿರ್ದೇಶಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾದಲ್ಲಿ ರವಿಚಂದ್ರನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಅಮಲಾ ಪೌಲ್ ನಾಯಕಿಯಾಗಿದ್ದರು. ಸಿನಿಮಾದಲ್ಲಿ ಸುದೀಪ್ ಸೈನಿಕನ ಪಾತ್ರದಲ್ಲಿ ನಟಿಸಿದ್ದರು.
ಈಗ ದರ್ಶನ್ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರವಾಗಿ ಆತನ ಅಭಿಮಾನಿ ಹುಡುಗರು ಚಾಲೆಂಜ್ ತೆಗೆದುಕೊಂಡಿದ್ದಾರೆ. ಸುದೀಪ್ ಅಭಿಮಾನಿಗಳ ಟ್ರೀಟ್ ಪ್ರತ್ಯುತ್ತರಕ್ಕೆ ಪ್ರತ್ಯುತ್ತರವಾಗಿ ದರ್ಶನ್ ಅಭಿಮಾನಿಗಳೂ ಸಹ ಸುದೀಪ್ ವಿರುದ್ಧ ನೆಗೆಟಿವ್ ಟ್ರೆಂಡ್ ಶುರು ಮಾಡಿದ್ದಾರೆ.
ಲಾಸ್ ಮೇಕಿಂಗ್ ಸ್ಟಾರ್ ಕಿಚ್ಚ ಅಂತೆಲ್ಲ ಲೇವಡಿ ಮಾಡುತ್ತಿದ್ದಾರೆ. ಜೊತೆಗೆ ದರ್ಶನ್ ಖೈದಿ ನಂ. ಇರುವ ಟೀಷರ್ಟ್ ಹಾಕಿಕೊಂಡು ತಿರುಗೇಟು ಕೊಡುತ್ತಿದ್ದಾರೆ. ಮರ್ಯಾದೆಯ ಮಿತಿಯನ್ನು ದಾಟಿದ್ದಾರೆ.
ಒಂದಂತೂ ಸತ್ಯ. ಸುದೀಪ್ ಮತ್ತು ದರ್ಶನ್ ಇಬ್ಬರೂ ಈಗ ಸ್ನೇಹಿತರಲ್ಲ. ಸ್ನೇಹ ಉಳಿದುಕೊಂಡೂ ಇಲ್ಲ. ಆದರೆ.. ಅವರೇನೋ ಸ್ಟಾರ್ ಹೀರೋಗಳು. ಫ್ಯಾನ್ಸ್ʻಗೆ ಏನಾಗಿದೆ.. ಅರ್ಥವಾಗದ ಪರಿಸ್ಥಿತಿ. ಜೊತೆಗಿರುವ ಗೆಳೆಯರೇ.. ಎಲ್ಲೋ ಇರುವ ಹೀರೋಗಾಗಿ ಹೊಡೆದಾಡಿಕೊಳ್ಳೋದು, ಜಗಳ ಮಾಡ್ಕೊಳ್ಳೋದು ಸರೀನಾ.. ಈ ಪ್ರಶ್ನೆ ಯಾವ ಅಭಿಮಾನಿಗೂ ಅರ್ಥವಾಗಲ್ಲ.



