ಮಂಡ್ಯದ ಪಾಂಡವಪುರ ತಾಲೂಕಿನ ಕೆರೆಗೋಡು ಈಗ ಇಡೀ ರಾಜ್ಯದ ಸುದ್ದಿ ಕೇಂದ್ರ. ನ್ಯಾಷನಲ್ ಲೆವೆಲ್ಲಿನಲ್ಲಿಯೂ ಸುದ್ದಿಯಾಗುತ್ತಿರೋ ಕೆರೆಗೋಡು, ಒಂದು ಪುಟ್ಟ ಹೋಬಳಿ. ಹಿಂದೊಮ್ಮೆ ವಿಧಾನಸಭಾ ಕ್ಷೇತ್ರವೂ ಆಗಿತ್ತು. ಕ್ಷೇತ್ರ ಪುನರ್ʻವಿಂಗಡಣೆ ಬಳಿಕ ಕೆರೆಗೋಡು ವಿಧಾನಸಭಾ ಕ್ಷೇತ್ರದ ಸ್ಥಾನ ಕಳೆದುಕೊಂಡಿತು. ಆದರೆ, ಈಗ ಇಡೀ ರಾಜ್ಯದ ವಿಧಾನಸಭೆ ಚುನಾವಣೆ ದಿಕ್ಕು ಬದಲಿಸುವಷ್ಟರಷ್ಟು ಖ್ಯಾತಿ ಪಡೆದುಕೊಂಡಿದೆ. ಕೆರೆಗೋಡಿನ ಧ್ವಜಸ್ತಂಭ ವಿವಾದ ಶುರುವಾಗಿದ್ದು ಎಲ್ಲಿಂದ ಹೇಗೆ.. ಹಾಗೂ ಅದು ಯಾವ ರೀತಿ ತಿರುವು ಪಡೆದುಕೊಂಡಿತು ಅನ್ನೋದನ್ನ ನೋಡ್ತಾ ಹೋದ್ರೆ ಇಡೀ ಪ್ರಕರಣದ ಒಳಸುಳಿ ಅರ್ಥವಾದೀತು. ಏಕೆಂದರೆ ಇಡೀ ಪ್ರಕರಣದಲ್ಲಿ ರಾಜಕೀಯವೇ ಮೇಳೈಸಿದ್ದು, ಕುಮಾರಸ್ವಾಮಿ ವರ್ಸಸ್ ಚೆಲುವರಾಯ ಸ್ವಾಮಿ ಹಾಗೂ ರವಿ ಗಾಣಿಗ ಅವರ ಪ್ರತಿಷ್ಠೆಯೇ ಮುಖ್ಯವಾಗಿದೆ ಅನ್ನೋದು ಮೇಲ್ನೋಟಕ್ಕೆ ಅರ್ಥವಾಗುತ್ತಿದೆ.
ಆರಂಭ : 2023ರ ನವೆಂಬರ್ 27ರಂದು ಗ್ರಾಮ ಪಂಚಾಯಿತಿಗೆ ಶ್ರೀ ಗೌರಿಶಂಕರ್ ಸೇವಾ ಟ್ರಸ್ಟ್ ಹಳೇ ಧ್ವಜಸ್ತಂಭದ ಜಾಗದಲ್ಲಿ ಹೊಸ ಧ್ವಜಸ್ತಂಭ ನಿರ್ಮಾಣ ಮಾಡುತ್ತೇವೆ ಎಂದು ಅರ್ಜಿ ಸಲ್ಲಿಸಿತ್ತು. ಆದರೆ ಯಾವ ಬಾವುಟ ಹಾರಿಸುತ್ತೇವೆಂದು ಅರ್ಜಿಯಲ್ಲಿ ಟ್ರಸ್ಟ್ ಹೇಳಿರಲಿಲ್ಲ. ಡಿಸೆಂಬರ್ 29 ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿತ್ತು. ಪಂಚಾಯ್ತಿ ಸದಸ್ಯರ ಪ್ರಕಾರ ಹನುಮ ಧ್ವಜ ಹಾರಿಸುವ ಉದ್ದೇಶದಿಂದಲೇ ಕಟ್ಟಲಾಗಿದ್ದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ಯಾವ ವಿರೋಧವೂ ಇರಲಿಲ್ಲ. 22 ಸದಸ್ಯರ ಪೈಕಿ 18 ಸದಸ್ಯರು ಇದಕ್ಕೆ ಸಹಮತವನ್ನೂ ಕೊಟ್ಟಿದ್ದರು.
ವಿವಾದ ಶುರುವಾಗಿದ್ದು ಹೇಗೆ?
ಪಂಚಾಯ್ತಿ ಅನುಮತಿ ಕೊಟ್ಟ ನಂತರ ಟ್ರಸ್ಟ್ʻನವರು ದೇಣಿಗೆ ಸಂಗ್ರಹಕ್ಕೆ ಮುಂದಾದರು. ಹಲವರು ದೇಣಿಗೆ ಕೊಟ್ಟರು. ಈಗ ಶಾಸಕರಾಗಿರುವ ರವಿ ಗಾಣಿಗ, ಚೆಲುವರಾಯ ಸ್ವಾಮಿ ಅವರನ್ನೂ ದೇಣಿಗೆ ನೀಡಲು ಕೇಳಲಾಯಿತು. ಆದರೆ ಅವರು ಭರವಸೆ ಕೊಟ್ಟರೇ ಹೊರತು ದೇಣಿಗೆ ಕೊಡಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಅದಾದ ಮೇಲೆ ಗ್ರಾಮದ ಜನರೆಲ್ಲ ಧ್ವಜಸ್ತಂಭದ ಉದ್ಘಾಟನೆ ವೇಳೆ ರಾಜಕಾರಣಿಗಳನ್ನೆಲ್ಲ ಹೊರಗಿಡೋಣ ಎಂಬ ತೀರ್ಮಾನಕ್ಕೆ ಬಂದರು. ಆದರೆ ಈ ಮಧ್ಯೆ ಕುಮಾರಸ್ವಾಮಿ ಅಕಸ್ಮಾತ್ ಆಗಿ ಊರಿನಲ್ಲಿ ಹಾದು ಹೋಗುವಾಗ ಆಹ್ವಾನ ಕೊಟ್ಟರಂತೆ. ಅಲ್ಲಿಂದಲೇ ಶುರುವಾಯ್ತು ಪಾಲಿಟಿಕ್ಸ್.
