ಸ್ಪೆಷಲ್ ಯು ಡಾಟ್ ಕಾಂ, ಸುಮಾರು ಒಂದು ತಿಂಗಳ ಹಿಂದೆಯೇ ರಾಹುಲ್ ಗಾಂಧಿಯೇ ನಿರ್ಧಾರ ಮಾಡಬೇಕು ಎಂದು ಹೇಳಿತ್ತು. ಅದರಂತೆಯೇ ಆಗಿದೆ. ಇದೀಗ ಸಿದ್ದರಾಮಯ್ಯ ಅವರೇ ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು ಎಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ‘ರಾಜ್ಯದಲ್ಲಿ ನಾಯಕತ್ವ ಗೊಂದಲ ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕುʼ ಎಂದು ಹೇಳಿದ ಬೆನ್ನಲ್ಲೇ ಸಿದ್ದರಾಮಯ್ಯ ಹೇಳಿಕೆ ಕುತೂಹಲ ಹುಟ್ಟಿಸಿದೆ.
ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ಧ ಎಂದಿದ್ದಾರೆ ಸಿದ್ದರಾಮಯ್ಯ.
‘ರಾಜ್ಯದಲ್ಲಿ ನಾಯಕತ್ವ ಗೊಂದಲ ಸೃಷ್ಟಿಸಿದ್ದು ಹೈಕಮಾಂಡ್ ಅಲ್ಲ. ಅದು ಸ್ಥಳೀಯವಾಗಿ ಸೃಷ್ಟಿಯಾಗಿರುವ ಸಮಸ್ಯೆ. ಅದನ್ನು ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ‘ಒನ್ಸ್ ಫಾರ್ ಆಲ್ ಕ್ಲಿಯರ್ ಮಾಡುತ್ತಿದ್ದೇನೆ ಕೇಳಿ. ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಹೈಕಮಾಂಡ್ ನಾವೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಹೈಕಮಾಂಡ್ ತನ್ನ ತೀರ್ಮಾನ ಹೇಳುತ್ತದೆ’ ಎಂದು ಹೇಳಿದ್ದಾರೆ.
ನಾಯಕತ್ವ ವಿಚಾರವಾಗಿ ಮಾಧ್ಯಮಗಳೇ ಅತೀ ಹೆಚ್ಚು ಚರ್ಚೆ ಮಾಡುತ್ತಿವೆ. ನಾನು ಅಧಿವೇಶನದಲ್ಲಿ ಮಾತನಾಡಿದ ಮೇಲೂ ಈ ವಿಚಾರದಲ್ಲಿ ಯಾಕೆ ಪ್ರಶ್ನೆ ಕೇಳುತ್ತಿದ್ದೀರಾ ಎಂದು ಪತ್ರಕರ್ತರನ್ನೇ ಪ್ರಶ್ನೆ ಮಾಡಿದ್ದಾರೆ ಸಿದ್ದರಾಮಯ್ಯ. ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ, ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಎನ್ನುವುದನ್ನು ನಿಲ್ಲಿಸಿ ಎಂಬ ಖರ್ಗೆ ಅವರ ಮಾತಿನಲ್ಲಿ ತಪ್ಪೇನಿದೆ ಎಂದಿರುವ ಸಿದ್ದರಾಮಯ್ಯ ಯಾರೂ ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ ಎಂದೂ ಹೇಳಿದ್ಧಾರೆ.
‘ನಮ್ಮಲ್ಲಿ ಸಮಸ್ಯೆಯೇ ಇಲ್ಲ. ಇನ್ನು ಬಗೆಹರಿಸಿಕೊಳ್ಳುವುದು ಏನಿದೆ? ನಾನೇನು ಹೇಳಬೇಕೋ ಹೇಳಿದ್ದೇನೆ. ಮುಖ್ಯಮಂತ್ರಿಗಳಿಗೆ ಏನು ಹೇಳಬೇಕೋ ಹೇಳಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಏನು ಹೇಳಬೇಕೋ ಹೇಳಿದ್ದೇನೆ. ಸಮಸ್ಯೆಯನ್ನೆಲ್ಲಾ ಸೃಷ್ಟಿ ಮಾಡುತ್ತಿರುವುದು ನೀವೇ.. ಎಂದು ಮಾಧ್ಯಮಗಳ ಮೇಲೆಯೇ ಎಲ್ಲ ಹೊಣೆಯನ್ನೂ ಹೊತ್ತು ಹಾಕಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಅಧಿಕಾರ ಹಸ್ತಾಂತರ, ಕುರ್ಚಿ ಕಿತ್ತಾಟದ ಬಗ್ಗೆ ಉಭಯ ಬಣಗಳ ನಡುವೆ ಹೇಳಿಕೆ, ಪ್ರತಿ ಹೇಳಿಕೆಗಳು ವ್ಯಕ್ತವಾಗುತ್ತಲೇ ಇವೆ. ಕೊನೆಗೆ ಸದನದಲ್ಲೂ ಇದು ಪ್ರತಿಧ್ವನಿಸಿದ್ದು, ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್‌ನತ್ತ ಬೊಟ್ಟು ಮಾಡುತ್ತಿರುವಾಗಲೇ ಮಲ್ಲಿಕಾರ್ಜುನ ಖರ್ಗೆ ಅವರು, ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುವಂತೆ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.



