ಸಂಕ್ರಾಂತಿ ಕಳೀತಿದ್ದಂತೆ ಮತ್ತೆ ಸಿಎಂ ಕುರ್ಚಿ ಫೈಟ್ ಜೋರಾಗಿದೆ. ಅಸ್ಸಾಂ ಚುನಾವಣಾ ವೀಕ್ಷಕರಾಗಿರುವ ಡಿಕೆಶಿ ಎಐಸಿಸಿ ಸಭೆಯಲ್ಲಿ ಭಾಗಿಯಾಗಿ ಚರ್ಚಿಸಿದ್ದಾರೆ. ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿಯವರನ್ನೂ ಭೇಟಿಯಾಗಿದ್ದಾರೆ. ಇತ್ತ ಕೆಜೆ ಜಾರ್ಜ್ ಭೇಟಿಯಾಗಿ ಮಾತುಕತೆ ನಡೆಸಿರುವುದು ಸಂಚಲನ ಮೂಡಿಸಿದೆ. ಇತ್ತ ಕೆಎನ್ ರಾಜಣ್ಣ ಮನೆಯಲ್ಲಿ ಔತಣ ಕೂಟ ನಡೀತಿದೆ. ಎಲ್ಲವೂ ಮೀಟಿಂಗ್ ಮೀಟಿಂಗ್ ಮೀಟಿಂಗ್.
ತಮಿಳುನಾಡಿಗೆ ಹೋಗುತ್ತಿದ್ದ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣದಲ್ಲಿ, ‘ದೆಹಲಿಗೆ ಬನ್ನಿ’ ಎಂದು ಡಿಸಿಎಂಗೆ ಹೇಳಿದ್ದರು. ಇದರ ಬೆನ್ನಲ್ಲೇ ಡಿಕೆಶಿ ದೆಹಲಿಗೆ ತೆರಳಿದ್ದಾರೆ.ಅತ್ತ ಡಿಕೆ ಶಿವಕುಮಾರ್ ದೆಹಲಿಯಲ್ಲಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ರಾಜಣ್ಣ ನಿವಾಸದಲ್ಲಿ ನಾಟಿಕೋಳಿ ಸಾರು, ರಾಗಿ ಮುದ್ದೆ ಸವಿದಿದ್ದಾರೆ. ರಾಜಣ್ಣಗೆ ಮತ್ತೆ ಸಚಿವ ಸ್ಥಾನದ ನೀಡುವ ಬಗ್ಗೆ ಹೈಕಮಾಂಡ್ ಜೊತೆ ಮಾತಾಡ್ತೀನಿ ಎಂದಿದ್ದಾರೆ. ಆದರೆ ಡಿಕೆಶಿ ದೆಹಲಿಗೆ ತೆರಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಗೊತ್ತಿಲ್ಲಪ್ಪ’ ಎಂದರು.
ಏನಾದರೂ ಗುಡ್ ನ್ಯೂಸ್ ಇದ್ಯಾ ಅಂದ್ರೆ, ಹೈಕಮಾಂಡ್ ಜೊತೆ ಮಾತನಾಡಿದ್ದೇನೆ ಎನ್ನುವ ಮೂಲಕ ರಾಜಣ್ಣ ಅವರಿಗೆ ಗುಡ್ ನ್ಯೂಸ್ ಸಿಗುವ ಸೂಚನೆ ಕೊಟ್ಟಿದ್ದಾರೆ.
ಅತ್ತ ದೆಹಲಿಯಲ್ಲಿ ಕೆ.ಜೆ.ಜಾರ್ಜ್ ಅವರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಜಾರ್ಜ್ ಅವರೀಗ ಕೇರಳ ವಿಧಾನಸಭೆ ಚುನಾವಣೆ ವೀಕ್ಷಕರಾಗಿ ನೇಮಕವಾಗಿದ್ದಾರೆ. ಆದರೆ, ಕೆ.ಜೆ.ಜಾರ್ಜ್ ಅವರು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡುವ ಮೊದಲು ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಜಾರ್ಜ್ ಅವರನ್ನು ಭೇಟಿ ಮಾಡಿದ್ದರು ಎಂಬ ಮಾಹಿತಿಯೇ ಸಂಚಲನ ಸೃಷ್ಟಿಸಿದೆ. ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಅವರೊಂದಿಗೆ ಕೆ.ಜೆ.ಜಾರ್ಜ್ ಅವರು ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆಯೇ ಎಂಬ ಕುತೂಹಲ ಇದೀಗ ಉಂಟಾಗಿದೆ.



