ಕಿಚ್ಚ ಸುದೀಪ್ ಅವರನ್ನು ಬೆಳ್ಳಿತೆರೆಯಲ್ಲಿ ನೋಡಿ 2 ವರ್ಷವಾಗಿದೆ. ಅದ್ಯಾಕೋ ಏನೋ.. ಸಿನಿಮಾ ನಟರು. ಅದರಲ್ಲಿಯೂ ಸ್ಟಾರ್ ಹೀರೋಗಳು ರೆಗ್ಯುಲರ್ ಆಗಿ ವರ್ಷಕ್ಕೊಂದು ಸಿನಿಮಾನೂ ರಿಲೀಸ್ ಮಾಡೋದಿಲ್ಲ. ಸುದೀಪ್ ಅವರೂ ಇದಕ್ಕೆ ಹೊರತಲ್ಲ. ಸ್ಟಾರ್ ಚಿತ್ರಗಳಿಲ್ಲದೆ ಚಿತ್ರರಂಗವೇ ಲಬೋ ಲಬೋ ಅನ್ನುತ್ತಿರುವಾಗ.. ಹೊಸ ಹೊಸ ಚಿತ್ರಗಳು ಫ್ಲಾಪ್ ಆಗುತ್ತಿರುವಾಗ ರೀ ರಿಲೀಸ್ ಟ್ರೆಂಡ್ ಶುರುವಾಗಿದೆ. ಅದಕ್ಕೀಗ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.
ಪುನೀತ್ ಅಭಿನಯದ ಜಾಕಿ ಭರ್ಜರಿ ಯಶಸ್ಸು ಕಂಡಿತು. ಬೆನ್ನಲ್ಲೇ ಅಂಜನಿಪುತ್ರ ರಿಲೀಸ್ ಆಯಿತಾದ್ರೂ, ಆ ಯಶಸ್ಸು ಸಿಗಲಿಲ್ಲ. ಅದಾದ ಮೇಲೆ ದರ್ಶನ್ʻರ ಶಾಸ್ತ್ರಿ ಬಂತು. ಮತ್ತೆ ಹವಾ ಎಬ್ಬಿಸಿತು. ಉಪೇಂದ್ರರ ಎ ಕೂಡಾ ಕ್ರೇಜ್ ಹುಟ್ಟು ಹಾಕ್ತು. ಇದೀಗ ಕಿಚ್ಚ ಸುದೀಪ್ʻರ ಹೆಬ್ಬುಲಿ ಟೈಂ.
ಮುಂದಿನ ವಾರ ಅಂದರೆ ಆಗಸ್ಟ್ 2ಕ್ಕೆ ಕಿಚ್ಚನ ‘ಹೆಬ್ಬುಲಿ’ ಸಿನಿಮಾ ಮರು ಬಿಡುಗಡೆ ಆಗಲಿದೆ. 7 ವರ್ಷಗಳ ಹಿಂದೆ ಹೆಬ್ಬುಲಿ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ನಂತರ ಡೈರೆಕ್ಟರ್ ಕೃಷ್ಣ, ಹೆಬ್ಬುಲಿ ಕೃಷ್ಣ ಎಂದೇ ಫೇಮಸ್ ಆದರು. ರಘುನಾಥ್-ಉಮಾಪತಿ ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್ ಕೂಡಾ ಇದ್ದರು. ಸುದೀಪ್ ಸ್ಟೈಲಿಶ್ ಲುಕ್ ಹೆಬ್ಬುಲಿ ಕಟಿಂಗ್ ಎಂದೇ ಫೇಮಸ್ ಆಗಿತ್ತು. ಅಮಲಾ ಪೌಲ್ ನಾಯಕಿಯಾಗಿ ನಟಿಸಿದ್ದರು. ಕಬೀರ್ ದುಹಾನ್ ಸಿಂಗ್, ರವಿಕಾಳೆ, ಕಲ್ಯಾಣಿ ಸೇರಿದಂತೆ ದೊಡ್ಡ ತಾರಾಗಣವೇ ಇತ್ತು.
ಆ ಹೆಬ್ಬುಲಿ ಮತ್ತೆ ರಿ ರಿಲೀಸ್ ಆಗುತ್ತಿದೆ.
ಮ್ಯಾಕ್ಸ್ ಚಿತ್ರಕ್ಕಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಹೆಬ್ಬುಲಿ ಟ್ರೆಂಡ್ ಸಿಗಲಿದೆ.