ಕುಮಾರಸ್ವಾಮಿ ಒಪ್ಪಿಕೊಂಡರೇನೋ ಹೌದು. ಆದರೆ ಧ್ವಜಸ್ತಂಭ ಉದ್ಘಾಟನೆ ದಿನ ಜನವರಿ 22ರಂದು ಅವರೇ ಅಯೋಧ್ಯೆಯಲ್ಲಿದ್ದರು. ಅಯೋಧ್ಯೆಯಲ್ಲಿ ರಾಮಲಲ್ಲ ಪ್ರತಿಷ್ಥಾಪನೆ ದಿನವೇ ಉದ್ಘಾಟನೆ ಮಾಡುವ ಯೋಚನೆ ಗ್ರಾಮಸ್ಥರದ್ದಾಗಿತ್ತು.
ಆದರೆ ಕುಮಾರಸ್ವಾಮಿ ಅವರನ್ನು ಕರೆದರೆಂದು ಗೊತ್ತಾದ ಮೇಲೆ ರವಿ ಕುಮಾರ್ ಹಾಗೂ ಚೆಲುವರಾಯ ಸ್ವಾಮಿ ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು. ವಿವಿಧ ಸಂಘಟನೆಗಳಿಂದ ತಾವೂ ಧ್ವಜ ಹಾರಿಸುತ್ತೇವೆ, ಅವಕಾಶ ಕೊಡಿ ಎಂದು ಅರ್ಜಿ ಹಾಕಿಸಿದರು. ಈಗ ಸರ್ಕಾರ ಹೇಳುತ್ತಿರುವ ಕಥೆಗಳೆಲ್ಲವೂ ಇದೇ ಹೊರತು, ಮೊದಲಿಗೆ ಅದು ವಿವಾದವೇ ಆಗಿರಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ವಿವಾದ ಶುರುವಾಗಿದ್ದೇ ರಾಮಲಲ್ಲಾ ಪ್ರತಿಷ್ಠಾಪನೆ ದಿನ ಹನುಮ ಧ್ವಜವನ್ನ ಹಾರಿಸಿದ ಮೇಲೆ. ನುಮ ಧ್ವಜ ಹಾರಿಸುತ್ತಿದ್ದಂತೆ ಪಂಚಾಯಿತಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆನಂತರ ಮತ್ತೆ ಸಾಮಾನ್ಯ ಸಭೆ ಕರೆದು ಗ್ರಾಮ ಪಂಚಾಯತ್ ಅಧಿಕಾರಿಗಳು ನಡಾವಳಿ ರಚಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪಿಡಿಒ, ಗ್ರಾಮ ಪಂಚಾಯ್ತಿಗೆ ಬಾವುಟ ಹಾರಾಟಕ್ಕೆ ಅನುಮತಿ ನೀಡಲು ಯಾವುದೇ ಅಧಿಕಾರ ಇಲ್ಲ ಎಂದಿದ್ದರು.
ಇದೇ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು ಅಂತ ಪಿಡಿಓ ಸಲಹೆ ನೀಡಿದ್ದರು. ಗ್ರಾಮ ಪಂಚಾಯ್ತಿ ಗೌರಿಶಂಕರ ಟ್ರಸ್ಟ್‌ಗೆ ದಿನಾಂಕ 19 ಜನವರಿಯಂದು ನೀಡಿದ್ದ ಅನುಮತಿ ಬಗ್ಗೆಯೂ ಪಿಡಿಒ ತಕರಾರು ಎತ್ತಿದ್ದರು. ಟ್ರಸ್ಟ್ನಿಂದ ಷರತ್ತು ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು. ಇದಾದ ನಂತರವೇ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಹನುಮ ಧ್ವಜ ತೆರವು ಗೊಳಿಸಿದ್ದರು.
ಇದೆಲ್ಲದರ ಹಿಂದೆ ರಾಜಕಾರಣ..?
ಇಷ್ಟಾದ ಮೇಲೂ ಸೌಹಾರ್ದವಾಗಿಯೇ ಪರಿಸ್ಥಿತಿ ನಿಭಾಯಿಸುವ ಅವಕಾಶ ರಾಜಕಾರಣಿಗಳಿಗೆ ಇತ್ತು. ಆದರೆ ರಾತ್ರೋರಾತ್ರಿ ಪೊಲೀಸ್ ಬೆಟಾಲಿಯನ್ ಬಂದು, ಹನುಮ ಧ್ವಜ ಕೆಳಗಿಳಿಸಿ, ರಾಷ್ಟ್ರಧ್ವಜ ಹಾರಿಸಿ ವಿವಾದವನ್ನು ʻರಾಷ್ಟ್ರಧ್ವಜ ವರ್ಸಸ್ ಹನುಮ ಧ್ವಜʼ ಎಂದು ತಿರುಗಿಸಿಬಿಡುವ ಪ್ರಯತ್ನವೂ ನಡೆಯಿತು. ಈಗ ಅನುಭವಿಸುವಂತಾಗಿದೆ.



