ಕೇರಳದಲ್ಲಿ ಗ್ಯಾರಂಟಿ ಯೋಜನೆಗಳಿಲ್ಲ. ಬಸ್ ಫ್ರೀ, ಕರೆಂಟ್ ಫ್ರೀ, ಪ್ರತಿ ತಿಂಗಳೂ ಗೃಹಿಣಿಯರಿಗೆ ದುಡ್ಡು ಫ್ರೀ, ನಿರುದ್ಯೋಗಿಗಳಿಗೆ ಹಣ ಕೊಡುವಂತಹ ಯಾವುದೇ ಯೋಜನೆಗಳೂ ಇಲ್ಲ. ಆದರೂ.. ಕೇರಳ ಸರ್ಕಾರ ಸರ್ಕಾರಿ ನೌಕರರ ಸಂಬಳ, ಪಿಂಚಣಿ ಕೊಡುವುದಕ್ಕೂ ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಇತ್ತೀಚೆಗೆ ಆರ್ಥಿಕ ಸಂಕಷ್ಟದಿಂದ ಸುದ್ದಿಯಾಗಿದ್ದ ಶ್ರೀಲಂಕಾ ಹಾಗೂ ಪಾಕಿಸ್ತಾನ.. ವಿಶ್ವಬ್ಯಾಂಕ್ ಮುಂದೆ ಸಾಲಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದು ನಿಂತಿತ್ತು, ಐಎಂಎಫ್ ಸಾಲ ಕೊಡದೇ ಹೋದ್ರೆ ದೇಶ ನಡೆಸೋಕೆ ಸಾಧ್ಯವಿಲ್ಲ ಎಂಬಂತಹ ಸ್ಥಿತಿಗೆ ತಲುಪಿದ್ದವು.. ಇದೀಗ ಅಂತಹದೇ ಪರಿಸ್ಥಿತಿ ಕೇರಳದ್ದು. ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ ಕೇಂದ್ರ ಸರ್ಕಾರ ಸಾಲ ಕೊಡದೇ ಹೋದರೆ ಸಂಬಳ ಹಾಗೂ ಪಿಂಚಣಿ ಕೊಡಲು ದುಡ್ಡಿಲ್ಲ. ಸಂಪೂರ್ಣ ಸಾಕ್ಷರರ ನಾಡು ಎಂದು ಕರೆಸಿಕೊಳ್ಳುವ ಕೇರಳದ ಪರಿಸ್ಥಿತಿ ಇದು.
ಇದು ಸರಳವಾಗಿ ಅರ್ಥವಾಗಬೇಕೆಂದರೆ.. ನೀವು ಗೃಹ ಸಾಲಕ್ಕೋ, ಪರ್ಸನಲ್ ಲೋನಿಗೋ ಅಪ್ಲಿಕೇಷನ್ ಹಾಕಿದಾಗ.. ನಿಮ್ಮ ಸಂಬಳ, ತೆರಿಗೆ ಕಟ್ಟುವ ಲೆಕ್ಕ ಹಾಗೂ ಅಂದಾಜಿನ ಪ್ರಕಾರ ನೀವು ನಿಮ್ಮ ದುಡಿಮೆಯಲ್ಲಿ ಮನೆ/ಕುಟುಂಬದ ನಿರ್ವಹಣೆಗೆ ಮಾಡಿಕೊಳ್ಳುವ ವೆಚ್ಚವನ್ನೆಲ್ಲ ಲೆಕ್ಕ ಹಾಕಿಯೇ.. ನಿಮಗೆ ಎಷ್ಟು ಸಾಲ ಕೊಡಬಹುದು, ಎಷ್ಟು ಇಎಂಐ ಕಟ್ಟಬಹುದು ಎಂದು ಲೆಕ್ಕ ಹಾಕಿಯೇ ಬ್ಯಾಂಕಿನವರು ಕೊಡುತ್ತಾರೆ.
ಉದಾಹರಣೆಗೆ 50 ಸಾವಿರ ಸಂಬಳ ಪಡೆಯುತ್ತಿರುವ ಒಬ್ಬ ವ್ಯಕ್ತಿಗೆ ಪರ್ಸನಲ್ ಲೋನ್ ಎಂದು 10 ಲಕ್ಷ ಕೊಡುವುದಿಲ್ಲ. ಏಕೆಂದರೆ ಪರ್ಸನಲ್ ಲೋನ್ 10 ಲಕ್ಷಕ್ಕೆ 30 ಸಾವಿರದ ಲಿಮಿಟ್ ದಾಟುತ್ತದೆ. ಅಲ್ಲಿಗೆ 20 ಸಾವಿರಕ್ಕೆ ಉಳಿದವುಗಳನ್ನೆಲ್ಲ ನಿಭಾಯಿಸುವುದಕ್ಕೆ ಆಗುವುದಿಲ್ಲ ಎನ್ನುತ್ತದೆ ಬ್ಯಾಂಕು. ಕೇರಳದ್ದೂ ಅದೇ ಸ್ಥಿತಿ.
