ವಿಕ್ರಾಂತ್ ರೋಣ ನಂತರ ಸುದೀಪ್ ಅವರ ಯಾವ ಚಿತ್ರವೂ ತೆರೆ ಕಂಡಿಲ್ಲ. ಹೀಗಾಗಿ ಸುದೀರ್ಘ ಕಾಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ಧಾರೆ ಕಿಚ್ಚ ಸುದೀಪ್ ಮ್ಯಾಕ್ಸ್ ಚಿತ್ರದ ಮೂಲಕ. ಮ್ಯಾಕ್ಸ್. ಕಿಚ್ಚ ಸುದೀಪ್ ನಟಿಸುತ್ತಿರುವ ಹೊಸ ಚಿತ್ರದ ಹೆಸರು.ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ನಿರ್ದೇಶಕ.
ಕಿಚ್ಚ ಸುದೀಪ್, ಟ್ವಿಟ್ಟರಿನಲ್ಲಿ ಒಂದು ವಿಡಿಯೋ ಷೇರ್ ಮಾಡಿದ್ದು ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದಿದ್ದಾರೆ. ವಿಡಿಯೋನಲ್ಲಿ ತಾವು ತಂಗಿದ್ದ ಹೋಟೆಲ್ನ ಪರಿಸರ, ಆ ನಂತರ ತಾವು ಪ್ರತಿದಿನ ಓಡಾಡುವ ದಾರಿಯ ವಿಡಿಯೋ, ಸಿನಿಮಾ ಶೂಟಿಂಗ್ ಸೆಟ್, ಸೆಟ್ ಒಳಗೆ ತಮ್ಮ ಮೇಕಪ್ ರೂಂ ಇನ್ನಿತರೆಗಳನ್ನೆಲ್ಲ ವಿಡಿಯೋನಲ್ಲಿ ತೋರಿಸಿ ಕೊನೆಗೆ ‘ಮ್ಯಾಕ್ಸ್’ ಚಿತ್ರೀಕರಣ ಮುಗಿದಿದೆ’ ಎಂದು ಹೇಳಿದ್ದಾರೆ. ಆ ಮೂಲಕ ಸುದೀಪ್ ಅಭಿಮಾನಿಗಳು ಮತ್ತೆ ನಿರೀಕ್ಷೆಗಳನ್ನು ಮೂಡಿಸಿಕೊಂಡು ಸಿನಿಮಾಕ್ಕಾಗಿ ತುದಿಗಾಲಲ್ಲಿ ಕಾಯುವಂತೆ ಮಾಡಿದ್ದಾರೆ.
ಸುದೀಪ್ ಜೊತೆಗೆ ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಸುಕೃತ ವಾಗ್ಲೆ ಕೂಡಾ ನಟಿಸಿದ್ದು, ನಿರೀಕ್ಷೆಯಂತೂ ಭರ್ಜರಿಯಾಗಿದೆ. ಕಿಚ್ಚ ಸುದೀಪ್ ಅರ್ಜುನ್ ಮಹಾಕ್ಷಯ್ ಎಂಬ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. 2 ತಿಂಗಳು ಅಮಾನತಿನಲ್ಲಿದ್ದ ಅರ್ಜುನ್ ಬಳಿಕ ಹೊಸ ಪೊಲೀಸ್ ಠಾಣೆಯಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವುದರೊಂದಿಗೆ ಸಿನಿಮಾ ಶುರುವಾಗಲಿದೆ. ಈ ಹಾದಿಯಲ್ಲಿ ಮಂತ್ರಿಗಳ ಮಗನೊಬ್ಬನನ್ನು ಅರೆಸ್ಟ್ ಮಾಡುವ ಅರ್ಜುನ್, ನಂತರ ಏನು ಮಾಡ್ತಾನೆ ಅನ್ನೋದು ಚಿತ್ರದ ಕಥೆ. ತಮ್ಮ ಚಿತ್ರದ ಬಗ್ಗೆ ಈ ಹಿಂದೆ.. ʻʻಬಿಡುಗಡೆ ಆಗುತ್ತಿರುವ ಬೇರೆ ಸಿನಿಮಾಗಳ ಜೊತೆ ಸ್ಪರ್ಧೆ ಮಾಡಲು ಅಥವಾ ಬೇರೆ ನಟರ ಜೊತೆ ಪೈಪೋಟಿ ಮಾಡಲು ಅಪ್ಡೇಟ್ಸ್ ನೀಡುವುದಿಲ್ಲ. ಚಿತ್ರತಂಡದಿಂದ ಪೂರ್ಣವಾಗಿ ಏನನ್ನಾದರೂ ಅನೌನ್ಸ್ ಮಾಡಬೇಕು ಎಂದಾಗ ಅಪ್ಡೇಟ್ಸ್ ನೀಡಲಾಗುವುದುʼʼ ಎಂದು ಹೇಳಿದ್ದರು.
ಆದರೆ.. ಡೇಟ್ ಅನೌನ್ಸ್ ಮಾಡಿಲ್ಲ. ಬಹುಶಃ ಇನ್ನೊಂದು ನಾಲ್ಕೈದು ತಿಂಗಳಲ್ಲಿ ಅಂದ್ರೆ.. ನವೆಂಬರ್ ಅಥವಾ ಡಿಸೆಂಬರಿನಲ್ಲಿ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ. ಇಲ್ಲ ಇಲ್ಲ.. ಸೆಪ್ಟೆಂಬರ್ ಅಥವಾ ಅಕ್ಟೋಬರಿನಲ್ಲೇ ಸಿನಿಮಾ ರಿಲೀಸ್ ಆಗಬಹುದು ಎನ್ನುವ ಮಾತುಗಳೂ ಇವೆ. ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯಬಹುದು.
ಸದ್ಯಕ್ಕೆ ಉಪೇಂದ್ರರ ಯುಐ, ಧ್ರುವ ಸರ್ಜಾರ ಕೆಡಿ ಹಾಗೂ ಮಾರ್ಟಿನ್, ದುನಿಯಾ ವಿಜಯ್ ಅವರ ಭೀಮ, ಶಿವಣ್ಣ ಅವರ ಭೈರತಿ ರಣಗಲ್ (ಆಗಸ್ಟ್ 15ಕ್ಕೆ) ರೆಡಿಯಾಗುತ್ತಿವೆ. ಹೀಗಾಗಿ.. ಸ್ಟಾರ್ʻಗಳ ಚಿತ್ರದ ಟೈಂ ಟೇಬಲ್ ಮಾಡಿಕೊಂಡು ಸುದೀಪ್ ಅವರ ಮ್ಯಾಕ್ಸ್ ಡಿಸೆಂಬರಿಗೆ ರಿಲೀಸ್ ಆಗಬಹುದು ಎನ್ನುವ ಲೆಕ್ಕಾಚಾರ ಇದೆ.