ಕೇರಳದ ಸಾಲದ ಪ್ರಮಾಣ ಇತ್ತೀಚೆಗೆ ಮೀತಿ ಮೀರಿ ಹೆಚ್ಚಾಗಿದ್ದು, ಸಾಲಕ್ಕೆ ಕೇಂದ್ರ ಸರ್ಕಾರ ಮಿತಿ ಹೇರಿತ್ತು. ಸಿಟ್ಟಿಗೆದ್ದ ಕೇರಳ ಸರ್ಕಾರ ನಿರ್ಬಂಧ ತೆರವು ಮಾಡುವಂತೆ ಕೇಂದ್ರದ ವಿರುದ್ಧ ಅರ್ಜಿ ಹಾಕಿತ್ತು. ರಾಜ್ಯವು ಸಾಲ ಪಡೆಯುವುದಕ್ಕೂ ನಿರ್ಬಂಧ ಹೇರಿರುವ ಕೇಂದ್ರ, ರಾಜ್ಯದ ವಿಶೇಷ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದು ಸಂವಿಧಾನ ನೀಡಿರುವ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ ಎಂದೆಲ್ಲ ವಾದ ಮಂಡಿಸಿತ್ತು.
ಇದಕ್ಕೆ ಉತ್ತರವಾಗಿ ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ಪ್ರಕಾರ ಕೇರಳ ಜಿಡಿಪಿಯ ಶೇ.3ರಷ್ಟು ಸಾಲ ಪಡೆಯಬಹುದು ಆದರೆ ಕೇರಳ ಸರ್ಕಾರದ ವೆಚ್ಚ ನೋಡಿದರೆ ಇಷ್ಟು ಸಾಲದಲ್ಲಿ ಹಣಕಾಸು ನಿರ್ವಹಣೆ ಸಾಧ್ಯವಿಲ್ಲ.. 2023-24ರಲ್ಲಿ 21,852 ಕೋಟಿ ಸಾಲದ ಮಿತಿ ನೀಡಲಾಗಿತ್ತು.. ಮೊದಲ 6 ತಿಂಗಳಲ್ಲೇ ಕೇರಳ ಸರ್ಕಾರ ತನ್ನ ಸಾಲದ ಮಿತಿ ಮೀರಿತ್ತು.. ಈ ವರ್ಷ 13,608 ಕೋಟಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ.. ಕೇರಳ ಸರ್ಕಾರ 26 ಸಾವಿರ ಕೋಟಿ ಸಾಲ ಪಡೆಯಲು ಅನುಮತಿ ಕೇಳುತ್ತಿದೆ ಇದು ಸಾಧ್ಯವಿಲ್ಲ ಎಂದು ವಾದ ಮಂಡಿಸಿತ್ತು.
ವಿಶೇಷ ಎಂದರೆ.. ಕೇರಳ ಸರ್ಕಾರ ರಾಜ್ಯದ ಒಟ್ಟು ಜಿಡಿಪಿಯ ಶೇ.44ರಷ್ಟು ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದೆ. ಶೇ.25ರ ಮಿತಿಯನ್ನು ದಾಟಿ ಯಾವುದೋ ಕಾಲವಾಗಿದೆ. ಅಲ್ಲದೆ, ಸಾಲವಾಗಿ ಪಡೆಯುವುದಕ್ಕೆ ಇದ್ದ ಮಿತಿಯನ್ನೂ ಆರು ತಿಂಗಳಲ್ಲೇ ಮೀರಿದೆ. 15ನೇ ಹಣಕಾಸು ಆಯೋಗದ ಪ್ರಕಾರ ಕೇರಳ ಸರ್ಕಾರದ ಜಿಡಿಪಿ ಸುಮಾರು 9.78 ಲಕ್ಷ ಕೋಟಿ. (ಇದು ಬಜೆಟ್ ಅಲ್ಲ, ಜಿಡಿಪಿ) ಕೇರಳ ಸರ್ಕಾರ ಶೇ.25ರಷ್ಟು ಅಂದರೆ. 2 ಲಕ್ಷ ಕೋಟಿ 44 ಸಾವಿರ ಸಾಲ ಪಡೆಯವುದಕ್ಕೆ ಅವಕಾಶ ಇದೆ. ಆದ್ರೆ ಕೇರಳ ಸರ್ಕಾರ ಈಗಾಗಲೇ 4 ಲಕ್ಷದ 29 ಸಾವಿರ ಕೋಟಿ ಸಾಲ ಮಾಡಿದೆ. ಸದ್ಯಕ್ಕೆ ಕೇಂದ್ರ 5 ಸಾವಿರ ಕೋಟಿ ಸಾಲ ಪಡೆಯುವುದಕ್ಕೆ ಅನುಮತಿ ನೀಡುವುದಕ್ಕೆ ಸಿದ್ಧವಿದ್ದರೂ.. ಕೇರಳ ಸರ್ಕಾರ 26 ಸಾವಿರ ಕೋಟಿ ಸಾಲ ಪಡೆಯುವುದಕ್ಕೆ ಪರ್ಮಿಷನ್ ಕೊಡಿ ಎಂದು ವಾದ ಮಂಡಿಸುತ್ತಿದೆ.
ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ಕೇರಳದ ಇಂದಿನ ಸ್ಥಿತಿಗೆ ಹಣಕಾಸು ನಿರ್ವಹಣೆಯಲ್ಲಿನ ಅಶಿಸ್ತೇ ಕಾರಣ, ಆರ್ಥಿಕ ಅಶಿಸ್ತಿನಿಂದಾಗಿ ನೀವೇ ಈ ಸಮಸ್ಯೆ ಸೃಷ್ಟಿಸಿಕೊಂಡಿದ್ದೀರಿ.. ಕೇಂದ್ರ ಸರ್ಕಾರದಿಂದ ಆದ ಸಮಸ್ಯೆ ಎಂದು ಪರಿಹಾರ ನೀಡಲಾಗದು. ಇಂಥ ಪ್ರಕರಣಗಳಲ್ಲಿ ನಾವು ಮಧ್ಯಂತರ ಪರಿಹಾರ ನೀಡುತ್ತಾ ಹೋದಲ್ಲಿ.. ರಾಜ್ಯಗಳಿಂದ ಹೊಸ ಯೋಜನೆ ಘೋಷಿಸಲು ಹೊಸ ಸಾಲಕ್ಕೆ ಬೇಡಿಕೆ ಸೃಷ್ಟಿಯಾಗಲಿದೆ. ‘ಹೆಚ್ಚುವರಿ ಸಾಲಕ್ಕೆ ಅನುಮತಿ ಕೊಟ್ಟರೆ ಮತ್ತಷ್ಟು ಸಾಲಕ್ಕೆ ಕಾರಣವಾಗುತ್ತೆ. ಈಗಾಗಲೇ ಕೇಂದ್ರ ಸರ್ಕಾರದಿಂದ ನಿಮಗೆ ಸಾಕಷ್ಟು ನೆರವು ಸಿಕ್ಕಿದೆ.. ಹೀಗಾಗಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಲಾಗದು ಎಂದು ಛೀಮಾರಿ ಹಾಕಿದೆ. ಅಲ್ಲದೆ ಈ ಪ್ರಕರಣ ಸಂವಿಧಾನದ 145ನೇ ವಿಧಿಯಡಿ ಬರುತ್ತದೆ.. ಈ ಪ್ರಕರಣವನ್ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಿ ನ್ಯಾ. ಸೂರ್ಯಕಾಂತ್, ವಿಶ್ವನಾಥನ್ ಪೀಠ ಆದೇಶಿಸಿದೆ.
ಇಷ್ಟೆಲ್ಲವುಗಳಿಗೆ ನಿಜವಾದ ಕಾರಣ ಏನಿರಬಹುದು ಎಂದರೆ.. ಕೇರಳ ಸರ್ಕಾರ ಸಂಬಳ, ಸಾರಿಗೆಗಳಿಗಾಗಿಯೇ ಒಟ್ಟು ಬಜೆಟ್ಟಿನ ಶೇ.78ರಷ್ಟು ಹಣ ವಿನಿಯೋಗಿಸುತ್ತಿದೆ. ಅನಗತ್ಯವಾಗಿ ಪ್ರತಿ ವರ್ಷ ಶೇ.15ರ ಸರಾಸರಿಯಲ್ಲಿ ಸಂಬಳ ಹೆಚ್ಚಿಸುತ್ತಿದೆ. ಪೆನ್ʻಷನ್ ಕೂಡಾ ಏರುತ್ತಿದೆ. ಆದರೆ.. ಅದಕ್ಕೆ ತಕ್ಕಂತೆ ಆದಾಯಗಳಿಲ್ಲ. ಜೊತೆಗೆ ಇತ್ತೀಚೆಗೆ ಪದೇ ಪದೇ ಹಿಂದೂಗಳ ಮೇಲಾಗುತ್ತಿರುವ ದಾಳಿಗಳಿಂದಾಗಿ ಪ್ರವಾಸೋದ್ಯಮವೂ ಕುಂಠಿತವಾಗಿದೆ. ಜನ ಹೋಗುವುದು ಕಡಿಮೆಯಾಗುತ್ತಿದೆ.



